ಬೆಂಗಳೂರು: ಮಧ್ಯಾಹ್ನ ಊಟದ ಬಳಿಕ ಶಾಸಕರಿಗೆ ನಿದ್ರೆ ಬಂದರೆ ಮೊಗಸಾಲೆಗೆ ಬಂದು ಕಿರು ನಿದ್ರೆ ಮಾಡಲು ವಿಶೇಷ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ವಿಧಾನಸಭೆಯಲ್ಲಿ ಶುಕ್ರವಾರ ಈ ವಿಷಯ ತಿಳಿಸಿದರು.
‘ಶಾಸಕರು ಕಲಾಪಕ್ಕೆ ಬೇಗ ಬರಲಿ ಎಂದು ಬೆಳಗ್ಗಿನ ಉಪಹಾರ, ಮಧ್ಯಾಹ್ನ ಊಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ನಿದ್ರೆ ಬರುತ್ತದೆ ಎಂದು ಕೆಲವರು ಶಾಸಕರ ಭವನಕ್ಕೆ ಹೋಗುತ್ತಾರೆ. ಮತ್ತೆ ಕಲಾಪಕ್ಕೆ ಬರುವುದೇ ಇಲ್ಲ. ಅದನ್ನು ತಪ್ಪಿಸಲು, ಮೊಗಸಾಲೆಯಲ್ಲೇ ಕಿರುನಿದ್ರೆ ಮಾಡಲು ವಿಶೇಷ ಆಸನ ವ್ಯವಸ್ಥೆ ಮಾಡಿದ್ದೇನೆ. ಅಲ್ಲಿ ಕೂತು ನಿದ್ರೆ ಮಾಡಬಹುದು’ ಎಂದು ಖಾದರ್ ತಿಳಿಸಿದರು.
ಸಚಿವರು ಮತ್ತು ಶಾಸಕರ ಆಪ್ತ ಸಹಾಯಕರು ಮೊಗಸಾಲೆಗೆ ಬರಬಾರದು. ಇದರಿಂದ ಅನಗತ್ಯ ಸಂದಣಿ ಹೆಚ್ಚಾಗುತ್ತದೆ. ಯಾವುದೇ ಶಾಸಕರು ತಮ್ಮ ಆಪ್ತ ಸಿಬ್ಬಂದಿಯನ್ನು ಒಳಗೆ ಕರೆದುಕೊಂಡು ಬರಲು ಮಾರ್ಷಲ್‌ಗಳ ಮೇಲೆ ಒತ್ತಡ ಹೇರುವುದು ಮತ್ತು ದಬಾಯಿಸುವುದನ್ನು ಮಾಡಬಾರದು. ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಸದನದ ಒಳಗೆ ಘೋಷಣಾ ಫಲಕಗಳನ್ನು ಪ್ರದರ್ಶಿಸಬಾರದು. ಆಡಳಿತ ಮತ್ತು ವಿರೋಧ ಪಕ್ಷಗಳು ಅಂತ್ಯ ಹಾಡಬೇಕು ಎಂದು ಖಾದರ್ ಹೇಳಿದರು.
‘ಕೇವಲ ಶಾಸಕರಿಗಾಗಿ’ ಎಂದು ಚೀಟಿ ಅಂಟಿಸಿದ್ದ ಈ ವಿಶೇಷ ಆಸನದ ಮೇಲೆ ಕೂತು ನಿದ್ರೆ ಹೋಗುವ ಸಾಹಸವನ್ನು ಮೊದಲ ದಿನ ಯಾರೂ ಮಾಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.