ADVERTISEMENT

ರಾಜಭವನದ ಸುತ್ತ ಭಾರಿ ಸಂಭ್ರಮ, ಮತ್ತೊಂದೆಡೆ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 8:26 IST
Last Updated 4 ಆಗಸ್ಟ್ 2021, 8:26 IST
ರಾಜಭವನಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ
ರಾಜಭವನಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸಚಿವರಾಗಿ ಸೇರಲಿರುವ ಶಾಸಕರ ಬೆಂಬಲಿಗರು ರಾಜಭವನದಲ್ಲಿ ಸುತ್ತ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದು, ಜೈಕಾರ ಕೂಗುತ್ತ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಭವನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಎಲ್ಲ 29 ಶಾಸಕರು ಸಚಿವರಾಗಿ ಪ್ರಮಾಣ ವಿಧಿ ಸ್ವೀಕರಿಸಲಿದ್ದಾರೆ. ರಾಜ್ಯಪಾಲರ ಥಾವರಚಂದ್‌ ಗೆಹಲೋತ್‌ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ADVERTISEMENT

ರಾಜಭವನದ ಬಳಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಶಾಸಕರ ಬೆಂಬಲಿಗರು ಮತ್ತು ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಅವಕಾಶ ವಂಚಿತ ಶಾಸಕರ ಬೆಂಬಲಿಗರು, ಅಭಿಮಾನಿಗಳು ಗುಂಪುಗೂಡಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಶಾಸಕರ ಬೆಂಬಲಿಗರ ಆಕ್ರೋಶದ ಕಿಡಿ ಕಾಣಿಸಿದೆ. ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ.

ಶಾಸಕರಾದ ರಾಜೂಗೌಡ, ಅರವಿಂದ ಬೆಲ್ಲದ ಬೆಂಬಲಿಗರು ರಾಜಭವನದ ಬಳಿ ಗುಂಪುಗೂಡಿದ್ದು, ‘ನಮ್ಮ ನಾಯಕನಿಗೆ ಸಚಿವ ಸ್ಥಾನ ನೀಡಬೇಕು. ನಮಗೆ ನ್ಯಾಯ ಬೇಕು’ ಎಂದು ಘೋಷಣೆ ಕೂಗುತ್ತಿದ್ದಾರೆ.

ರಾಜಭವನದ ಪ್ರವೇಶದ್ವಾರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪಾಸ್‌ ಇದ್ದವರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕೆಲವು ಶಾಸಕರು, ಅವರ ಕುಟುಂಬ ಸದಸ್ಯರು ರಾಜಭವನಕ್ಕೆ ಬರುತ್ತಿದ್ದಾರೆ. ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರು ಈಗಾಗಲೇ ರಾಜಭವನ ತಲುಪಿದ್ದಾರೆ. ಸಚಿವರಾಗಿ ಪ್ರಮಾಣ ಸ್ವೀಕರಿಸಲಿರುವ ಕೆ.ಎಸ್‌. ಈಶ್ವರಪ್ಪ., ಎಸ್‌. ಅಂಗಾರ ಕೂಡಾ ರಾಜಭವನಕ್ಕೆ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.