ADVERTISEMENT

ಸಿಎಂ ಸಿದ್ದರಾಮಯ್ಯ ಭಾವಚಿತ್ರದ ಮೇಲೆ ಬರದ ಗೆರೆಗಳನ್ನು ಮೂಡಿಸಿದ ಕರ್ನಾಟಕ ಬಿಜೆಪಿ

ಕರ್ನಾಟಕ ಬಿಜೆಪಿ X ತಾಣದಲ್ಲಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2023, 13:49 IST
Last Updated 13 ಸೆಪ್ಟೆಂಬರ್ 2023, 13:49 IST
<div class="paragraphs"><p>ಕರ್ನಾಟಕ ಬಿಜೆಪಿ ಹಂಚಿಕೊಂಡಿರುವ ಚಿತ್ರ</p></div>

ಕರ್ನಾಟಕ ಬಿಜೆಪಿ ಹಂಚಿಕೊಂಡಿರುವ ಚಿತ್ರ

   

ಕರ್ನಾಟಕ ಬಿಜೆಪಿ ಟ್ವಿಟರ್

ಬೆಂಗಳೂರು: ರಾಜ್ಯದಲ್ಲಿ ಹಲವು ಕಡೆ ಮಳೆ ಕೊರತೆಯಿಂದ ಬರದ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಬಗ್ಗೆ ಇತ್ತೀಚೆಗೆ ಸಭೆ ನಡೆಸಿ 100 ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಿ ಘೋಷಣೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ADVERTISEMENT

ಆದರೆ, ಇದೇ ವಿಷಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ X ತಾಣದಲ್ಲಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.

ಸಿದ್ದರಾಮಯ್ಯ ಅವರನ್ನು ‘ಬರ ಗ್ಯಾರಂಟಿ ಸಿಎಂ’ ಎಂದು ಲೇವಡಿ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ’ ಎಂದು ಸಿದ್ದರಾಮಯ್ಯ ಅವರ ಚಿತ್ರದ ಮೇಲೆ ಬರದ ಗೆರೆಗಳನ್ನು ಮೂಡಿಸಿದೆ.

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ "ಬರ" ಎಂಬ ಗ್ಯಾರಂಟಿ ಖಚಿತ ಮತ್ತು ನಿಶ್ಚಿತ. ಕಾಂಗ್ರೆಸ್ ರಾಜ್ಯವನ್ನು ಆಳಿದ ಅವಧಿಯ ಬಹುಪಾಲು ರಾಜ್ಯ ಬರಪೀಡಿತವಾಗಿತ್ತು. ಆದರೆ ಈ ಬಾರಿ ತುಸು ಹೆಚ್ಚೇ ಎಂಬಂತೆ ಬರದ ಕರಿಛಾಯೆ, ರಾಜ್ಯದ ಜನತೆಯ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಾಗಿರುವ ಕೋಲಾರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಕೆರೆಕಟ್ಟೆಗಳು ತುಂಬಿ ಕೋಡಿ ಹರಿದಿದ್ದವು. ಆದರೆ, ಈ ವರ್ಷ ಅತಿ ಹೆಚ್ಚು ಮಳೆ ಬೀಳುವ ಮಲೆನಾಡು ಸಹ ಬರಗಾಲದ ನಾಡಾಗಿದೆ. ಕಳೆದ ವರ್ಷ ತುಂಬಿ ತುಳುಕುತ್ತಿದ್ದ ಜಲಾಶಯಗಳು ಒಂದೆರೆಡು ತಿಂಗಳಲ್ಲಿ ಬರಿದಾಗುವ ಹಂತ ತಲುಪಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯರವರ ಈ ಮೂರು ತಿಂಗಳ ಸರ್ಕಾರದ ಅವಧಿಯಲ್ಲಿ ಈಗಾಗಲೇ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಗಳನ್ನು ಲೇವಡಿ ಮಾಡುವಷ್ಟು ಸೊಕ್ಕು, ಸಿದ್ದರಾಮಯ್ಯರವರ ಸಂಪುಟದ ಸಚಿವರಿಗೆ ಬಂದಿದೆ. ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಅವೆರಡೂ ಇಲ್ಲವಾದರೆ ಬೆಲೆ ಕುಸಿತ. ಹೀಗಿದೆ ನಮ್ಮ ರೈತನ ಬದುಕು. ನಮಗೆ ಸರಿಯಾಗಿ ಬೆಳೆ ಬಂದು, ಆ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕರೆ ನಾವು ಸರ್ಕಾರಕ್ಕೆ ಬೇಕಿದ್ದರೆ ಸಾಲ ಕೊಡುತ್ತೇವೆ ಎಂಬ ಸ್ವಾಭಿಮಾನಿ ರೈತರ ಜೀವನ ಈಗ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗುತ್ತಿದೆ. ರೈತರ ಜೀವನ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಬಾರದು ಎಂಬ ಕಾರಣಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ ₹4000 ನೀಡುತ್ತಿದ್ದ ಬಿಜೆಪಿ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದುಕೊಂಡಿದೆ ಎಂದು ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.