ADVERTISEMENT

ಎಐಬಿಇ ಪಾಸಾಗದೆ ವಕೀಲಿಕೆ: ಸನ್ನದು ಅಮಾನತು ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 16:34 IST
Last Updated 13 ಡಿಸೆಂಬರ್ 2023, 16:34 IST
   

ಬೆಂಗಳೂರು: ‘ವಕೀಲರಾಗಿ ನೋಂದಣಿಯಾದ ಕಾನೂನು ಪದವೀಧರರು ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸಾಗದೆ ವಕಾಲತ್ತಿಗೆ ಸಹಿ ಮಾಡಿ, ನಿಯಮಬಾಹಿರವಾಗಿ ವಕೀಲಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು‘ ಎಂದು ರಾಜ್ಯ ವಕೀಲರ ಪರಿಷತ್‌ ಎಚ್ಚರಿಸಿದೆ.

ಈ ಕುರಿತಂತೆ ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಪತ್ರ ಬರೆದಿರುವ ಪರಿಷತ್‌ ಅಧ್ಯಕ್ಷ ಎಚ್‌.ಎಲ್‌.ವಿಶಾಲ ರಘು, ‘ಯಾರು ಎಐಬಿಇ ಪರೀಕ್ಷೆ ಪಾಸಾಗಿಲ್ಲವೋ ಅಂಥವರು ಕೋರ್ಟ್‌ ಕಲಾಪದಲ್ಲಿ ವಕೀಲರ ಉಡುಪು ಅಥವಾ ನಿಲುವಂಗಿ ಧರಿಸಿ ಬರುವಂತಿಲ್ಲ. ಈ ರೀತಿ ವಕೀಲಿಕೆ ನಡೆಸುತ್ತಿದ್ದ ಯಲಬುರ್ಗಾದ ವಕೀಲ ಆನಂದ ಎ.ಉಳ್ಳಾಗಡ್ಡಿ ಅವರ ಸನ್ನದನ್ನು ಅಮಾನತುಗೊಳಿಸಲಾಗಿದೆ‘ ಎಂದು ತಿಳಿಸಿದ್ದಾರೆ. 

‘ಎಐಬಿಇ ಪರೀಕ್ಷಾ ಫಲಿತಾಂಶದಲ್ಲಿ ಪಾಸಾಗದ ಅಥವಾ ವೃತ್ತಿ ‍ಪ್ರಮಾಣ ಪತ್ರ ಹೊಂದಿರದ (ಸರ್ಟಿಫಿಕೇಟ್‌ ಆಫ್‌ ಪ್ರ್ಯಾಕ್ಟೀಸ್–ಸಿಒಪಿ) ವಕೀಲರಿಗೆ, ವಕೀಲರ ಸಂಘಗಳು ಸದಸ್ಯತ್ವ ನೀಡಬೇಕು. ಆದರೆ ಮತದಾನದ ಹಕ್ಕು ನೀಡಬಾರದು‘ ಎಂದು ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಮನವಿ ಮಾಡಿದ್ದಾರೆ. ‘ಯಾರಾದರೂ ನಿಯಮ ಉಲ್ಲಂಘಿಸಿದಲ್ಲಿ ಅಂಥವರ ನೋಂದಣಿಯನ್ನು ವಕೀಲರ ಕಾಯ್ದೆ ಮತ್ತು ಸಿಒಪಿ ನಿಯಮಗಳ ಪ್ರಕಾರ ಅಮಾನತುಗೊಳಿಸಲಾಗುವುದು‘ ಎಂದು ಎಚ್ಚರಿಸಿದ್ದಾರೆ.

ADVERTISEMENT

ಎರಡು ವರ್ಷ ಅವಕಾಶ: ‘2010ರ ಜುಲೈ 14 ರವರೆಗೆ ಅಥವಾ ನಂತರದಲ್ಲಿ, ಕಾನೂನು ಪದವಿ ಪಡೆದವರು ಎರಡು ವರ್ಷಗಳ ತನಕ ಕೋಟು ಧರಿಸಿ ಕೋರ್ಟ್‌ಗೆ ಬರಬಹುದು. ಆದರೆ, ವಕಾಲತ್ತಿಗೆ ಸಹಿ ಹಾಕುವಂತಿಲ್ಲ. ಒಂದು ವೇಳೆ ಎರಡು ವರ್ಷಗಳ ಒಳಗೆ ಎಐಬಿಇ ಪರೀಕ್ಷೆ ಪಾಸು ಮಾಡದೇ ಹೋದರೆ ಅಂಥವರು ವಕೀಲರ ಉಡುಪಿನಲ್ಲಿ ಬಂದು ವಕೀಲಿಕೆ ನಡೆಸಲು ಅವಕಾಶವಿಲ್ಲ’ ಎಂದು ಪರಿಷತ್‌ ಸದಸ್ಯ ಮತ್ತು ವಕೀಲರ ನೋಂದಣಿ ಸಮಿತಿ ಸದಸ್ಯರೂ ಆದ ಎಸ್‌.ಹರೀಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.