ADVERTISEMENT

ಕೇಂದ್ರದಿಂದ 5.8ಕೋಟಿ ಬಿಪಿಎಲ್ ಕಾರ್ಡ್‌ ರದ್ದತಿಗೆ ಮೌನವೇಕೆ?: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 8:05 IST
Last Updated 21 ನವೆಂಬರ್ 2024, 8:05 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

– ಪ್ರಜಾವಾಣಿ ಚಿತ್ರ

ಮಂಗಳೂರು: 'ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡಿದ ಬಗ್ಗೆ ಪ್ರಶ್ನಿಸುವ ಬಿಜೆಪಿಯವರು, ಕೇಂದ್ರ ಸರ್ಕಾರವು ದೇಶದಾದ್ಯಂತ 5.80 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ ಪ್ರಶ್ನಿಸಿದರು.

ADVERTISEMENT

ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಕೆಲವು ಕಡೆ ಶೇ 80ರಷ್ಟು ಇನ್ನು ಕೆಲವೆಡೆ ಶೇ 90ರಷ್ಟು ಮಂದಿಗೆ ಬಿಪಿಎಲ್ ಕಾರ್ಡ್‌ ನೀಡಲಾಗಿದೆ. ವೈಜ್ಞಾನಿಕವಾಗಿ ನೋಡಿದಾಗ ಅದು ಸಾಧ್ಯವಿಲ್ಲ. ಹಾಗಾಗಿ ಅನರ್ಹ ಕಾರ್ಡ್‌ ತೆಗೆದು ಹಾಕಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರ ಕುಟುಂಬಗಳ ಬಿಪಿಎಲ್‌ ಪಡಿತರ ಚೀಟಿ ರದ್ದು ಮಾಡುವಂತೆ ಮಾನದಂಡ ರೂಪಿಸಲಾಗಿದೆ. ಸಾವಿರಾರು ಅನರ್ಹ ಕಾರ್ಡ್‌ಗಳು ರದ್ದಾದಾಗ, ಅವುಗಳಲ್ಲಿ ಐದು– ಹತ್ತು ಕಾರ್ಡ್‌ಗಳು ತಪ್ಪಾಗಿ ರದ್ದಾಗಿರಬಹುದು. ವ್ಯವಸ್ಥೆಯನ್ನು ಸುಧಾರಣೆಗೆ ಒಳಪಡಿಸುವಾಗ ಆಗಿರುವ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರದ್ದು. ಅರ್ಹರ ಕಾರ್ಡ್‌ ರದ್ದಾಗಿದ್ದರೆ, ಅಂತಹ ಕುಟುಂಬಗಳಿಗೆ ಮರಳಿ ಬಿಪಿಎಲ್‌ ಕಾರ್ಡ್ ಕೊಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸರ್ಕಾರದ ಸವಲತ್ತು ಅರ್ಹರಿಗೆ ಮಾತ್ರ ತಲುಪಬೇಕು. ತಪ್ಪನ್ನು ಸರಿಪಡಿಸಲೇ ಬಾರದು ಎಂಬುದು ಸರಿಯಲ್ಲ ಎಂದರು.

‘ಗೃಹಲಕ್ಷ್ಮೀ ಅಡಿ ನೀಡುವ ₹ 2 ಸಾವಿರಕ್ಕೂ ಪಡಿತರಕ್ಕೂ ಸಂಬಂಧ ಇಲ್ಲ. ಬಿಪಿಎಲ್ ಕಾರ್ಡ್‌ ಹಾಗೂ ಎಪಿಎಲ್ ಕಾರ್ಡ್‌ ಹೊಂದಿರುವ ಕುಟುಂಬಗಳೆರಡಕ್ಕೂ ಈ ಸವಲತ್ತು ಸಿಗುತ್ತಿದೆ. ಆದರೂ ಗೃಹಲಕ್ಷ್ಮೀ ಯೋಜನೆಗೆ ಕಂಟಕ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರಿಗೆ ಗೃಹಲಕ್ಷ್ಮೀ ಯೋಜನೆ ರದ್ದುಪಡಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ವಿರೋಧ ಪಕ್ಷದವರ ಕುಮ್ಮಕ್ಕಿನಿಂದ ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದರು.

ಸರ್ಕಾರಿ ಆಸ್ಪತ್ರೆಗಳ ಶುಲ್ಕ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಆಸ್ಪತ್ರೆಗಳ ಶುಲ್ಕ ಪರಿಷ್ಕರಣೆಯಿಂದ ಸಂಗ್ರಹವಾಗುವ ಮೊತ್ತ ಆಸ್ಪತ್ರೆಯ ಆರೋಗ್ಯ ಸುರಕ್ಷಾ ಸಮಿತಿಗೆ ಹೋಗುತ್ತದೆ. ಕೆಲವು ಶುಲ್ಕವನ್ನು ₹ 10ರಿಂದ ₹ 15ಕ್ಕೆ ₹ 50ರಿಂದ ₹ 70ಕ್ಕೆಹೆಚ್ಚಿಸಲಾಗಿದೆ. ಬಹಳ ವರ್ಷಗಳ ನಂತರ ಈ ಸಣ್ಣ ಪರಿಷ್ಕರಣೆ ಮಾಡಲಾಗಿದೆ. ಈ ನಿರ್ಧಾರದಿಂದ ಆಸ್ಪತ್ರೆಗಳಿಗೆ ಒಳ್ಳೆಯದಾಗಲಿದೆ.ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಆರೋಗ್ಯ ಸುರಕ್ಷಾ ಸಮಿತಿಗೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಮಟ್ಟದ ಆಸ್ಪತ್ರೆ ಸಮಿತಿಯಲ್ಲೂ ಶಾಸಕರು ಇರುತ್ತಾರೆ. ಆಸ್ಪತ್ರೆಯ ಶುಲ್ಕ ಹೆಚ್ಚಳಕ್ಕೂ ಗ್ಯಾರಂಟಿ ಯೋಜನೆಗೂ ತಳಕು ಹಾಕುವುದು ಸರಿಯಲ್ಲ’ ಎಂದರು.

ಕೇಂದ್ರದ ನಬಾರ್ಡ್‌ ಸಂಸ್ಥೆಯಿಂದ ರಾಜ್ಯಕ್ಕೆ ಸಾಲ ಹಂಚಿಕೆ ಕಡಿತವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ರಾಜ್ಯದ ಕೆಲವು ಸಂಸದರೂ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಪ್ರಹ್ಲಾದ ಜೋಷಿ ಅವರಂತಹ ಸಚಿವರು ಯಾವುದೋ ಆಸ್ಪತ್ರೆ ಶುಲ್ಕ ಹೆಚ್ಚಿಸಿದ್ದಕ್ಕೆ ಪ್ರತಿಕ್ರಿಯಿಸುತ್ತಾರೆ. ಆದರೆ, ₹ 2,500 ಕೋಟಿಗಳಷ್ಟು ನಬಾರ್ಡ್‌ ಸಾಲದ ಕಡಿತದ ವಿಚಾರದಲ್ಲಿ ಸುಮ್ಮನಿರುತ್ತಾರೆ. ಜಿಎಸ್‌ಟಿಯ ಪಾಲು ಹಂಚಿಕೆಯಲ್ಲಿ ರಜ್ಯಕ್ಕೆ ₹ 30 ಸಾವಿರ ಕೋಟಿಗಳಷ್ಟು ಕಡಿತದಂತಹ ಪ್ರಮುಖ ವಿಷಯದ ಬಗ್ಗೆ ಗಮನ ಕೊಡುವುದಿಲ್ಲ. ರಾಜ್ಯದ ಬಿಜೆಪಿಯ ಮುಖಂಡರು ಕೇಂದ್ರ ಸರ್ಕಾರದ ಗುಲಾಮರಾಗಿ ಬಿಟ್ಟಿದ್ದಾರೆ’ ಎಂದರು.

ಕಬ್ಬಿನಾಲೆ ಬಳಿ ನಕ್ಸಲ್‌ ಮುಖಂಡ ವಿಕ್ರಂ ಗೌಡ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ, ‘ನಕ್ಸಲ್ ವಾದ ಸಾಮಾಜಿಕ ವ್ಯವಸ್ಥೆಯ ಸಮಸ್ಯೆ ಅದನ್ನು ಬಗೆಹರಿಸುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಕ್ಸಲರನ್ನು ಮುಖ್ಯವಾಹಿನಿಗೆ ತರುವುದರ ಜೊತೆಗೆ ತೀವ್ರವಾದಿಗಳ ವಿರುದ್ಧ ಕ್ರಮವೂ ಆಗಬೇಕು. ಈ ಬಗ್ಗೆ ಗೃಹ ಇಲಾಖೆ ನೋಡಿಕೊಳ್ಳಲಿದೆ. ಜಿಲ್ಲಾಡಳಿತಕ್ಕೆ ಸಂಬಂಧಿಸಿದ ವಿಷಯ ಇದ್ದರೆ ನಾನು ಮಾತನಾಡುತ್ತೇನೆ. ನಕ್ಸಲ್ ವಾದಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನೂ ಸರ್ಕಾರ ಮಾಡಿದೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಮುಂದಾಗದ ಕಾರಣ ವಿಕ್ರಂ ಗೌಡ ಕ್ರೂರ ಅಂತ್ಯವನ್ನು ಕಾಣಬೇಕಾಯಿತು. ಯಾರನ್ನೂ ಕೊಲ್ಲುವ ಉದ್ದೇಶ ನಮ್ಮದಲ್ಲ. ’ ಎಂದು ಸ್ಪಷ್ಟಪಡಿಸಿದರು.

ಜಾರಿ ನಿರ್ದೇಶನಾಲಯ– ಬಿಜೆಪಿ ಏಜೆನ್ಸಿ:

‘ಜಾರಿ ನಿರ್ದೇಶನಾಲಯ ಇರುವುದೇ ವಿರೋಧ ಪಕ್ಷಗಳ ನಾಯಕರನ್ನು ಹೆದರಿಸಲು ಹಾಗೂ ಮಟ್ಟಹಾಕಲು. ಅದು ರಾಜಕೀಯ ಏಜೆನ್ಸಿ ತರಹ ಕೆಲಸ ಮಾಡುತ್ತಿದೆ. ಬಿಜೆಪಿಯ ಅಂಗ ಸಂಸ್ಥೆಯಾಗಿರುವ ಅದು ಈಗ ಭ್ರಷ್ಟಾಚಾರದ ವಿರುದ್ಧದ ಸಂಸ್ಥೆಯಾಗಿ ಉಳಿದಿಲ್ಲ. ಆ ಸಂಸ್ಥೆ ಜನರ ನಂಬಿಕೆಯನ್ನು ಹಾಗೂ ನೈತಿಕತೆಯನ್ನು ಕಳೆದುಕೊಂಡಿದೆ. ಅದರ ನಡವಳಿಕೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ಅಪಪ್ರಚಾರ ಮಾಡಿಸಿ ವಿರೋಧ ಪಕ್ಷಗಳ ನಾಯಕರ ಆತ್ಮಸ್ಥೈರ್ಯ ಕುಗ್ಗಿಸುವುದು, ವಿರೋಧ ಪಕ್ಷದವರನ್ನು ಬೆದರಿಸಿ ದುಡ್ಡು ಕಿತ್ತುಕೊಳ್ಳುವುದೇ ಅದರ ಕೆಲಸವಾಗಿಬಿಟ್ಟಿದೆ. ಇದು ದುರ್ದೈವ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.