ADVERTISEMENT

ಅಶೋಕ ಅವರೇ, ವಿಪಕ್ಷ ನಾಯಕನ ಸ್ಥಾನಕ್ಕೆ ಯಾರಿಗೆ ಬಕೆಟ್ ಹಿಡಿದಿದ್ದೀರಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2023, 6:41 IST
Last Updated 9 ಡಿಸೆಂಬರ್ 2023, 6:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಾಯಕತ್ವ ಹಾಗೂ ಪ್ರತಿಷ್ಠೆಗಾಗಿ ಬಿಜೆಪಿ ನಾಯಕರ ಮಧ್ಯೆ ನಡೆಯುತ್ತಿರುವ ಆಂತರಿಕ ತಿಕ್ಕಾಟವು ಆಡಳಿತಾರೂಢ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದೆ.

ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿಕೆ ಪ್ರಸ್ತಾಪಿಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್, ‘ಆರ್‌.ಅಶೋಕ ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್ ಹಿಡಿದಿದ್ದೀರಿ? ಯಾವ ಬ್ರ್ಯಾಂಡ್ ಬಕೆಟ್ ಹಿಡಿದಿದ್ದೀರಿ? ಯಾರಿಗೆ ಬಕೆಟ್ ಹಿಡಿದು ನಿಮ್ಮ ಅಕ್ರಮಗಳನ್ನು ಮುಚ್ಚಿಕೊಂಡಿದ್ದೀರಿ’ ಎಂದು ಟೀಕಿಸಿದೆ.

ADVERTISEMENT

ಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು... ಭ್ರಷ್ಟ ಜನತಾ ಪಾರ್ಟಿ, ಬ್ಲಾಕ್ಮೇಲ್ ಜನತಾ ಪಾರ್ಟಿ, ಬ್ಲೂ ಬಾಯ್ಸ್ ಜನತಾ ಪಾರ್ಟಿ, ಈಗ ಹೊಸದಾಗಿ ‘ಬಕೆಟ್ ಜನತಾ ಪಾರ್ಟಿ’ ಸೇರ್ಪಡೆಯಾಗಿದೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಗುರುವಾರ ಸದನದಲ್ಲಿ ಎಸ್.ಆರ್. ವಿಶ್ವನಾಥ್‌ ಅವರು ತಮ್ಮ ನಾಯಕ ಅಶೋಕ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿ ಕೂಗಾಡಿದಿದ್ದರು. ಅಶೋಕ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡರೂ, ಮುಖ ಕಳಾಹೀನವಾಗಿತ್ತು.

ವಿಶ್ವನಾಥ್ ಹೇಳಿದ್ದೇನು?

ಸಭಾತ್ಯಾಗ ಮಾಡಿ ಅಶೋಕ ಹೊರಬರುತ್ತಿದ್ದಂತೆ ವಿಜಯೇಂದ್ರ ಜತೆ ಧುಮುಗುಡುತ್ತಲೇ ಹೊರಬಂದ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್, ‘ಬಕೆಟ್, ಬಕೆಟ್‌’ ಎಂದು ಹೇಳುತ್ತಲೇ ಇದ್ದರು.

ಮೊದಲೇ ಹೊರಬಂದಿದ್ದ ಅಶೋಕ, ಸಿ.ಸಿ. ಪಾಟೀಲ, ಆರಗ ಜ್ಞಾನೇಂದ್ರ ಮತ್ತಿತರರು ವಿರೋಧ ಪಕ್ಷದ ಮೊಗಸಾಲೆಯ ಕೊಠಡಿಯಲ್ಲಿ ಇದ್ದರು.

ಬಾಗಿಲಿನಲ್ಲಿ ನಿಂತ ವಿಶ್ವನಾಥ್‌, ‘ಇಂತಹ . . . . ಮಕ್ಕಳನ್ನು ನಾಯಕರಾಗಿ ಮಾಡಿದರೆ ಪಕ್ಷ ಮುಳುಗಿ ಹೋಗದೇ ಇನ್ನೇನಾಗುತ್ತದೆ?. ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವರು ಇನ್ನೇನು ಮಾಡುತ್ತಾರೆ’ ಎಂದು ಏರಿದ ಧ್ವನಿಯಲ್ಲಿ ಕೂಗಿದ್ದರು.

‘ಹೊಂದಾಣಿಕೆ ರಾಜಕಾರಣ (ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌) ಮಾಡಿಕೊಂಡೇ ಬಂದು ಅಧಿಕಾರ ಹಿಡಿದರು. ಇದಲ್ಲದೇ ಇನ್ನೇನು ಮಾಡಲು ಸಾಧ್ಯ’ ಎಂದು ಎಗರಾಡಿದರು. ಕೆಲವು ಶಾಸಕರು ಅವರನ್ನು ಅಲ್ಲಿಂದ ಕರೆದೊಯ್ದರು. ಕೆಲವು ಶಾಸಕರು ತಮ್ಮ ಪಾಡಿಗೆ ಮೊಗಸಾಲೆಯಲ್ಲಿ ಕುಳಿತರೆ, ಮತ್ತಷ್ಟು ಮಂದಿ ವಿಜಯೇಂದ್ರ ಸುತ್ತ ಕುಳಿತಿದ್ದರು.

‘ವಿಜಯೇಂದ್ರ ಅವರಿಗೆ ಹೋರಾಟವನ್ನು ಸಭಾತ್ಯಾಗಕ್ಕೆ ಸೀಮಿತಗೊಳಿಸುವುದು ಇಷ್ಟವಿರಲಿಲ್ಲ. ಇನ್ನೊಂದು ಹಂತಕ್ಕೆ ಹೋರಾಟ ತೆಗೆದುಕೊಂಡು ಹೋಗಬೇಕು ಎಂಬುದಿತ್ತು’ ಎಂದು ಶಾಸಕರೊಬ್ಬರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.