ಬೆಂಗಳೂರು:ರೈತರು ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲ ಕುರಿತು ಸರ್ಕಾರಿ ಅಧಿಕಾರಿಗಳು, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಕ್ಷೇತ್ರ ಬ್ಯಾಂಕ್‌ಗಳ ಮತ್ತು ರೈತರೊಂದಿಗೆ ಚರ್ಚಿಸಿದ ಬಳಿಕ ಮೈತ್ರಿ ಸರ್ಕಾರದ ಮೊದಲ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಂಡಿಸಿದರು.
ಸಾಲ ಮನ್ನಾ ಹೇಗೆ? ಯಾರೆಲ್ಲಾ ರೈತರು ಈ ವ್ಯಾಪ್ತಿಯಲ್ಲಿ ಬರುತ್ತಾರೆ? ಸರ್ಕಾರ ವಿಧಿಸಿರುವ ಷರತ್ತುಗಳೇನು? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
* ರೈತರ ಪ್ರತಿ ಕುಟುಂಬಕ್ಕೆ ₹ 2 ಲಕ್ಷ ವರೆಗಿನ ಸಾಲಮನ್ನಾ(ಕುಟುಂಬವೆಂದರೆ ರೈತ ಆತನ ಪತ್ನಿ ಮತ್ತು ಅವಲಂಬಿತ ಮಕ್ಕಳು).
* 2009ರ ಏಪ್ರಿಲ್ 1ರ ನಂತರ 2017ರ ಡಿಸೆಂಬರ್ 31ರವರೆಗೆ ರೈತರು ಪಡೆದಿರುವ ಎಲ್ಲಾ ಸುಸ್ತಿ ಬೆಳೆ ಸಾಲ ಒಂದೇ ಹಂತದಲ್ಲಿ ಮನ್ನಾ.
* ಏನಿದು ಸುಸ್ತಿ: ಸಾಲವನ್ನು ಹಿಂತಿರುಗಿಸಲು ತಡ ಮಾಡಿದುದಕ್ಕಾಗಿ ತೆರುವ ಚಕ್ರಬಡ್ಡಿಯೇ ಸುಸ್ತಿ.
* ಈ ಅವಧಿಯಲ್ಲಿ ಬಾಕಿ ಉಳಿದ ಹಾಗೂ ಅವಧಿ ಮೀರಿದ, ಮರು ವರ್ಗೀಕರಣ ಮಾಡಲಾದ ಮತ್ತು ಎನ್‌ಪಿಎ ಬೆಳೆ ಸಾಲಗಳಿಗೆ ಅನ್ವಯ.
* ಬೆಳೆ ಸಾಲ ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮತ್ತು 12ರಿಂದ 18 ತಿಂಗಳಲ್ಲಿ ಮರುಪಾವತಿಸುವ ಸಾಲವನ್ನು ಬೆಳೆ ಸಾಲವನ್ನು ಎಂದು ಅರ್ಥೈಸಲಾಗುವುದು. ಇದು ಪ್ರಾಂಟೇಷನ್ ಮತ್ತು ತೋಟಗಾರಿಕೆಯ ಬೆಳೆಗಳಿಗೆ ನೀಡಿದ ಬೆಳೆ ಸಾಲವನ್ನು ಒಳಗೊಂಡಿದೆ.
* ಸಕಾಲದಲ್ಲಿ ಸಾಲ ಪಾವತಿ ಮಾಡಿದ ಸುಸ್ತಿದಾರರಲ್ಲದ ರೈತರ ಉತ್ತೇಜನಕ್ಕೆ ಅವರ ಖಾತೆಗೆ ಅವರು ಮರುಪಾವತಿ ಮಾಡಿರುವ ಸಾಲದ ಮೊತ್ತ ಅಥವಾ ₹ 25 ಸಾವಿರಗಳಲ್ಲಿ ಯಾವುದು ಕಡಿಮೆಯೋ ಅದನ್ನು ಸರ್ಕಾರ ತುಂಬಲಿದೆ.
* ಹೆಚ್ಚಿನ ಮೊತ್ತದ ಸಾಲಮನ್ನಾ ಮಾಡುವುದು ಸರಿಯಾದ ಕ್ರಮವಲ್ಲ. ದೊಡ್ಡ ಹಿಡುವಳಿದಾರ ರೈತರ ಸಾಲಗಳು 40 ಲಕ್ಷ ಮೀರಿದ ಪ್ರಸಂಗಳೂ ಇವೆ. ಆದ್ದರಿಂದ, ಸಾಲದ ಮೊತ್ತವನ್ನು ಮಿತಿಗೊಳಿಸಲಾಗಿದೆ.
* ರೈತರಿಗೆ ಒಟ್ಟು ₹ 34 ಸಾವಿರ ಕೋಟಿ ಪ್ರಯೋಜನ ದೊರೆಯಲಿದೆ.
ಯೋಜನೆ ಅಡಿ ಬರುವ ಸಂಸ್ಥೆಗಳು
* ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು
* ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
* ಖಾಸಗಿ ಬ್ಯಾಂಕುಗಳು
* ಪ್ರಾಥಮಿಕ ಸಹಕಾರ ಕ್ರೆಡಿಟ್ ಸೊಸೈಟಿಗಳು
* ರೈತರ ಸೇವೆ ಸಹಕಾರ ಸಂಘಗಳಿಂದ ಪಡೆದಿರುವ ಬೆಳೆ ಸಾಲ
* ಕೆಸಿಸಿ(ಕಿಸಾನ್ ಕ್ರೆಡಿಟ್ ಕಾರ್ಡ್) ಸಾಲಗಳು
ಅರ್ಹ ಮೊತ್ತ ಮತ್ತು ಯೋಜನೆ ಅವಧಿ
* 2017ರ ಡಿ. 31ರ ಅಂತ್ಯಕ್ಕೆ ಬ್ಯಾಂಕ್‌ದಾಖಲೆಗಳಲ್ಲಿ ಬಾಕಿ ಇದ್ದ ಸಾಲ
* ಅಥವಾ ಒಂದು ಕುಟುಂಬಕ್ಕೆ ₹2 ಲಕ್ಷ
ಮೇಲಿನ ಎರಡಲ್ಲಿ ಕಡಿಮೆ ಇರುವ ಮೊತ್ತವು ಸಾಲ ಮನ್ನಾ ಮಾಡುವ ಗರಿಷ್ಠ ಮೊತ್ತವಾಗಿರುತ್ತದೆ.
ಸಾಲಮನ್ನಾ ಯೋಜನೆ ಅಂದಾಜು ಫಲಾನುಭವಿಗಳು
* ರೈತರ ಒಟ್ಟು ಸಾಲ ಅಂದಾಜು ₹55,328 ಕೋಟಿ.
* ಫಲಾನುಭವಿಗಳು ಎಲ್ಲೆಲ್ಲಿ?: 1) ಸಾರ್ವಜನಿಕ ವಲಯ ಬ್ಯಾಂಕ್‌ಗಳು 2)ಖಾಸಗಿ ವಲಯ ಬ್ಯಾಂಕ್‌ಗಳು 3)ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು 4)ಸಹಕಾರಿ ವಲಯಗಳೊಂದಿಗೆ ಬೆಳೆ ಸಾಲ ಹೊಂದಿರುವವರು.
* ಸುಸ್ತಿ ಇರುವ ರೈತ ಅಂದಾಜು ಸಂಖ್ಯೆ: 17.35 ಲಕ್ಷ. ಈ ಸಾಲದ ಮೊತ್ತ ₹30,266 ಕೋಟಿ.
* ಚಾಲ್ತಿ ಸಾಲ ಹೊಂದಿರುವ ಸಾಲಗಾರ ಸಂಖ್ಯೆ: 27.67 ಲಕ್ಷ.
* ಚಾಲ್ತಿ ಮತ್ತು ಹಿಂದಿನ ಸಾಲ ಮರುಪಾವತಿ ಮಾಡಿದ ರೈತರಿಗೆ ದೊರೆಯಲಿರುವ ಪ್ರೋತ್ಸಾಹ ಧನದ ಒಟ್ಟು ಮೊತ್ತ: ₹6,893 ಕೋಟಿ.
* ರೈತರ 44.89 ಲಕ್ಷ ಸಾಲ ಖಾತೆಗಳಿಗೆ ಸಂಚಿತವಾಗಿ ₹ 37,159 ಕೋಟಿ ಪ್ರಯೋಜನ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.
ಅವಧಿ ಮೀರಿದ ಮತ್ತು ಚಾಲ್ತಿಯಲ್ಲಿರುವ ಸಾಲಗಳ ವಿವರ
* #) ಅಂದಾಜು ಮೊತ್ತವು ಸಹಕಾರ ವಲಯದ ಸಾಲಗಳನ್ನು ಒಳಗೊಂಡಿದೆ ಮತ್ತು ಅನುಷ್ಠಾನ ಸಮಯದಲ್ಲಿ ವೈಯಕ್ತಿಕ ಖಾತೆಗಳ ಪರಿಶೀಲನೆಗೆ ಒಳಪಟ್ಟಿದೆ.
* #) ಎನ್‌ಪಿಎ: ಸಾಲಗಳು ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ ಬೆಳೆ ಸಾಲಗಳು.
* #) ಮರುವರ್ಗೀಕರಿಸಿದ ಸಾಲಗಳು: ಹೆಚ್ಚು ವರ್ಷಗಳಿಗೂ ಅವಧಿ ಬೆಳೆ ಸಾಲಗಳು, ಬರಗಾಲ ಪೀಡಿತ ಪ್ರದೇಶಗಳಲ್ಲಿ ಅವಧಿ ಮೀರಿದ ಮರು ವರ್ಗೀಕರಿಸಿದ ಬೆಳೆ ಸಾಲಗಳು.
* #) ಅವಧಿ ಮೀರಿದ ಸಾಲಗಳು: ಒಂದು ವರ್ಷಕ್ಕಿಂತ ಕಡಿಮೆ ಅವಧಿ ಮೀರಿದ ಬೆಳೆ ಸಾಲಗಳು.
ಯೋಜನೆಯಿಂದ ಹೊರಗಿರುವವರು ಯಾರು?
* ಸಹಕಾರ ಸಂಘಗಳ ಸಾಲ ಮನ್ನಾ ಯೋಜನೆ ಅಡಿ ಪ್ರಯೋಜನವನ್ನು ಈಗಾಗಲೇ ಪಡೆದ ರೈತರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ.
* ಸರ್ಕಾರಿ ಅಧಿಕಾರಿಗಳು.
* ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು.
* 3 ವರ್ಷಗಳಿಂದ ತೆರಿಗೆ ಕಟ್ಟಿರುವ ರೈತರು.
* ಇತರ ಅನರ್ಹ ಸಾಲಗಾರರು.
ಯೋಜನೆಯಲ್ಲಿ ಬರದ ವರ್ಗಗಳು
* ವೈಯಕ್ತಿಕ ರೈತ/ಹಿಂದೂ ಅವಿಭಾಜ್ಯ ಕುಟುಂಬಗಳನ್ನು ಹೊರತುಪಡಿಸಿ ಎಲ್ಲಾ ಕಾನೂನುಬದ್ಧ ಸಂಸ್ಥೆಗಳು.
* ರೈತರಿಗೆ ನೀಡಲಾದ ಒಡವೆ/ಆಭರಣ(ಗೋಲ್ಡ್ ಲೋನ್) ಸಾಲಗಳು.
* ಟ್ರಸ್ಟ್‌ಗಳು, ಪಾಲುದಾರಿಕೆಗಳು, ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್/ನಗರ ಸಹಕಾರ ಬ್ಯಾಂಕುಗಳಿಂದ ನೀಡಲಾದ ಸಾಲಗಳು.
* ₹ 4 ಲಕ್ಷಗಳಿಗಿಂತ ಹೆಚ್ಚು ಆದಾಯ ಹೊಂದಿರುವ ಆದಾಯ ತೆರಿಗೆ ಪಾವತಿದಾರರು ಪಡೆದ ಬೆಳೆ ಸಾಲಗಳು.
* ವಾಹನಗಳ ಖರೀದಿ ಮತ್ತಿತರೆ ಆದ್ಯತೆಯಲ್ಲದ ಸಾಲಗಳು.
* ಕೃಷಿ ಉತ್ಪನ್ನ ಅಡವಿಟ್ಟುಕೊಂಡು ನೀಡಿರುವ ಸಾಲಗಳು.
* ಕೇಂದ್ರ ಸರ್ಕಾರದ ನೌಕರರಿಗೆ/ ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಅಥವಾ ಅದರ ಅಂಗಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯದ ಬ್ಯಾಂಕ್, ಶೈಕ್ಷಣಿಕ ಸಂಸ್ಥೆಗಳ ಉದ್ಯೋಗಿಗಳಿಗೆ ನೀಡಿದ ಸಾಲಗಳು.
* ಸಂಚಿತ ನಿಧಿಯಿಂದ ಮಾಸಿಕ ₹15 ಸಾವಿರಕ್ಕಿಂತ ಹೆಚ್ಚಿಗೆ ಪಿಂಚಣಿ ಪಡೆಯುತ್ತಿರುವ ನಿವೃತ್ತಿ ವೇತನದಾರರಿಗೆ(ಮಾಜಿ ಸೈನಿಕರನ್ನು ಹೊರತುಪಡಿಸಿ) ನೀಡಿರುವ ಬೆಳೆ ಸಾಲಗಳು.
* ಸ್ವ ಸಹಾಯ ಗುಂಪುಗಳು(ಎಸ್‌ಎಚ್‌ಜಿಗಳು) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು(ಜೆಎಲ್‌ಜಿ) ಪಡೆದ ಸಾಲಗಳು.
* ಕಾಂಟ್ರಾಕ್ಟ್ ಫಾರ್ಮಿಂಗ್‌ಗಾಗಿ ಪಡೆದ ಸಾಲಗಳು.
* ರೈತರಿಗೆ ಸಾಲ ನೀಡಲು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾದ ಸಾಲಗಳು.
* ಸಾಲದ ಮೊತ್ತವನ್ನು ದುರ್ಬಳಕೆ ಮಾಡಿದ ಅಥವಾ ನಿಕ್ಷೇಪಗಳಲ್ಲಿ ಠೇವಣಿ ಮಾಡಲಾಗಿರುವ ಸಾಲಗಳು.
* ವಂಚನೆ/ದುರ್ಬಳಕೆ ಒಳಗೊಂಡಿರುವ ಸಾಲಗಳು.
ಋಣಮುಕ್ತ ಪತ್ರ
* ರೈತರಿಗೆ ಹೊಸ ಸಾಲ ಪಡೆಯಲು ಅನುಕೂಲವಾಗುಂತೆ ಸರ್ಕಾರ ಸುಸ್ತಿ ಖಾತೆಯಲ್ಲಿನ ಬಾಕಿಯನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ನೀಡಲಿದೆ.
* ಈ ಉದ್ದೇಶಕ್ಕೆ 2018–2019ರ ಆಯವ್ಯಯದಲ್ಲಿ ₹6,500 ಕೋಟಿ ನಿಗದಿ ಮಾಡಲಾಗಿದೆ.
* ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ರೈತರ ಸಾಲದ ₹8,165 ಕೋಟಿಯನ್ನು ಹಿಂದಿನ ಸರ್ಕಾರ ಮನ್ನಾ ಮಾಡಿತ್ತು. ಅದರಲ್ಲಿ ₹4,165 ಕೋಟಿಯನ್ನು ಹಿಂದಿನ ವರ್ಷ ಬಿಡುಗಡೆ ಮಾಡಿದೆ.
* ಉಳಿದ ಬಾಕಿ ₹4 ಸಾವಿರ ಕೋಟಿಯನ್ನೂ ಸಹ ಪಾವತಿಸಲು ಈ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದೆ.
ಸರ್ಕಾರ ಸಾಲ ಮೊತ್ತವನ್ನು ಬ್ಯಾಂಕ್‌ಗಳಿಗೆ ಹೇಗೆ ಪಾವತಿಸುತ್ತದೆ?
* ರಾಜ್ಯ ಸರ್ಕಾರ ನಾಲ್ಕು ವರ್ಷಗಳ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ಪಾವತಿಸುತ್ತದೆ.
* ವಾರ್ಷಿಕ/ಅರೆ ವಾರ್ಷಿಕ ಕಂತುಗಳಲ್ಲಿ ಬ್ಯಾಂಕ್‌ಗಳಿಗೆ ಸಾಲ ಮನ್ನಾ ಮೊತ್ತವನ್ನು ಪಾವತಿಸುತ್ತದೆ.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.