ADVERTISEMENT

ಗೋಡ್ಸೆ ಪ‍್ರತಿಮೆ ಮುಂದೆ ಬಿಜೆಪಿ ಧರಣಿ ನಡೆಸಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 21:11 IST
Last Updated 21 ಜುಲೈ 2023, 21:11 IST
   

ಬೆಂಗಳೂರು: ‘ಬೇಜವಾಬ್ದಾರಿ, ಸುಳ್ಳುಗಾರ ಬಿಜೆಪಿ ಶಾಸಕರು ಗಾಂಧಿ ಪ್ರತಿಮೆ ಬದಲು ಗೋಡ್ಸೆ ಪ್ರತಿಮೆ ಮುಂದೆ ಧರಣಿ ನಡೆಸಲಿ. ಎರಡು ವರ್ಷ ಶುಚಿ ಯೋಜನೆಯ ಕಿಟ್‌ ನೀಡದ ನೀಚರು ಅವರು...’

ವಿಧಾನಪರಿಷತ್‌ನಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಶುಕ್ರವಾರ ಸರ್ಕಾರದ ಪರವಾಗಿ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ ಪರಿ ಇದು.

ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಉತ್ತರ ನೀಡಿದ ಸಿದ್ದರಾಮಯ್ಯ, ಬಹುತೇಕ ಸಮಯವನ್ನು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಗೆ ಮೀಸಲಿಟ್ಟರು. ಕಲಾಪ ಬಹಿಷ್ಕರಿಸಿದ ಬಿಜೆಪಿ, ಜೆಡಿಎಸ್‌ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದಲ್ಲಿನ ಹಣಕಾಸು ಪರಿಸ್ಥಿತಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ‘ಗ್ಯಾರಂಟಿ’ ಯೋಜನೆಗಳಿಗೆ ಮೀಸಲಿಟ್ಟ ಅನುದಾನ ಮತ್ತು ಸಂಪನ್ಮೂಲ ಕ್ರೋಡಿಕರಣಕ್ಕೆ ಕೈಗೊಂಡ ಕ್ರಮಗಳನ್ನು ವಿವರವಾಗಿ ಬಿಚ್ಚಿಟ್ಟರು.

ADVERTISEMENT

‘ವಿರೋಧ ಪಕ್ಷಗಳ ಗೈರು ಹಾಜರಿಯಲ್ಲಿ ಉತ್ತರ ನೀಡುತ್ತಿರುವುದು ಇದೇ ಮೊದಲು. ಬಿಜೆಪಿಯವರ ಈ ವರ್ತನೆ ಉದ್ಧಟತನದ ಪರಮಾವಧಿ. ಸಾಮರಸ್ಯ ಹಾಳು ಮಾಡುವುದು ಮತ್ತು ಬೆಂಕಿ ಹಚ್ಚುವುದೇ ಬಿಜೆಪಿಯವರ ಕೆಲಸ. ಇಂತವರಿಗೆ ಶಾಂತಿ ಮತ್ತು ಸತ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸುವ ನೈತಿಕತೆಯೂ ಇಲ್ಲ’ ಎಂದು ಕಿಡಿಕಾರಿದರು.

‘ದೇಶದ ಒಟ್ಟು ಸಾಲ 2014–15ರಲ್ಲಿ ₹53.11 ಲಕ್ಷ ಕೋಟಿ ಇತ್ತು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ₹170 ಲಕ್ಷ ಕೋಟಿಗೆ ಹೆಚ್ಚಿದೆ. ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಸಾಲ ಮಾಡಿದ್ದೇ ಮೋದಿ ಸಾಧನೆ. ದೇಶವನ್ನು ಸಾಲದಲ್ಲಿ ಮುಳುಗಿಸಿದ್ದೇ ಮೋದಿ ಅವರ ಕೊಡುಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಸರ್ಕಾರ ಜನರ ಜೇಬಿಗೆ ದುಡ್ಡು ಹಾಕಿದರೆ, ಕೇಂದ್ರ ಸರ್ಕಾರ ಬಡವರ ಜೇಬಿನಿಂದ ಕಿತ್ತುಕೊಳ್ಳುತ್ತದೆ. ಕೇಂದ್ರ ಸರ್ಕಾರವು ಕಾರ್ಪೋರೇಟ್‌ ಸಂಸ್ಥೆಗಳಿಗೆ ವಿಧಿಸುವ ತೆರಿಗೆಯನ್ನು ಶೇ 30ರಿಂದ ಶೇ 22ಕ್ಕೆ ಇಳಿಸಿತು. ಇದರಿಂದ ಪ್ರತಿ ವರ್ಷ ಕೇಂದ್ರಕ್ಕೆ ₹2 ಲಕ್ಷ ಕೋಟಿ ನಷ್ಟವಾಗುತ್ತಿದೆ. ಜತೆಗೆ ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ಉದ್ಯಮಿಗಳ ₹12 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಮೋದಿ ಅವರ ಇಂತಹ ಕ್ರಮಗಳಿಂದ ದೇಶ ಆರ್ಥಿಕವಾಗಿ ದಿವಾಳಿಯಾಗುತ್ತಿದೆ’ ಎಂದರು.

‘ಕರ್ನಾಟಕದಲ್ಲಿ 2018ರ ಮಾರ್ಚ್‌ವರೆಗೆ ₹2.45 ಲಕ್ಷ ಕೋಟಿ ಸಾಲವಿತ್ತು. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ₹5.71 ಲಕ್ಷ ಕೋಟಿಗೆ ಹೆಚ್ಚಳವಾಗಲಿದ್ದು, ಬಿಜೆಪಿ ಸರ್ಕಾರ ದುಪ್ಪಟ್ಟು ಸಾಲ ಮಾಡಿದೆ. ಈ ವರ್ಷ ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರಕ್ಕೆ ₹4 ಲಕ್ಷ ಕೋಟಿ ನೀಡಲಾಗುತ್ತಿದೆ. ಅದರಲ್ಲಿ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೇರಿ ಕೇವಲ ₹50,257 ಕೋಟಿ ರಾಜ್ಯಕ್ಕೆ ದೊರೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.