ADVERTISEMENT

ಸ್ತ್ರೀ ನಿಂದನೆ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ತೀವ್ರ ಆಕ್ರೋಶ

ಕ್ಷಮೆ ಕೇಳಲಿ: ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 19:32 IST
Last Updated 3 ಸೆಪ್ಟೆಂಬರ್ 2022, 19:32 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ಬೆಂಗಳೂರು: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರನ್ನು ಏಕವಚನದಲ್ಲಿ ನಿಂದಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಶಾಸಕರು ನಿಂದಿಸಿರುವ ವಿಡಿಯೊ ತುಣುಕು ಟ್ಯಾಗ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ‌ಹರಿಹಾಯ್ದಿದ್ದಾರೆ. ಶಾಸಕರಾಗಿ ಮುಂದುವರಿಯಲು ಲಿಂಬಾವಳಿ ಅನರ್ಹರು ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ‘ಸ್ತ್ರೀ ಉದ್ಧಾರಕರಂತೆ ಕೇವಲ ಬೂಟಾಟಿಕೆ ಮಾತಾಡುವ ಬಿಜೆಪಿಗರೇ, ನಿಮ್ಮ ಪಕ್ಷದ ಅರವಿಂದ ಲಿಂಬಾವಳಿಯವರು ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇಂಥ ಮಹಿಳಾ ವಿರೋಧಿ ನಡೆಯ ವಿರುದ್ಧ ಮಾತನಾಡುವ ಧೈರ್ಯ ತೋರುತ್ತೀರಾ’ ಎಂದು ಪ್ರಶ್ನಿಸಿರುವ ಅವರು, ‘ಅರವಿಂದ ಲಿಂಬಾವಳಿ ಯವರು ಆ ಮಹಿಳೆಯ ಕ್ಷಮೆ ಕೇಳುತ್ತಾರೆಯೇ’ ಎಂದೂ ಕೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಘಟಕವೂ ಟ್ವೀಟ್ ಮಾಡಿದ್ದು, ‘ಮಹಿಳೆಯನ್ನು ಮಾಧುಸ್ವಾಮಿ ನಿಂದಿಸಿದ್ದರು, ಸಿದ್ದು ಸವದಿ ಮಹಿಳೆಗೆ ಹಲ್ಲೆ ಮಾಡಿದ್ದರು, ಉದ್ಯೋಗ ಕೇಳಿದಾಕೆಯನ್ನು ರಮೇಶ ಜಾರಕಿಹೊಳಿ ಮಂಚ ಹತ್ತಿಸಿದ್ದರು. ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಇದೀಗ, ಅರವಿಂದ ಲಿಂಬಾವಳಿ ಮಹಿಳೆಯ ಮೇಲೆ ದರ್ಪ ಮೆರೆದಿದ್ದಾರೆ.‌ ಇದೇನಾ ಬಿಜೆಪಿಯ ಸ್ತ್ರೀ ಗೌರವದ ಸಂಸ್ಕೃತಿ’ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಪತ್ರಿಕಾಗೋಷ್ಠಿ ನಡೆಸಿ, ‘ಲಿಂಬಾವಳಿಯವರು ಮಹಿಳೆಯ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬಿಜೆಪಿ ನಾಯಕರು ಅವರ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಆಯೋಗಕ್ಕೆ ಎಎಪಿ ದೂರು: ಲಿಂಬಾವಳಿ ವಿರುದ್ಧ ಆಮ್‌ ಆದ್ಮಿ ಪಕ್ಷ (ಎಎಪಿ) ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ‘ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಲಿಂಬಾವಳಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಎಎಪಿ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಆಗ್ರಹಿಸಿದರು.

ಮಹಿಳೆ ವಿರುದ್ಧ ಎಫ್‌ಐಆರ್
ಸರ್ಕಾರಿ ಜಾಗ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿದ್ದ ಆರೋಪದಡಿ ರುತ್ ಸಗಾಯಿ ಮೇರಿ ಅಮೀಲಾ ವಿರುದ್ಧ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಂದಾಯ ಅಧಿಕಾರಿ ಪಾರ್ಥಸಾರಥಿ ದೂರು ನೀಡಿದ್ದಾರೆ. ಇದರನ್ವಯ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಾನೇನು ರೇಪ್ ಮಾಡಿದ್ದೀನಾ?’
‘ಆಕೆ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಮಹಿಳೆಗೆ ನಾನು ಏನೋ ಮಾಡಿದ್ದೀನಿ ಎನ್ನುವಂತೆ ಮಾಧ್ಯಮಗಳು ಹೇಳುತ್ತಿವೆ. ನಾನೇನು ರೇಪ್ ಮಾಡಿದ್ದೀನಾ’ ಎಂದು ಅರವಿಂದ ಲಿಂಬಾವಳಿ ಪ್ರಶ್ನಿಸಿರುವುದು ಟೀಕೆಗೆ ಗುರಿಯಾಗಿದೆ.

ಮಹಿಳೆಯೊಬ್ಬರಿಗೆ ನಿಂದಿಸಿದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮುಂದಾದ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸುವಾಗ ಸಿಟ್ಟಾದ ಲಿಂಬಾವಳಿ ಈ ರೀತಿ ಅಸಹನೆ ತೋರಿದರು. ಈ ವಿಡಿಯೊ ತುಣುಕು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.