ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ದಕ್ಷಿಣದಲ್ಲಿ ಉತ್ತಮ, ಉತ್ತರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮಗರಾಜನಗರ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಯಿತು. ವಿವಿಧ ಸಂಘಟನೆಗಳು ಬೀದಿಗಿಳಿದು ತಮ್ಮ ಆಕ್ರೋಶ ಹೊರಹಾಕಿದರು. ಖಾಲಿ ಕೊಡ ಹಿಡಿದು, ಉರುಳು ಸೇವೆ ಮಾಡಿ, ಸಂಸದ ಅಣಕು ಶವಯಾತ್ರೆ ನಡೆಸಿ, ತಮಿಳು ಸಿನಿಮಾಗಳ ಪೋಸ್ಟರ್ ಹರಿದು ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ಸಿನಿಮಾ ನಟರು, ನಿರ್ಮಾಕರು ಹಾಗೂ ತಂತ್ರಜ್ಞರು ಕಾವೇರಿಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನಟ ಶಿವರಾಜ್‌ಕುಮಾರ್, ದರ್ಶನ್, ದುನಿಯಾ ವಿಜಯ್, ವಿಜಯರಾಘವೇಂದ್ರ, ಮುರುಳಿ, ಉಮಾಶ್ರೀ, ಮಾಲಾಶ್ರೀ, ಪೂಜಾಗಾಂಧಿ, ಭಾವನಾ, ಶ್ರುತಿ, ಪ್ರಮೀಳಾ ಜೋಶಾಯ್, ಸುಂದರ್‌ರಾಜ್, ಸಾಯಿಪ್ರಕಾಶ್, ವಸಿಷ್ಠಸಿಂಹ ಹಾಗೂ ಇತರರು ಪಾಲ್ಗೊಂಡು ಕನ್ನಡ ನಾಡು, ನುಡಿ, ನೆಲ ಹಾಗೂ ಜಲಕ್ಕೆ ತಮ್ಮ ಬೆಂಬಲ ಘೋಷಿಸಿದರು.
ಬೆಂಗಳೂರಿನ ಪುರಭವನ ಎದುರು ಪ್ರತಿಭಟನೆ ನಡೆಸಲು ಮುಂದಾದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಗಾಜು ಒಡೆಯಲಾಗಿದೆ. ಈ ಘಟನೆ ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು.
ನಗರದ ಬಹುತೇಕ ಅಂಗಡಿಗಳು, ಹೊಟೇಲುಗಳು, ಮಾಲ್‌ಗಳು ಬಾಗಿಲು ಹಾಕಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು. ಆಟೋ ಹಾಗೂ ಟ್ಯಾಕ್ಸಿಗಳು ಬೀದಿಗಿಳಿಯಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡಿದರು. ಮೆಟ್ರೊ ಸಂಚಾರ ಎಂದಿನಂತೆಯೇ ಇತ್ತು. ಬಿಎಂಟಿಸಿ ಸಂಚಾರ ಇತ್ತಾದರೂ ಎರಡು ಸಾವಿರಕ್ಕೂ ಹೆಚ್ಚು ಟ್ರಪ್‌ಗಳು ನಡೆಯಲಿಲ್ಲ.
ವಿಮಾನ ನಿಲ್ದಾಣದಲ್ಲೂ ಪ್ರತಿಭಟನೆ ನಡೆಯಿತು. ಜತೆಗೆ ಅಲ್ಲಿಗೆ ಹೋಗಲು ಪ್ರಯಾಣಿಕರಿಗೆ ವಾಹನ ಸೌಕರ್ಯ ಇಲ್ಲದ ಕಾರಣ 44 ವಿಮಾನಗಳ ಹಾರಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಚಾಮರಾಜನಗರದಲ್ಲಿ ತಮಿಳು ಸಂಘವೂ ಸೇರಿ ಬಹುತೇಕ ಸಂಘಟನೆಗಳು ಕರ್ನಾಟಕ ಬಂದ್‌ಗೆ ಭಾರೀ ಬೆಂಬಲ ಸೂಚಿಸಿದವು. ಇದರಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತು.
ಔಷಧ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಮಳಿಗೆ ತೆರೆದಿರಲಿಲ್ಲ. ಕಾವೇರಿ ಹೋರಾಟ ಕ್ರಿಯಾ ಸಮಿತಿ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೀದಿಗಿಳಿದು ಪ್ರತಿಬಟನೆ ನಡೆಸಿದರು. ಸಿದ್ಧಾರ್ಥ ಚಿತ್ರಮಂದಿರದ ಮುಂದೆ ಅಂಟಿಸಿದ್ದ ತಮಿಳು ಸಿನಿಮಾದ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡು ವಾಹನಗಳನ್ನು ತಡೆದರು.
ಹೋರಾಟಗಾರರ ಆಕ್ರೋಶ ಮುಗಿಲುಮುಟ್ಟಿತ್ತು. ಹೋರಾಟಗಾರರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿದರು. ಮತ್ತೊಂದೆಡೆ ಟೈಯರ್‌ಗೆ ಬೆಂಕಿ ಹಚ್ಚುವ ಪ್ರಯತ್ನವೂ ನಡೆಯಿತು. ಆದರೆ ಪೊಲೀಸರು ಅವರನ್ನು ತಡೆದರು. ಕುತ್ತಿಗೆಗೆ ಟವಲ್ ಬಿಗಿದುಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಅಸ್ವಸ್ತಗೊಂಡರು.
ಚಾಮರಾಜನಗರ ಗಡಿಭಾಗ ಪುಣಜನೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ತಮಿಳು ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಜಿಲ್ಲೆಯಲ್ಲಿ ವಾಸವಿರುವ ತಮಿಳು ಭಾಷಿಗರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ತುಮಕೂರಿನಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದರಿಂದ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಜನರ ಓಡಾಟವೇ ಇಲ್ಲದೆ ನಗರದ ಪ್ರಮುಖ ಎಂ.ಜಿ. ರಸ್ತೆ ಬಿಕೋ ಎನ್ನುತ್ತಿತ್ತು. ಬಿಜಿಎಸ್ ವೃತ್ತದ ಬಳಿ ಕನ್ನಡಪರ ಸಂಘಟನೆಗಳು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಣುಕು ಶವಯಾತ್ರೆ ನಡೆಸಿ, ಪ್ರತಿಭಟಿಸಿದರು.
ಮಂಡ್ಯ ಬಳಿಯ ಬೆಂಗಳೂರು–ಮೈಸೂರು ಹೆದ್ದಾರಿ ತಡೆಯಲು ಯತ್ನಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ರೈತ ಸಂಘದ ಸದಸ್ಯರನ್ನು ಪೊಲೀಸರು ಬಂಧಿಸಿದರು. ಶ್ರೀರಂಗಪಟ್ಟಣ ತಾಲ್ಲೂಕಿನ ಗೌರಿಪುರ ಉಕ್ಕಡ ಬಳಿ ಹೆದ್ದಾರಿ ತಡೆಯಲು ಯತ್ನಿಸಿದರು. ಜಾನುವಾರುಗಳೊಂದಿಗೆ ಹೆದ್ದಾರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಎಳೆದು ಬಸ್ಸಿನಲ್ಲಿ ಕರೆದೊಯ್ದರು.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಲಿ ಹಾಗೂ ಜನಪ್ರತಿನಿಧಿಗಳಿಗೆ ಬುದ್ಧಿ ಬರಲಿ ಎಂದು ಪ್ರಾರ್ಥಿಸಿ ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆಯ ಕಾರ್ಯಕರ್ತರು ಅಗ್ರಹಾರದ 101 ಗಣಪತಿ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ಬಂದ್‌ನಲ್ಲಿ ಪಾಲ್ಗೊಂಡು ಕಾವೇರಿಗಾಗಿ ಹೋರಾಟ ನಡೆಸಿದರು.
ಹಾಸನ ನಗರ ಹಾಗೂ ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಬೇಲೂರು, ಅರಸೀಕೆರೆ, ಅರಕಲಗೂಡು, ಸಕಲೇಶಪುರ, ಚನ್ನರಾಯಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆಯೂ ಪ್ರತಿಭಟನೆಗಳು ನಡೆದಿವೆ. ಸಾರ್ವಜನಿಕರು ಹಾಗೂ ವರ್ತಕರಿಂದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಾಸನ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹೇಮಾವತಿ ಪ್ರತಿಮೆಯ ಬಳಿ ಧರಣಿ ನಡೆಸಿದರು. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ವಿವಿಧ ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು ರಾಜ್ಯ ಬಂದ್‌ನಲ್ಲಿ ಪಾಲ್ಗೊಂಡು ಶುಕ್ರವಾರ ಪ್ರತಿಭಟನೆ ನಡೆಸಿದರು. ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಬೆಳಿಗ್ಗೆ ಹೊಸೂರು ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ಯಪಡಿಸಿದರು. ವಾಹನಗಳ ಸಂಚಾರ ತಡೆದು ಧರಣಿ ನಡೆಸಲು ಮುಂದಾದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಖಾಲಿಕೊಡ, ಖಾಲಿ ಬಾಟಲಿ ಪ್ರದರ್ಶಿಸಿದರು. ಅರೆಬೆತ್ತಲೆಯಾಗಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದರು. 'ಬೇಕೆ ಬೇಕೆ ನ್ಯಾಯ ಬೇಕು', 'ಕಾವೇರಿ ನಮ್ಮದು, ನಮ್ಮದು' ಎಂದು ಘೋಷಣೆ ಕೂಗಿದರು.
ಧಾರವಾಡದಲ್ಲಿ ಮಹದಾಯಿಗಾಗಿ ಮಹಾವೇದಿಕೆ, ಜಯ ಕರ್ನಾಟಕ ಸಂಘಟನೆ ಮತ್ತು ಕರ್ನಾಟಕ ರೈತ ಸೇನೆಯವರು ನಗರದಲ್ಲಿ ಪ್ರತಿಭಟನ ಮೆರವಣಿಗೆ ನಡೆಸಿ, ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿದರು.
ನಗರದಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವು. ಶಾಲಾ ಕಾಲೇಜುಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಿದವು. ಭಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಕರ್ನಾಟಕ ಬಂದ್‌ಗೆ ಬೆಳಗಾವಿಯಲ್ಲಿ ನಗರ ಹಾಗೂ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಶುಕ್ರವಾರ ಕೂಡ ಎಲ್ಲ ಶಾಲೆ, ಕಾಲೇಜು, ಅಂಗಡಿಗಳು ತೆರೆದವು. ಮಾರುಕಟ್ಟೆಗಳಲ್ಲಿ ಜನಸಂಚಾರ ಎಂದಿನಂತಿತ್ತು.
ಗುರುವಾರ ಸಂಜೆ ಆರಂಭವಾದ ಗಣಪತಿ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಶುಕ್ರವಾರ ಕೂಡ ನಿರಂತರವಾಗಿ ಮುಂದುವರಿಯಿತು. ಮೆರವಣಿಗೆ ನೋಡಲು ಅಪಾರ ಸಂಖ್ಯೆಯ ಜನ ಸೆರಿದ್ದರಿಂದ ಬಂದ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆಯ ಕೆಲವು ಕಾರ್ಯಕರ್ತರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಅರ್ಧ ತಾಸು ರಸ್ತೆ ತಡೆ ನಡೆಸಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮುತ್ತಿಗೆ ಹಾಕಲು ಯತ್ನಿಸಿದರು. ಭದ್ರತೆಗೆ ನೀಯೋಜನೆಗೊಂಡಿದ್ದ ಪೊಲೀಸರು ಅವರನ್ನು ತಡೆದರು.
ಕೆಲವು ಅಂಗಡಿಕಾರರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಉಳಿದಂತೆ, ಸರ್ಕಾರಿ ಹಾಗೂ ಖಾಸಗಿ ವಾಹನಗಳ ಓಡಾಟ ಯಥಾ ಪ್ರಕಾರ ಮುಂದುವರಿಯಿತು. ಶಾಲೆ, ಕಾಲೇಜುಗಳಲ್ಲಿ ಪಾಠ- ಆಟಗಳು, ಚಲನಚಿತ್ರ ಪ್ರದರ್ಶನ, ನಾಟಕ ಪ್ರದರ್ಶನ ಎಂದಿನಂತೆ ನಡೆದವು.
ಬೀದರ್‌ನಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಲಿಲ್ಲ. ಬಂದ್‌ಗೆ ನೈತಿಕ ಬೆಂಬಲ ಸೂಚಿಸಲು ಕರ್ನಾಟಕ ರಕ್ಷಣಾ ವೇದಿಕೆಯವರು ಜಿಲ್ಲಾಧಿಕಾರಿಗೆ ಮಧ್ಯಾಹ್ನ ಮನವಿ ಪತ್ರ ಸಲ್ಲಿಸಿದರು.
ಶಿವಮೊಗ್ಗದಲ್ಲೂ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರಿಗೆ ಬಸ್ಸುಗಳು ಹಾಗೂ ಆಟೊ ರಿಕ್ಷಾಗಳು ಎಂದಿನಂತೆಯೇ ರಸ್ತೆಗಿಳಿದಿದ್ದವು. ವ್ಯಾಪಾರ ವಹಿವಾಟು ಸಹಜವಾಗಿಯೇ ಇತ್ತು. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದವು.
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವದ ಹಿನ್ನಲೆ ಗುರುವಾರ ಶಿವಮೊಗ್ಗದಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಹೀಗಾಗಿ ಇವತ್ತಿನ ಕರ್ನಾಟಕ ಬಂದ್‌ಗೆ ಶಿವಮೊಗ್ಗದಲ್ಲಿ ಬೆಂಬಲ ನೀಡಿಲ್ಲ.
ಕರ್ನಾಟಕ ಬಂದ್‌ಗೆ ಹಾವೇರಿ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಬೆಳಿಗ್ಗೆ 11 ರವರೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಕರವೇ ಗಜಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.
ಬಾಗಲಕೋಟೆಯಲ್ಲಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ದೇಸಾಯಿ ಚಲನಚಿತ್ರದ ಚಿತ್ರೀಕರಣದಲ್ಲಿರುವ ತಂಡವು ಚಿತ್ರೀಕರಣ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿತು. ಬಸ್ ಸಂಚಾರ, ಅಂಗಡಿಗಳು ಎಂದಿನಂತೆ ತೆರೆದಿದ್ದವು. ಶಾಲಾ- ಕಾಲೇಜುಗಳಲ್ಲಿ ತರಗತಿಗಳು ನಡೆದವು.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ನೀಡಿದ ಕರ್ನಾಟಕ ಬಂದ್‌ಗೆ ವಿಜಯನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪರಿಸ್ಥಿತಿ ಸಹಜವಾಗಿತ್ತು.
ನಗರದ ಮೇನ್ ಬಜಾರ್ ಪ್ರದೇಶದಲ್ಲಿ ಮಾತ್ರ ಕೆಲವು ಅಂಗಡಿಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಆ ಭಾಗದ ಒಟ್ಟಾರೆ ಅಂಗಡಿಗಳ ಪೈಕಿ ಮುಚ್ಚಿದ ಅಂಗಡಿಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇತ್ತು.
ಕಲಬುರಗಿ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಸರಣಿ ಪ್ರತಿಭಟನೆ ನಡೆಸಿದವು. ನಗರದ ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ ಒಳಗೆ ತೆರಳಲು ಯತ್ನಿಸಿದ ‘ನಮ್ಮ ಕರ್ನಾಟಕ ಸೇನೆ‘ಯ ಒಂಬತ್ತು ಜನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕಲಬುರಗಿಯ ಮಿನಿ ವಿಧಾನಸೌಧದ ಆವರಣದಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕಾವೇರಿ ಉಗಮ ಸ್ಥಳವಾದ ಕೊಡಗಿನಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಶಾಲನಗರ, ಗೋಣಿಕೊಪ್ಪಲಿನಲ್ಲಿ ಮಾತ್ರವೇ ಪ್ರತಿಭಟನೆಗಳು ನಡೆದಿವೆ.
ಉಳಿದಂತೆ ಜಿಲ್ಲೆಯ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯೊಳಗಿನ ಬಸ್ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಹೊರ ಜಿಲ್ಲೆಯ ಬಸ್ಸುಗಳ ಸಂಚಾರ ಕಡಿಮೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.