ನವದೆಹಲಿ: ಇಲ್ಲಿನ ನೂತನ ಕರ್ನಾಟಕ ಭವನದ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂದು ವಿಧಾನಮಂಡಲದ ಅಂದಾಜು ಸಮಿತಿ ಅಸಮಾಧಾನ ವ್ಯಕ್ತಪಡಿಸಿತು.
ಅಧ್ಯಕ್ಷ ಯಶವಂತರಾಯಗೌಡ ಪಾಟೀಲ, ಸದಸ್ಯರಾದ ಬಿ.ಆರ್.ಪಾಟೀಲ, ಎಸ್.ಮುನಿರಾಜು ಮತ್ತಿತರರನ್ನು ಒಳಗೊಂಡ ಸಮಿತಿಯು ಭವನದ ಕಾಮಗಾರಿಯನ್ನು ಪರಿಶೀಲಿಸಿತು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.
ಕಟ್ಟಡದ ಗುಣಮಟ್ಟದ ಬಗ್ಗೆ ಭಾರತೀಯ ತಾಂತ್ರಿಕ ಸಂಸ್ಥೆಯಿಂದ (ಐಐಟಿ) ಪರಿಶೀಲನೆ ನಡೆಸಲು ಹಾಗೂ ತಟಸ್ಥ ಸಂಸ್ಥೆಯಿಂದ ಲೆಕ್ಕಪರಿಶೋಲನೆ ನಡೆಸಬೇಕು. ಅಲ್ಲಿಯವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದು ಸಮಿತಿ ತಾಕೀತು ಮಾಡಿತು.
ಭವನದ ಯೋಜನಾ ವಿನ್ಯಾಸ, ಗುಣಮಟ್ಟ ಹಾಗೂ ಕಾಮಗಾರಿ ವಿಳಂಬದ ಬಗ್ಗೆ ಪರಿಶೀಲನೆಗೆ ಸಮಿತಿ ರಚನೆ ಮಾಡುವಂತೆ ಕೋರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲು ಸಮಿತಿ ತೀರ್ಮಾನಿಸಿತು. ಕಾಮಗಾರಿಯ ಮೇಲ್ವಿಚಾರಣೆ ನೋಡಿಕೊಂಡ ಸ್ಥಾನೀಯ ಆಯುಕ್ತರು, ಲೋಕೋಪಯೋಗಿ ಕಾರ್ಯದರ್ಶಿ ಹಾಗೂ ಎಂಜಿನಿಯರ್ ಅವರಿಗೆ ನೋಟಿಸ್ ನೀಡಲು ಸಹ ಸಮಿತಿ ಸೂಚಿಸಿತು.
ಕೌಟಿಲ್ಯ ಮಾರ್ಗದಲ್ಲಿರುವ 51 ವರ್ಷ ಹಳೆಯದಾದ ಮೂರಂತಸ್ತಿನ ಬೃಹತ್ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಅಂದಾಜು ₹ 82 ಕೋಟಿ ವೆಚ್ಚದಲ್ಲಿ ಐದು ಅಂತಸ್ತಿನ ನೂತನ ಕಟ್ಟಡ ಕಟ್ಟುವುದಕ್ಕೆ ಕರ್ನಾಟಕ ಸರ್ಕಾರವು 2019ರ ಮಾರ್ಚ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿತ್ತು. ಆಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು ಹಾಗೂ ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದರು.
‘ಶಂಕುಸ್ಥಾಪನೆ ನೆರವೇರಿಸಿ ಐದು ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಟ್ಟಡ ಹೊರನೋಟಕ್ಕೆ ಚೆನ್ನಾಗಿ ಕಾಣುತ್ತದೆ. ಶಾಸಕರಿಗಾಗಿ 52 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇಕ್ಕಟ್ಟಾದ ಕೊಠಡಿಗಳಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಶಾಸಕರ ಕೊಠಡಿಗಳ ನಡುವಿನಲ್ಲೇ ಪಿಲ್ಲರ್‌ಗಳು ಇವೆ. ಆದರೆ, ಅಧಿಕಾರಿಗಳಿಗೆ ವಿಶಾಲವಾದ ಕೊಠಡಿಗಳನ್ನು ನಿರ್ಮಿಸಲಾಗಿದೆ ಹಾಗೂ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ’ ಎಂದು ಸಮಿತಿಯು ಅಸಮಾಧಾನ ವ್ಯಕ್ತಪಡಿಸಿತು. ಇದರಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಸ್ಥಾನೀಯ ಆಯುಕ್ತರು ಹಾಗೂ ಉಸ್ತುವಾರಿ ಎಂಜಿನಿಯರ್ ಲೋಪ ಎದ್ದು ಕಾಣುತ್ತಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿತು.
‘ಕಟ್ಟಡದ ಮೂಲ ವಿನ್ಯಾಸದಲ್ಲೇ ಲೋಪ ಇದೆ. ಸರ್.ಎಂ. ವಿಶ್ವೇಶ್ವರಯ್ಯ ನಾಡಿನಿಂದ ಬಂದವರು ಈ ರೀತಿ ಯೋಜನೆ ರೂಪಿಸುತ್ತಾರೆ ಎಂದರೆ ನಂಬಲು ಅಸಾಧ್ಯ’ ಎಂದು ಸಮಿತಿ ಸದಸ್ಯರೊಬ್ಬರು ಹೇಳಿದರು.
‘ಮಧ್ಯಪ್ರದೇಶದ ಭವನದ ಕಾಮಗಾರಿಯನ್ನೂ ಇದೇ ವೇಳೆ ವೀಕ್ಷಿಸಿದೆವು. ಒಂದೂವರೆ ವರ್ಷಗಳಲ್ಲೇ ಪಂಚತಾರಾ ಹೋಟೆಲ್ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅಲ್ಲಿ ಮಧ್ಯಪ್ರದೇಶದ ಸೊಗಡು ಇದೆ. ಆದರೆ, ಕರ್ನಾಟಕ ಭವನದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಕೋವಿಡ್ ನೆಪ ಹೇಳಿದರು’ ಎಂದು ಸಮಿತಿಯ ಮತ್ತೊಬ್ಬ ಸದಸ್ಯರು ತಿಳಿಸಿದರು.
‘ಆರಂಭದಲ್ಲಿ ಯೋಜನಾ ವೆಚ್ಚ ₹82 ಕೋಟಿ ಇತ್ತು. ಬಳಿಕ ₹120 ಕೋಟಿಗೆ ಏರಿತು. ಈಗ ₹147 ಕೋಟಿಗೆ ಜಿಗಿದಿದೆ. ಗುತ್ತಿಗೆದಾರರಿಗೆ ಈವರೆಗೆ ₹65 ಕೋಟಿ ಪಾವತಿ ಮಾಡಲಾಗಿದೆ. ₹15 ಕೋಟಿ ಪಾವತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಉಳಿದ ಮೊತ್ತ ಪಾವತಿ ಮಾಡದಂತೆ ಸೂಚಿಸಿದ್ದೇವೆ’ ಎಂದರು.
‘ಕಳೆದ ಮೂರು–ನಾಲ್ಕು ವರ್ಷಗಳಲ್ಲಿ ಕರ್ನಾಟಕ ಭವನದಲ್ಲಿ ನಾಲ್ಕೈದು ಐಎಎಸ್ ಅಧಿಕಾರಿಗಳು (ಸ್ಥಾನೀಯ ಆಯುಕ್ತರು, ಸಹಾಯಕ ಸ್ಥಾನೀಯ ಆಯುಕ್ತರು) ಇದ್ದರು. ಅವರೆಲ್ಲ ಈ ಕಾಮಗಾರಿ ಬಗ್ಗೆ ನಿಗಾ ವಹಿಸಿಲ್ಲ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.