ADVERTISEMENT

ಬಜರಂಗ ದಳದ ಕಾರ್ಯಕರ್ತನ ಹತ್ಯೆಗೆ ಆಕ್ರೋಶ; ಶಿವಮೊಗ್ಗ ಉದ್ವಿಗ್ನ

ಕೊಲೆಯಾದ ಬಜರಂಗ ದಳದ ಕಾರ್ಯಕರ್ತ ಹರ್ಷ ಅಂತ್ಯ ಸಂಸ್ಕಾರಕ್ಕೂ ಮುನ್ನ ಅರಾಜಕತೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 20:30 IST
Last Updated 21 ಫೆಬ್ರುವರಿ 2022, 20:30 IST
ಶಿವಮೊಗ್ಗ ನಗರದಲ್ಲಿ ಸೋಮವಾರ ಕಲ್ಲು ತೂರಾಟ ನಡೆಸುತ್ತಿದ್ದವರನ್ನು ಪೊಲೀಸ್ ಅಧಿಕಾರಿಯೊಬ್ಬರು ತಡೆಯಲು ಯತ್ನಿಸಿದರು –ಪಿಟಿಐ ಚಿತ್ರ
ಶಿವಮೊಗ್ಗ ನಗರದಲ್ಲಿ ಸೋಮವಾರ ಕಲ್ಲು ತೂರಾಟ ನಡೆಸುತ್ತಿದ್ದವರನ್ನು ಪೊಲೀಸ್ ಅಧಿಕಾರಿಯೊಬ್ಬರು ತಡೆಯಲು ಯತ್ನಿಸಿದರು –ಪಿಟಿಐ ಚಿತ್ರ   

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ಪಾರ್ಥಿವ ಶರೀರದ ಮೆರವಣಿಗೆಯು ಹಿಂಸಾತ್ಮಕ ಘಟನೆಗಳಿಗೆ ಆಸ್ಪದವಾಯಿತು. ಉದ್ರಿಕ್ತ ಯುವಕರು ಕಲ್ಲುತೂರಾಟ, ದಾಂದಲೆಯಲ್ಲಿ ತೊಡಗಿದ್ದು, ಒಂದೆರಡು ಕಡೆ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸರು ಗುಂಪು ಚದುರಿಸಲು ಲಾಠಿಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿದರು.

ಯುವಕರು ದಾರಿಯುದ್ದಕ್ಕೂ ನಡೆಸಿದ ದಾಂದಲೆಗೆ ಇಡೀ ನಗರದ ಜನರು ಪರಿತಪಿಸಿದರು.ಕೆಲವು ಕಡೆ ಪೊಲೀಸರ ಎದುರಲ್ಲೇ ಲೂಟಿ ನಡೆಯುತ್ತಿದ್ದರೂ ತಮಗೆ ಸಂಬಂಧವೇ ಇಲ್ಲದಂತೆ ನಿರ್ಲಿಪ್ತರಾದರು. ಗಲಾಟೆ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಕ್ಯಾಮೆರಾ, ಮೊಬೈಲ್‌ಗಳನ್ನು ದುಷ್ಕರ್ಮಿಗಳು ಗುರಿಯಾಗಿಸಿದರು. ನೆಲಕ್ಕೆ ಹಾಕಿ ತುಳಿದರು. ಹಲವರ ಮೇಲೆ ಹಲ್ಲೆ ನಡೆಸಿದರು.

ಶಿವಮೊಗ್ಗದಲ್ಲಿ ಆತಂಕದ ಸ್ಥಿತಿಯು ಮನೆ ಮಾಡಿತು. ಪಾರ್ಥಿವ ಶರೀರದ ಮೆರವಣಿಗೆಯು ಗಾಂಧಿ ಬಜಾರ್ ಮಸೀದಿ ಬಳಿ ಬಂದಾಗ ಉದ್ರಿಕ್ತರ ಗುಂಪು ಮಸೀದಿಗಳ ಮೇಲೆ ಕಲ್ಲು ತೂರಾಟಕ್ಕೆ ಮುಂದಾಯಿತು. ಕ್ಷಣ ಮಾತ್ರದಲ್ಲಿ ಹಲವು ಬೀದಿಗಳು ಹಿಂಸಾ ಕೃತ್ಯಗಳಿಗೆ ಸಾಕ್ಷಿಯಾದವು.

ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.

ಸೀಗೆಹಟ್ಟಿಯ ಪೆಟ್ರೋಲ್‌ ಬಂಕ್‌ ಬಳಿ ಭಾನುವಾರ ರಾತ್ರಿ ಬಜರಂಗ ದಳದ ಕಾರ್ಯಕರ್ತ ಹರ್ಷ (28) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸೋಮವಾರ ಬೆಳಿಗ್ಗೆ ಶವಾಗಾರದ ಬಳಿ ಗುಂಪುಗೂಡಿದ ಹಲವರು ದುಷ್ಕರ್ಮಿಗಳ ಪತ್ತೆ, ಕಠಿಣ ಕ್ರಮಕ್ಕೆ ಆಗ್ರಹಪಡಿಸಿದರು.

ಆಕ್ರೋಶವು ವಿವಿಧೆಡೆ ಪ್ರತಿಧ್ವನಿಸಿತು. ಕೆಲವು ಬಡಾವಣೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಮಧ್ಯೆ ವಿಶ್ವಹಿಂದೂ ಪರಿಷತ್, ಬಜರಂಗ ದಳ ಒಳಗೊಂಡಂತೆ ವಿವಿಧ ಸಂಘಟನೆಗಳ ಮುಖಂಡರು ಪಾರ್ಥಿವ ಶರೀರದ ಮೆರವಣಿಗೆ ನಡೆಸಲು ಪಟ್ಟುಹಿಡಿದರು. ಅವರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಸೀಗೆಹಟ್ಟಿಯಿಂದ ವಿದ್ಯಾನಗರದ ರೋಟರಿ ಚಿತಾಗಾರದವರೆಗೂ ಮೆರವಣಿಗೆ ನಡೆಸಲು ಸಮ್ಮತಿಸಿತು.

ಸಿದ್ದಯ್ಯ ರಸ್ತೆಗೆ ಮೆರವಣಿಗೆ ಬರುತ್ತಿದ್ದಂತೆ ಉದ್ರಿಕ್ತರು ಅಂಗಡಿಗಳು, ಮನೆಗಳ ಮೇಲೆ ಕಲ್ಲುತೂರಾಟ ನಡೆಸಿದರು. ತಳ್ಳುಗಾಡಿಗಳು, ಹಣ್ಣಿನ ಅಂಗಡಿಗಳು ಆಕ್ರೋಶಕ್ಕೆ ಗುರಿಯಾದವು. ವಾಣಿಜ್ಯ ಮಳಿಗೆಗಳು, ಮನೆಗಳ ಕಿಟಕಿ–ಗಾಜುಗಳನ್ನು ಪುಡಿಗಟ್ಟಿದರು. ನೂರಕ್ಕೂ ಹೆಚ್ಚು ಬೈಕ್‌ಗಳು, ಕೆಲವು ಆಟೊರಿಕ್ಷಾ, ಕಾರುಗಳು ಬೆಂಕಿಗೆ ಆಹುತಿಯಾದವು.

ಕೈಗೆ ಸಿಕ್ಕ ವಸ್ತುಗಳನ್ನು ಮನಸೋಇಚ್ಛೆ ಎಳೆದಾಡಿ ಬೀದಿಗೆ ಬಿಸಾಡಿದರು. ಮೆರವಣಿಗೆಯತ್ತ ಬೇರೆ ಬೀದಿಗಳಿಂದ ಕಲ್ಲುಗಳು ತೂರಿಬಂದವು. ಪ್ರತಿಯಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರೂ ಕಲ್ಲು ತೂರಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎಂಬ ಸ್ಥಿತಿ ಕಂಡುಬಂದಿದ್ದು, ಗುಂಪು ಚದುರಿಸಲು ಗಾಳಿಯಲ್ಲಿ ಗುಂಡುಹಾರಿಸಿದರು. ಅಶ್ರುವಾಯು ಪ್ರಯೋಗಿಸಿದರು.

ನಿಷೇಧಾಜ್ಞೆ ಜಾರಿ,ಶಾಲಾ, ಕಾಲೇಜುಗಳಿಗೆ ಇಂದು ರಜೆ:

ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ವ್ಯಾಪ್ತಿಗೆ ಅನ್ವಯಿಸಿ ಮಂಗಳವಾರ ರಾತ್ರಿಯವರೆಗೂ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಫೆ.22ರಂದೂ ರಜೆ ಮುಂದುವರಿಸಲಾಗಿದೆ. ಹಾಗೆಯೇ ನಿಷೇಧಾಜ್ಞೆಯನ್ನೂ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಮಾಹಿತಿ ನೀಡಿದರು.

ನ್ಯಾಯಸಮ್ಮತ ತನಿಖೆ: ಸಿಎಂ ಬೊಮ್ಮಾಯಿ

ಬೆಂಗಳೂರು: ‘ಶಿವಮೊಗ್ಗದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್‌ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹತ್ಯೆ ಕುರಿತಂತೆ ನ್ಯಾಯಸಮ್ಮತ ತನಿಖೆ ನಡೆಸಿ, ತಪ್ಪಿಸತ್ಥರ ಮೇಲೆ ಕ್ರಮಜರುಗಿಸಲಾಗುವುದು. ಯಾರೂ ಉದ್ವೇಗಕ್ಕೆ ಒಳಗಾಗಬಾರದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು ‘ಭಾನುವಾರ ರಾತ್ರಿ ಹರ್ಷ ಎಂಬ ಯುವಕನ ಹತ್ಯೆಯಾಗಿದೆ. ಅವನ ಹೆಸರೇ ‘ಹಿಂದೂ ಹರ್ಷ’ ಎಂದು. ಆತ ನಮ್ಮ ಸಂಘಟನೆಯ ಕಾರ್ಯಕರ್ತ’ ಎಂದರು.

ಹೊರಗಿನ ಮುಸ್ಲಿಂ ಗೂಂಡಾಗಳ ಕೃತ್ಯ: ಈಶ್ವರಪ್ಪ

ಶಿವಮೊಗ್ಗ: ಹರ್ಷ ಕೊಲೆ ಹಾಗೂ ಮೆರವಣಿಗೆ ಸಮಯದಲ್ಲಿ ನಡೆದ ದೊಂಬಿ ನಗರದ ಹೊರಗಿನ ಮುಸ್ಲಿಂ ಗೂಂಡಾಗಳ ಕೃತ್ಯ. ಘಟನೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ, ನಗರದ ಶಾಸಕ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ಇಷ್ಟು ದಿನ ಸುಮ್ಮನಿದ್ದ ಮುಸ್ಲಿಂ ಗೂಂಡಾಗಳು ಬಾಲಬಿಚ್ಚಲು ಆರಂಭಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ, ಗಲಭೆಯ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಹರ್ಷ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹೋದಾಗಲೇ ಹೊರಗಿನ ಹೆಚ್ಚಿನ ಶಕ್ತಿಗಳು ಅಲ್ಲಿರುವುದು ಗಮನಕ್ಕೆ ಬಂತು. ತಕ್ಷಣವೇ ಅವರ ಕುಟುಂಬದವರಿಗೆ ಈ ಕುರಿತು ಸೂಕ್ಷ್ಮವಾಗಿ ತಿಳಿಸಿದೆ. ಮೆರವಣಿಗೆಯಲ್ಲಿ ಭಾಗವಹಿಸಿದವರು ಹಿಂದೂಗಳ ಅಂಗಡಿ, ಮನೆಗಳ ಮೇಲೂ ದಾಳಿ ನಡೆಸಿರುವುದು ಸಂಶಯಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ ಎಂದರು.

ಹರ್ಷನ ವಿರುದ್ಧ ದಾಖಲಾಗಿದ್ದ ಪ್ರಕರಣ ನಾಲ್ಕು

ಶಿವಮೊಗ್ಗ: ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಮೃತ ಹರ್ಷ ವಿರುದ್ಧ ಇಲ್ಲಿನ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

ಇತರೆ ಕೋಮಿನ ಯುವಕರ ಜತೆ ಸಂಘರ್ಷ, ಇತರೆ ಕೋಮುಗಳ ಭಾವನೆ ಕೆರಳಿಸುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ ಆರೋಪ ಅವರ ಮೇಲಿತ್ತು. ಜೀವ ಬೆದರಿಕೆ ಇದ್ದ ಬಗ್ಗೆ ಸಂಘಟನೆಯ ಗಮನಕ್ಕೆ ತಂದರೂ ಯಾರೂ ಜೀವ ಉಳಿಸಲಿಲ್ಲ ಎಂದು ಮೃತನ ಸಂಬಂಧಿಕರು ದೂರಿದರು.

ಹರ್ಷ ಶಿವಮೊಗ್ಗ ನಗರದ ಎಂಜಿನಿಯರ್‌ ಒಬ್ಬರ ಹತ್ತಿರ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಹಿಂದುತ್ವ, ಗೋ ರಕ್ಷಣೆಯಂತಹ ವಿಚಾರಗಳಲ್ಲಿ ಸದಾ ಧ್ವನಿ ಎತ್ತುತ್ತಿದ್ದರು.

‘ಹರ್ಷ ಎಂದು ಹಿಂದೂ ಹೆಸರು ಇಟ್ಟಿದ್ದೇ ತಪ್ಪಾಯ್ತಾ? ಶ್ರೀರಾಮ್, ಜೈಶ್ರೀರಾಮ್ ಎಂದುಕೊಂಡೇ ಸತ್ತುಹೋದ. ಆರೋಪಿಗಳು ಯಾರೇ ಆಗಲಿ ಅವರಿಗೆ ಶಿಕ್ಷೆ ಆಗಬೇಕು. ಕುಟುಂಬಕ್ಕೆ ಸಹಾಯ ಮಾಡಬೇಕು’ ಎಂದು ಮೃತನ ಅಕ್ಕ ಅಶ್ವಿನಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮುಂದೆ ಕಣ್ಣೀರು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.