ADVERTISEMENT

ವಾಲ್ಮೀಕಿ ಹಗರಣ: ಸಂಸತ್‌ನಲ್ಲಿ ಕೋಲಾಹಲ

ಸಿಬಿಐಗೆ ವಹಿಸುವಂತೆ ಬಿಜೆಪಿ, ಜೆಡಿಎಸ್ ಸಂಸದರು ಸಂಸತ್ ಭವನದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 23:30 IST
Last Updated 26 ಜುಲೈ 2024, 23:30 IST
ಸಂಸತ್‌ ಭವನದ ಎದುರು ಬಿಜೆಪಿ ಹಾಗೂ ಜೆಡಿಎಸ್‌ ಸಂಸದರು ಶುಕ್ರವಾರ ಪ್ರತಿಭಟನೆ ನಡೆಸಿದರು. 
ಸಂಸತ್‌ ಭವನದ ಎದುರು ಬಿಜೆಪಿ ಹಾಗೂ ಜೆಡಿಎಸ್‌ ಸಂಸದರು ಶುಕ್ರವಾರ ಪ್ರತಿಭಟನೆ ನಡೆಸಿದರು.     

ನವದೆಹಲಿ: ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಗರಣ ಸಂಸತ್‌ನ ಉಭಯ ಸದನಗಳಲ್ಲಿ ಶುಕ್ರವಾರ ಪ್ರತಿಧ್ವನಿಸಿ ಕೋಲಾಹಲಕ್ಕೆ ಕಾರಣವಾಯಿತು.

ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಸಂಸದರು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು. ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯುತ್ತೇವೆ ಎಂದು ಘೋಷಿಸಿದರು. ಉಭಯ ಸದನಗಳಲ್ಲಿ ವಿಷಯ ಪ್ರಸ್ತಾಪಿಸಿದರು. ಬಳಿಕ ಬಿಜೆಪಿಯ ಇಬ್ಬರು ಸಂಸದರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್‌ ಸರ್ಕಾರದ ಮೂಲಕ ವಾಗ್ದಾಳಿ ನಡೆಸಿದರು. ಈ ಮೂಲಕ, ಈ ಹಗರಣವನ್ನು ರಾಷ್ಟ್ರ ಮಟ್ಟದ ಚರ್ಚೆಯ ವಿಷಯವನ್ನಾಗಿ ಮಾಡುವ ಪ್ರಯತ್ನ ನಡೆಸಿದರು.

ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ವಿಷಯ ಪ್ರಸ್ತಾಪಿಸಿ, ‘ಕರ್ನಾಟಕದಲ್ಲಿ ಬಹುದೊಡ್ಡ ಹಗರಣ ನಡೆದಿದೆ. ₹180 ಕೋಟಿ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ರಾಜೀನಾಮೆ ನೀಡಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದರು. ಆಗ ಲೋಕಸಭಾಧ್ಯಕ್ಷ ಓಂ ಬಿರ್ಲಾ, ‘ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುವುದಿಲ್ಲ’ ಎಂದರು.

ADVERTISEMENT

ಬೇರೆ ಸಂಸದರಿಗೆ ವಿಷಯ ಪ್ರಸ್ತಾಪಿಸಲು ಅನುವು ಮಾಡಿಕೊಟ್ಟರು. ಇದರಿಂದ ಕುಪಿತಗೊಂಡ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಸಂಸದ ಅನುರಾಗ್‌ ಠಾಕೂರ್ ಅವರು ‘ಇದೊಂದು ಗಂಭೀರ ಹಗರಣ. ಸಿದ್ದರಾಮಯ್ಯ ಭಾಗಿಯಾಗಿರುವ ಹಗರಣದ ಚರ್ಚೆಗೆ ಅವಕಾಶ ನೀಡಲೇಬೇಕು’ ಎಂದು ಪಟ್ಟು ಹಿಡಿದರು. ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸದಸ್ಯರು ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು. ಸದನದಲ್ಲಿ ಗದ್ದಲ ಜಾಸ್ತಿಯಾಗಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವನ್ನು ತಕ್ಷಣವೇ ಚರ್ಚಿಸಲು ಸಲ್ಲಿಸಿದ ನೋಟಿಸ್‌ಗೆ ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್ ಅನುಮತಿ ನಿರಾಕರಿಸಿದರು. ಆದರೆ, ಬಿಜೆಪಿ ಸದಸ್ಯ ಈರಣ್ಣ ಕಡಾಡಿ ಅವರಿಗೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಈ ವಿಷಯ ಕಾರ್ಯಕಲಾಪದ ಪಟ್ಟಿಯಲ್ಲಿ ಇರಲಿಲ್ಲ. ಕ್ರಿಯಾಲೋಪ ಆಗಿದೆ’ ಎಂದು ಕಾಂಗ್ರೆಸ್‌ನ ರಣದೀಪ್ ಸಿಂಗ್ ಸುರ್ಜೆವಾಲಾ, ತಿರುಚ್ಚಿ ಶಿವ, ಪಿ.ಚಿದಂಬರಂ, ಮುಕುಲ್‌ ವಾಸ್ನಿಕ್‌ ಮತ್ತಿತರರು ಆಕ್ಷೇಪಿಸಿದರು.

ರಣದೀಪ್ ಸಿಂಗ್ ಸುರ್ಜೆವಾಲಾ, ‘ಬಿಜೆಪಿ ಸದಸ್ಯರು ಇಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಧನಕರ್‌, ‘ಇದರಲ್ಲಿ ಕ್ರಿಯಾಲೋಪ ಏನಿದೆ. ನೀವು ರಾಜಕೀಯ ನಾಟಕ ಆಡುತ್ತಿದ್ದೀರಿ’ ಎಂದು ತಿರುಗೇಟು ನೀಡಿದರು. ಕಡಾಡಿ ಅವರಿಗೆ ಅವಕಾಶ ನೀಡಿದ್ದನ್ನು ಪ್ರತಿಭಟಿಸಿ ಕಾಂಗ್ರೆಸ್‌ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.

ಆಗ ಧನಕರ್‌, ‘ನಿಯಮ 267ರಡಿ ಕಡಾಡಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅನುವು ಮಾಡಿಕೊಡಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ವಿಪಕ್ಷ ಸಂಸದರಾದ ಜಯಾ ಬಚ್ಚನ್‌ ಹಾಗೂ ಸುಶ್ಮಿತಾ ದೇವ್‌, ‘ನಿಯಮ 267ರಡಿ ಅಸ್ಸಾಂ ಪ್ರವಾಹದಂತಹ ಗಂಭೀರ ವಿಷಯದ ಬಗ್ಗೆ ಚರ್ಚಿಸಲು ನೋಟಿಸ್‌ ನೀಡಲಾಗಿತ್ತು. ಆದರೆ, ತಮಗೆ ಅವಕಾಶ ನೀಡಿಲ್ಲ.’ ಎಂದು ದೂರಿದರು. ‘ಯಾವುದೇ ಸಂಸದರು ನನ್ನನ್ನು ಸಂಪರ್ಕಿಸಿದರೆ ಅವರಿಗೆ ಅವಕಾಶ ನೀಡುತ್ತೇನೆ’ ಎಂದು ಧನಕರ್‌ ಭರವಸೆ ನೀಡಿದರು.

ಕಾಂಗ್ರೆಸ್‌ ಸದಸ್ಯರ ‍ಪ್ರತಿಭಟನೆಯ ನಡುವೆಯೇ ಕಡಾಡಿ ಮಾತನಾಡಿ, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಹಾಡಹಗಲೇ ದರೋಡೆ ಮಾಡಲಾಗಿದೆ. ನಿಗಮದ ₹187 ಕೋಟಿ ಮೊತ್ತ ತೆಲಂಗಾಣ, ಕರ್ನಾಟಕ ಹಾಗೂ ಆಂಧ್ರ ಪ್ರದೇಶದ 270 ಬೇನಾಮಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಬಣ್ಣ ಬಯಲು: ಬೊಮ್ಮಾಯಿ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಜ ಬಣ್ಣ ಬಯಲಾಗಿದ್ದು ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರು ಬಿಡಿಎನಲ್ಲಿ‌ ರಿಡೂ ಮಾಡಿ ಸಿಲುಕಿಕೊಂಡಿದ್ದರು. ಆಗ ಕೆಂಪಣ್ಣ ಆಯೋಗ ರಚನೆ ಮಾಡಿ ಪ್ರಕರಣ ಮುಚ್ಚಿ ಹಾಕಿದರು. ಈ ಮಧ್ಯೆ ಮಂಡ್ಯದಲ್ಲಿ ಮುಡಾ ಹಗರಣ ಆಯಿತು. ಆಗ ಸಿದ್ದರಾಮಯ್ಯ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಟ್ಟರು. ಈಗ ಮೈಸೂರಿನಲ್ಲಿ ಮುಡಾ ಹಗರಣ ಆಗಿದೆ. ಅದನ್ನು ಯಾಕೆ ಸಿಬಿಐಗೆ ವಹಿಸಿಲ್ಲ’ ಎಂದು ಪ್ರಶ್ನಿಸಿದರು.

‘ಮಂಡ್ಯದಲ್ಲಿ ನಡೆದ ಅಕ್ರಮದ ಆರೋಪ ಪ್ರತಿಪಕ್ಷದವರ ಮೇಲೆ ಇತ್ತು ಎಂಬ ಕಾರಣಕ್ಕೆ ಸಿಬಿಐಗೆ ವಹಿಸಿದರು. ಮೈಸೂರಿನ ಮುಡಾದಲ್ಲಿ ನಡೆದ ಹಗರಣದಲ್ಲಿ ನಿಮ್ಮ ಹೆಸರಿದೆ ಎಂಬ ಕಾರಣಕ್ಕೆ ತನಿಖೆಗೆ ಆಯೋಗ ರಚನೆ ಮಾಡಿದ್ದೀರಿ. ರಾಜ್ಯದಲ್ಲಿ ಯಾವ ನ್ಯಾಯಾಂಗ‌ ಆಯೋಗ ಯಾವ ಹಗರಣವನ್ನು ಬಯಲಿಗೆಳೆದಿದೆ’ ಎಂದು ಅವರು ಪ್ರಶ್ನಿಸಿದರು.  ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ‘ರಾಜ್ಯದಲ್ಲಿ ಬಹುದೊಡ್ಡ ಹಗರಣಗಳು ನಡೆದಿವೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮೌನ ತಾಳಿದ್ದಾರೆ. ಅವರ ಜೇಬಿಗೆ ಹೋಗಿರುವ ಹಣವೆಷ್ಟು’ ಎಂದು ‍ಪ್ರಶ್ನಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪ್ರತಿ ತಿಂಗಳು ಹೈಕಮಾಂಡ್‌ಗೆ ₹150 ಕೋಟಿ ಕೊಡಬೇಕಿದೆ. ಹೀಗಾಗಿ ಸರ್ಕಾರ ಹಲವು ಹಗರಣಗಳಲ್ಲಿ ಭಾಗಿಯಾಗಿದೆ. ದಲಿತರ ಹಾಗೂ ಹಿಂದುಳಿದವರ ಪರ ಎಂದು ಬಿಂಬಿಸಿಕೊಂಡಿದ್ದ ಕಾಂಗ್ರೆಸ್‌ನ ಮುಖವಾಡ ಕಳಚಿ ಬಿದ್ದಿದೆ’ ಎಂದು ವಾಗ್ದಾಳಿ ನಡೆಸಿದರು.

ಸುಧಾಕರ್‌ ಕೋಟ ಗೈರು
ಪ್ರತಿಭಟನೆಗೆ ಬಿಜೆಪಿ ಸಂಸದರಾದ ಕೆ.ಸುಧಾಕರ್‌ ಕೋಟ ಶ್ರೀನಿವಾಸ ಪೂಜಾರಿ ಹಾಗೂ ತೇಜಸ್ವಿ ಸೂರ್ಯ ಗೈರುಹಾಜರಾಗಿದ್ದರು.  ಕೋವಿಡ್‌ ಹಗರಣದಲ್ಲಿ ಸುಧಾಕರ್‌ ಹಾಗೂ ಭೋವಿ ನಿಗಮದ ಅಕ್ರಮದಲ್ಲಿ ಕೋಟ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಸದನದಲ್ಲಿ ಆರೋಪಿಸಿದ್ದರು.

ಬೊಮ್ಮಾಯಿ ಸಾಚಾ ಅಲ್ಲ: ಚಂದ್ರಶೇಖರ್

‘ಐದು ವರ್ಷಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಕಾರಣಕ್ಕೆ ಬಿಜೆಪಿಯವರನ್ನು ಕರ್ನಾಟಕದ ಜನರು ಮನೆಗೆ ಕಳುಹಿಸಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸಾಚಾಗಳಲ್ಲ. ಅವರೆಲ್ಲ ಭ್ರಷ್ಟಾಚಾರ ನಡೆಸಿದವರೇ’ ಎಂದು ಕಾಂಗ್ರೆಸ್‌ನ ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘ವಾಲ್ಮೀಕಿ ನಿಗಮದ ಹಗರಣ ಆರಂಭವಾಗಿದ್ದೇ ಬಿ.ಶ್ರೀರಾಮುಲು ಕಾಲದಲ್ಲಿ. ಅವರಿಗೆ ನೈತಿಕತೆ ಇಲ್ಲ. ರಾಷ್ಟ್ರೀಯ ನಾಯಕರನ್ನು ಖುಷಿಪಡಿಸಲು ಪ್ರತಿಭಟನೆ ನಾಟಕ ನಡೆಸುತ್ತಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಅನುದಾನ ನೀಡಿಲ್ಲ. ಬಿಜೆಪಿಯವರಿಗೆ ತಾಕತ್ತು ಇದ್ದರೆ ಕೇಂದ್ರ ಸರ್ಕಾರದ ತಾರತಮ್ಯದ ಬಗ್ಗೆ ಪ್ರತಿಭಟನೆ ನಡೆಸಬೇಕಿತ್ತು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.