ADVERTISEMENT

ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಕಣ್ಣೀರು ಹಾಕುತ್ತಿದ್ದಾರೆ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 10:47 IST
Last Updated 30 ಜುಲೈ 2022, 10:47 IST
ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ
ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ   

ಬೆಂಗಳೂರು: ಸಮಾಜಘಾತುಕ ಶಕ್ತಿಗಳನ್ನು ಎನ್‌ಕೌಂಟರ್‌ ಮಾಡುವುದರ ಜೊತೆಗೆ ಅವರ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಎಬಿವಿಪಿ ಯುವಕರು, ಹಿಂದೂ ಸಂಘಟನೆಗಳು, ಪಕ್ಷದ ಕಾರ್ಯಕರ್ತರಲ್ಲಿ ಕಳಕಳಿಯ ಮನವಿ ಮಾಡುತ್ತೇನೆ. ಪ್ರವೀಣ್ ಹತ್ಯೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪ್ರವೀಣ್ ಹತ್ಯೆ ಪ್ರಕರಣ ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ಮುಖ್ಯಮಂತ್ರಿಗಳು ನೋವಿನಲ್ಲಿದ್ದಾರೆ. ಯಾರೂ ಕೂಡ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ’ ಎಂದು ಹೇಳಿದ್ದಾರೆ

ಕಾಂಗ್ರೆಸ್ ಸರ್ಕಾರ ಇದ್ದಾಗ ಮೂವತ್ತಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಸಿಎಂ ಕಣ್ಣೀರು ಹಾಕುತ್ತಿದ್ದಾರೆ. ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದಾಗ, 'ನೀವು ಸರ್ಕಾರದ ಒಂದು ಭಾಗ, ನಮ್ಮ ಜೊತೆ ಗಟ್ಟಿಯಾಗಿ ನಿಲ್ಲಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂಬುದಾಗಿ ಟ್ವೀಟಿಸಿದ್ದಾರೆ.

ADVERTISEMENT

‘ಪಕ್ಷದ ಮುಖಂಡರು ರಾಜೀನಾಮೆ ಕೊಡಬಾರದೆಂದು ಸಂಘಪರಿವಾರದವರು ಹೇಳಿದ್ದಾರೆ. ಯಾರು ಸಮಾಜಘಾತುಕ ಶಕ್ತಿಗಳಿದ್ದಾರೋ ಅವರಿಗೆ ಉತ್ತರಪ್ರದೇಶದ ಮಾದರಿಯಲ್ಲಿ ಕ್ರಮ ಜರುಗಿಸಲಾಗುವುದು. ಸಮಾಜಘಾತುಕ ಶಕ್ತಿಗಳನ್ನು ಎನ್‌ಕೌಂಟರ್‌ ಮಾಡುವುದರ ಜೊತೆಗೆ ಅವರ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಕಾರ್ಯಕರ್ತರೇ ಪಕ್ಷದ ಶಕ್ತಿ. ನಾನು ಕಾರ್ಯಕರ್ತರಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡುತ್ತೇನೆ. ರಾಜೀನಾಮೆಯನ್ನು ವಾಪಸ್ ಪಡೆಯಬೇಕು, ನಾವು ನಿಮ್ಮೊಂದಿಗಿದ್ದೇವೆ ಎಂದು ಮನವಿ ಮಾಡುತ್ತೇನೆ’ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿದೆ. ಈ ವಿಚಾರವೀಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗದ್ದು, ಬಿಜೆಪಿ ನಾಯಕರ ವಿರುದ್ಧ ‍ಪಕ್ಷದ ಕಾರ್ಯಕರ್ತರೇ ಹರಿಹಾಯುತ್ತಿದ್ದಾರೆ.

ಪ್ರವೀಣ್‌ ಹತ್ಯೆ ಪ್ರಕರಣ ಹಸಿಯಾಗಿರುವಾಗಲೇ ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿ ಮಹಮ್ಮದ್ ಫಾಝಿಲ್‌ ಎಂಬ ಯುವಕನ ಕೊಲೆಯು ಗುರುವಾರ ನಡೆದಿದೆ. ಕರಾವಳಿಯಲ್ಲಿ ನಡೆದಿರುವ ಸರಣಿ ಕೊಲೆಗಳು ರಾಜಕೀಯ ವಾಗ್ವಾದಗಳಿಗೆ ದಾರಿ ಮಾಡಿಕೊಟ್ಟಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.