ADVERTISEMENT

ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ ನಿಷೇಧ

ಸಾರ್ವಜನಿಕರು ಫೋಟೊ, ವಿಡಿಯೊ ಚಿತ್ರೀಕರಿಸುವಂತಿಲ್ಲ: ಆದೇಶಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 19:38 IST
Last Updated 15 ಜುಲೈ 2022, 19:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆಯಲ್ಲಿ ಸಾರ್ವಜನಿಕರು ಅನುಮತಿ ಇಲ್ಲದೆ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

‘ಶೇ 40ರ ಲಂಚದ ಆಪಾದನೆಗೆ ಗುರಿಯಾಗಿದ್ದ ಸರ್ಕಾರ, ಭ್ರಷ್ಟಾಚಾರ ಅನಿರ್ಬಂಧಿತವಾಗಿ ನಡೆಯಲು ಅನುಕೂಲ ಮಾಡಿಕೊಡುವುದಕ್ಕಾಗಿ ಈ ನಿಷೇಧ ಹೇರಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಚಿವಾಲಯದ ಕಚೇರಿಗಳನ್ನು ಬಿಟ್ಟು ಉಳಿದೆಲ್ಲ ಕಚೇರಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ಕಚೇರಿಯ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಕೊಠಡಿಗಳ ಚಲನವಲನಗಳನ್ನು ವೀಕ್ಷಿಸಲು ಕೇಂದ್ರೀಕೃತ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅದನ್ನು ಇನ್ನಷ್ಟು ಸುಧಾರಣೆ ಮಾಡಬೇಕು ಎಂಬ ಆಗ್ರಹ ಇರುವಾಗಲೇ, ಫೋಟೊ, ವಿಡಿಯೊ ಚಿತ್ರೀಕರಣನ್ನೂ ನಿಷೇಧ ಹೇರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ಸಚಿವರು ಮತ್ತು ಅಧಿಕಾರಿಗಳ ಕಚೇರಿಗೆಮಾಧ್ಯಮ ಪ್ರತಿನಿಧಿಗಳು
ಭೇಟಿ ನೀಡುವುದನ್ನು ನಿರ್ಬಂಧಿಸಿ 2021ರ ಜುಲೈ ತಿಂಗಳಲ್ಲಿ ಆದೇಶ ಹೊರಡಿಸಲಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆದೇಶ ಹಿಂಪಡೆದಿದ್ದರು. ಈಗ ಕೂಡ ಸರ್ಕಾರಿ ಕಚೇರಿಗಳಲ್ಲಿ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಣ ನಿಷೇಧಿಸಿರುವು ದಕ್ಕೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೊಸ ಆದೇಶವನ್ನು ತೀವ್ರವಾಗಿ ವಿರೋಧಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ಈ ಆದೇಶ ಹೊರಡಿಸಿಲ್ಲ. ಸರ್ಕಾರದಲ್ಲಿನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ಕ್ರಮ ಕೈಗೊಂಡಿದೆ’ ಎಂದು ಆರೋಪಿಸಿದ್ದಾರೆ.

‘ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಕಾರ್ಯಕರ್ತರು ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತಿದ್ದರು. ನಮ್ಮ ಪಕ್ಷದ ಹೋರಾಟಕ್ಕೆ ಹೆದರಿರುವ ಸರ್ಕಾರ, ಕಚೇರಿಗಳಲ್ಲಿ ಫೋಟೊ ಮತ್ತು ವಿಡಿಯೋ ಚಿತ್ರೀಕರಣ ನಿಷೇಧಿಸಿದೆ’ ಎಂದು ಕೆಆರ್‌ಎಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್‌ ಸಿ.ಎನ್‌. ಹೇಳಿದ್ದಾರೆ.

ನೌಕರರ ಸಂಘದ ಮನವಿ: ‘ಸಾರ್ವಜನಿಕರು ಸರ್ಕಾರಿ ಕಚೇರಿಗಳ ವೇಳೆಯಲ್ಲಿ ಕಚೇರಿ ಪ್ರವೇಶಿಸಿ, ಅನಧಿಕೃತವಾಗಿ ಫೋಟೋ ತೆಗೆಯು ವುದು, ವಿಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತಿದ್ದಾರೆ. ಇಂತಹ ಘಟನೆ ಗಳಿಂದ ಆಯಾ ಇಲಾಖೆಗಳು ಮತ್ತು ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ. ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಇದೇ ಫೆಬ್ರುವರಿ 25ರಂದು ಮನವಿ ಸಲ್ಲಿಸಿದ್ದರು.

‘ನೌಕರರ ಸಂಘದ ಅಧ್ಯಕ್ಷರ ಮನವಿಯನ್ನು ಪರಿಶೀಲಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಳೆಯಲ್ಲಿ ಅನಧಿಕೃತವಾಗಿ ಫೋಟೋ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿರ್ಬಂಧಿಸುವುದು ಅಗತ್ಯ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.