ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್ಎಸ್) ₹1,500 ಕೋಟಿ ನಿಧಿಯ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ, ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆ ತಿದ್ದುಪಡಿಗೆ ಪ್ರಸ್ತಾವ ಸಿದ್ಧಪಡಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ರವಾನಿಸಿದ್ದು, ಇದರ ಪ್ರತಿ ‘ಪ್ರಜಾವಾಣಿ’ಗೆ ದೊರೆತಿದೆ.
ಸಚಿವರ ಟಿಪ್ಪಣಿ ಪ್ರತಿಯ ಪ್ರಕಾರ, ‘ವಿಶ್ವವಿದ್ಯಾಲಯದ ನಿಧಿ ಬಳಕೆ, ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಬಗ್ಗೆ ಆರ್‌ಜಿಯುಎಚ್‌ಎಸ್ ಕಾಯ್ದೆಯ ಅಧ್ಯಾಯ 6ರಲ್ಲಿ ವಿವರಿಸಲಾಗಿದೆ. ನಿಧಿ ಬಳಕೆಗೆ ರಾಜ್ಯ ಸರ್ಕಾರ ನೀಡುವ ನಿರ್ದೇಶನಗಳೇ ಅಂತಿಮ. ಆದಾಗ್ಯೂ, ನಿಧಿಯ ಬಳಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮಿತಿ ವಿಧಿಸಿದರೆ, ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕಾಗುತ್ತದೆ. ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಸೌಕರ್ಯಗಳನ್ನು ವಿಸ್ತರಿಸುವ ಹಿತದೃಷ್ಟಿಯಿಂದ ಈ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅವಕಾಶ ಸಿಗುವಂತೆ ನೋಡಿಕೊಳ್ಳಬೇಕಾಗುತ್ತದೆ’ ಎಂದು ಸಚಿವರು ತಿಳಿಸಿದ್ದಾರೆ. ಈ ಸಲುವಾಗಿ ಚಳಿಗಾಲದ ಅಧಿವೇಶನದಲ್ಲೇ ಈ ಕಾಯ್ದೆಗೆ ತಿದ್ದುಪಡಿ ತರಲು ತಯಾರಿ ನಡೆಸುವಂತೆ ಅಧಿಕಾರಿಗಳಿಗೆಸೂಚಿಸಿದ್ದಾರೆ.
ನಿಧಿಯನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುವ ಈ ಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಮತ್ತು ಸಿಂಡಿಕೇಟ್ ಸದಸ್ಯರಿಂದ ಅಸಮಾಧಾನ ವ್ಯಕ್ತವಾಗಿದೆ.
‘ಹಲವಾರು ವರ್ಷಗಳಿಂದ ಶುಲ್ಕ ರೂಪದಲ್ಲಿವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲಾಗಿದೆ. ಸರ್ಕಾರವು ಅದನ್ನು ಆರೋಗ್ಯ ಸೇವೆಗಳನ್ನು ಕಲ್ಪಿಸಲು ಹೇಗೆ ಖರ್ಚು ಮಾಡುತ್ತದೆ’ ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಪ್ರಶ್ನಿಸಿದರು.
‘ವಿಶ್ವವಿದ್ಯಾಲಯದಲ್ಲಿನ ಈ ಹಣ ಸಂಪೂರ್ಣವಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಸುಧಾರಿಸಲು ಇದನ್ನು ಬಳಸಿಕೊಳ್ಳಬೇಕು’ ಎಂದು ಆರ್‌ಜಿಯುಎಚ್‌ಎಸ್‌ನ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಅಭಿಪ್ರಾಯಪಟ್ಟರು.
‘ಶಾಶ್ವತ ಪ್ರಾಂಗಣವನ್ನು ಹೊಂದಲು ಆರ್‌ಜಿಎಚ್‌ಎಸ್‌ಯುಗೆ ಇದುವರೆಗೂ ಸಾಧ್ಯವಾಗಿಲ್ಲ. ಇದರತ್ತ ಗಮನ ಹರಿಸುವ ಬದಲು, ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ತರವಲ್ಲ’ ಎಂದು ಸಿಂಡಿಕೇಟ್ ಇನ್ನೊಬ್ಬ ಸದಸ್ಯರೊಬ್ಬರು ತಿಳಿಸಿದರು.
ಈ ಪ್ರಸ್ತಾವ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
‘ಆ ಬಳಿಕವೂ ಸರ್ಕಾರ ಈ ಪ್ರಸ್ತಾವ ಕೈಬಿಡದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ’ ಎಂದು ಸಿಂಡಿಕೇಟ್‌ನ ಸದಸ್ಯರು ತಿಳಿಸಿದರು.
‘ಸರ್ಕಾರದಿಂದ ನಮಗೆ ಪತ್ರ ಬಂದಿದೆ. ನಿರ್ಧಾರ ತಳೆಯುವ ಸಲುವಾಗಿ ಇದನ್ನು ಸಿಂಡಿಕೇಟ್ ಮುಂದೆ ಮಂಡಿಸಲಿದ್ದೇವೆ’ ಎಂದು ಹಂಗಾಮಿ ಕುಲಪತಿ ಡಾ.ಎಸ್.ಎಂ.ಜಯಕರ್ ತಿಳಿಸಿದರು.
ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲೂ ನಿಧಿ ಬಳಿಕೆಗೆ ಪ್ರಯತ್ನ ನಡೆದಿತ್ತು. ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಅದಕ್ಕೆ ತಡೆ ಬಿದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.