ADVERTISEMENT

ಬಾಗಲಕೋಟೆ | ಟ್ರಸ್ಟ್, ಅಕಾಡೆಮಿ: ಖರ್ಚಾಗದ ಅನುದಾನ

ಕಾರ್ಯಕ್ರಮ ಆಯೋಜನೆಗೆ ಹಿನ್ನಡೆ; ಪ್ರದಾನವಾಗದ ಪ್ರಶಸ್ತಿ

ಬಸವರಾಜ ಹವಾಲ್ದಾರ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬಾಗಲಕೋಟೆ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಅನುದಾನದ ಕೊರತೆ ಕಾಡುತ್ತಿದೆ. ಆದರೆ, ಜಿಲ್ಲೆಯ ಪ್ರತಿಷ್ಠಾನ, ಟ್ರಸ್ಟ್ ಮತ್ತು ಸಮಿತಿಗಳಲ್ಲಿ ಲಕ್ಷ, ಕೋಟಿಗಟ್ಟಲೇ ಹಣ ನಾಲ್ಕಾರು ವರ್ಷಗಳಿಂದ ಬಳಕೆಯಾಗದೆ ಹಾಗೆಯೇ ಉಳಿದಿದೆ.

ಕವಿ ಚಕ್ರವರ್ತಿ ರನ್ನನ ಹೆಸರಿನಲ್ಲಿ ಪ್ರತಿಷ್ಠಾನ, ನಾಟಕಕಾರ ಪಿ.ಬಿ. ದುತ್ತರಗಿ ಅವರ ಹೆಸರಿನಲ್ಲಿ ಟ್ರಸ್ಟ್‌ ಮತ್ತು ಚಾಲುಕ್ಯ ಉತ್ಸವಕ್ಕಾಗಿ ಸಮಿತಿ ರಚಿಸಲಾಗಿದೆ. ಆದರೆ, ಯಾವುದೇ ಚಟುವಟಿಕೆಗಳು ನಡೆದಿಲ್ಲ.

ADVERTISEMENT

ರನ್ನ ಪ್ರತಿಷ್ಠಾನ ಮತ್ತು ಪಿ.ಬಿ.ದುತ್ತರಗಿ ಟ್ರಸ್ಟ್‌ಗೆ ಪ್ರತಿ ವರ್ಷ ವಾರ್ಷಿಕ ₹8 ಲಕ್ಷ ಅನುದಾನವಿದೆ. ಪ್ರತಿಷ್ಠಾನದ ಖಾತೆಯಲ್ಲಿ ₹97 ಲಕ್ಷ, ಟ್ರಸ್ಟ್ ಖಾತೆಯಲ್ಲಿ ₹65 ಲಕ್ಷ, ಚಾಲುಕ್ಯ ಉತ್ಸವ ಸಮಿತಿಯ ಖಾತೆಯಲ್ಲಿ ₹2.42 ಕೋಟಿ ಹಣವಿದೆ. ಕಾರ್ಯಕ್ರಮ ಆಯೋಜಿಸದ ಕಾರಣ ಪ್ರತಿ ವರ್ಷದ ಅನುದಾನ, ಬಡ್ಡಿಯ ಹಣ ಜಮಾ ಆಗುತ್ತಿದೆ.

ಚಟುವಟಿಕೆಗಳೇ ಇಲ್ಲ: ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ ಮತ್ತು ನಾಟಕಕಾರ ಪಿ.ಬಿ. ದುತ್ತರಗಿ ಟ್ರಸ್ಟ್‌ಗೆ ರಾಜ್ಯ ಸರ್ಕಾರವು ಎರಡು ವರ್ಷಗಳಿಂದ ಅಧ್ಯಕ್ಷ, ಸದಸ್ಯರ ನೇಮಕಾತಿ ಮಾಡಿಲ್ಲ.

‘ಈ ಹಿಂದೆ ದುತ್ತರಗಿ ಟ್ರಸ್ಟ್‌ನಿಂದ ನಾಟಕೋತ್ಸವ, ವಿಚಾರ ಸಂಕಿರಣದಂತಹ ಕಾರ್ಯಕ್ರಮ ಆಯೋಜಿಸಲಾಗುತಿತ್ತು. ಆಗ ಸದಸ್ಯರಾಗಿದ್ದವರು, ಕಾರ್ಯಕ್ರಮ ಆಯೋಜನೆ ಜವಾಬ್ದಾರಿ ಮತ್ತು ಅನುದಾನ ತಮಗೇ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ, ಸದಸ್ಯರಿಗೆ ಅನುದಾನ ನೀಡಲು ಅವಕಾಶವಿಲ್ಲ. ಈ ಎಲ್ಲಾ ಕಾರಣಗಳಿಂದ ಅನುದಾನ ಖರ್ಚು ಮಾಡಲು ಸಾಧ್ಯವಾಗಿಲ್ಲ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರದಾನವಾಗದ ಪ್ರಶಸ್ತಿ: ಬಯಲಾಟ ಅಕಾಡೆಮಿಯ ಕೇಂದ್ರ ಕಚೇರಿ ಬಾಗಲಕೋಟೆಯಲ್ಲಿದೆ. ಹಿಂದೆ ಅಧ್ಯಕ್ಷರಾಗಿದ್ದ ಅಜಿತ್‌ ಬಸಾಪುರ 2021, 2022ನೇ ಸಾಲಿನ ಗೌರವ (₹50 ಸಾವಿರ ನಗದು), ವಾರ್ಷಿಕ (₹25 ಸಾವಿರ ನಗದು) ಪ್ರಶಸ್ತಿ ಪ್ರಕಟಿಸಿ ಎರಡು ವರ್ಷಗಳಾಗಿವೆ. ಇದುವರೆಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿಲ್ಲ.

‘ಅಕಾಡೆಮಿ ಅಧ್ಯಕ್ಷರಾಗಿ ದುರ್ಗದಾಸ್ ಹಾಗೂ ಸದಸ್ಯರ ನೇಮಕವಾಗಿದೆ. ಆದರೂ, ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ನೆರವೇರಿಲ್ಲ. 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳಿಗೂ ಸಾಧಕರನ್ನು ಆಯ್ಕೆಯಾಗಬೇಕಿದೆ. ಅಕಾಡೆಮಿಯಿಂದ ಬಯಲಾಟ ಕುರಿತು ಚಟುವಟಿಕೆಗಳೂ ಕುಂಠಿತಗೊಂಡಿವೆ’ ಎಂದು ಮೂಲಗಳು ತಿಳಿಸಿವೆ.

9 ವರ್ಷಗಳಿಂದ ನಡೆದಿಲ್ಲ ಉತ್ಸವ

ಬೆಳಗಾವಿಯಲ್ಲಿ ಕಿತ್ತೂರು ಉತ್ಸವ, ಬಳ್ಳಾರಿಯಲ್ಲಿ ಹಂಪಿ ಉತ್ಸವ ಸೇರಿ ವಿವಿಧ ಜಿಲ್ಲೆಗಳಲ್ಲಿ ಉತ್ಸವಗಳು ನಡೆದಿವೆ. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಚಾಲುಕ್ಯ ಉತ್ಸವ 9 ವರ್ಷಗಳಿಂದ ನಡೆದಿಲ್ಲ. 

ಉತ್ತರ ಭಾರತದ ಗಂಗಾರತಿ ಮಾದರಿಯಲ್ಲಿ ಇಲ್ಲಿ ಆರತಿ ನಡೆಯುತ್ತದೆ. ಆದರೆ, ಇಲ್ಲಿನ ಸಂಸ್ಕೃತಿ ಬಿಂಬಿಸುವ ಚಾಲುಕ್ಯ ಉತ್ಸವ ನಡೆಯದಿರುವುದು ದುರ್ದೈವ.
–ಇಷ್ಟಲಿಂಗ ಸಿರ್ಸಿ, ಸಾಹಿತಿ
ಬಯಲಾಟ ಅಕಾಡೆಮಿಗೆ ಅಧ್ಯಕ್ಷರ ನೇಮಕವಾಗಿದೆ. ಇನ್ನೆರಡು ವರ್ಷಗಳ ಪ್ರಶಸ್ತಿಗೆ ಆಯ್ಕೆ ಮಾಡಿ, ಎಲ್ಲರಿಗೂ ಒಂದೇ ಬಾರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು
–ಕರ್ಣಕುಮಾರ ಜೈನಾಪುರ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.