ಬೆಂಗಳೂರು: ಕೋವಿಡ್‌ನ ಸಂಕಷ್ಟಗಳು ಮರೆಯಾಗಿ ಆರ್ಥಿಕ ಪುನಃಶ್ಚೇತನದ ಹಾದಿಯತ್ತ ನಾಡು ಮರಳುತ್ತಿರುವ ಹೊತ್ತಿನಲ್ಲಿ 2022ರ ಸಾಲಿನ ಪ್ರಗತಿಯ ಮುನ್ನೋಟವೆಂದೇ ಬಿಂಬಿಸಲಾದ ತಮ್ಮ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ (ಮಾ.4) ಮಧ್ಯಾಹ್ನ 12.30ಕ್ಕೆ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆ ಬಳಿಕ ಸರ್ಕಾರದ ಪರವಾಗಿ ಸದನಕ್ಕೆ ಉತ್ತರ ನೀಡಿದ್ದ ಬೊಮ್ಮಾಯಿ, ‘ಬಜೆಟ್‌ನಲ್ಲಿ ರಾಜ್ಯದ ಪ್ರಗತಿಯ ಭವಿಷ್ಯ ಬರೆಯುವೆ’ ಎಂದು ಘೋಷಿಸಿದ್ದರು. ಅದರ ಅನುಷ್ಠಾನಕ್ಕೆ ಬೇಕಾದ ನೀಲನಕ್ಷೆಯನ್ನು ಬಜೆಟ್‌ನಲ್ಲಿ ನೀಡಲಿದ್ದಾರೆಯೇ ಎಂಬ ಕುತೂಹಲವೂ ಇದೆ.
ಕೋವಿಡ್‌ನ ಮೂರು ಅಲೆಗಳು ತಂದಿತ್ತ ಆರ್ಥಿಕ ಸಂಕಷ್ಟಗಳು ರಾಜ್ಯದ ಸಂಪನ್ಮೂಲ ಸಂಗ್ರಹದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿವೆ. ಆಡಳಿತಾತ್ಮಕ ಕಾರಣಗಳಿಗೆ ಮಾಡಲೇಬೇಕಾದ ಬದ್ಧವೆಚ್ಚದ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿದೆ. ಈ ಇಕ್ಕಟ್ಟಿನ ಸ್ಥಿತಿಯಲ್ಲಿ, ಬಜೆಟ್ ಮಂಡಿಸುವ ಸವಾಲನ್ನು ಹಣಕಾಸು ಸಚಿವರೂ ಆಗಿರುವ ಬೊಮ್ಮಾಯಿ ಎದುರಿಸುತ್ತಿದ್ದಾರೆ. ಒಂದು ವರ್ಷದ ಬಳಿಕ ಅಂದರೆ, 2023ರಲ್ಲಿ ವಿಧಾನಸಭೆಗೆ ಸಜ್ಜಾಗಬೇಕಾಗಿರುವುದರಿಂದ ಅಭಿವೃದ್ಧಿಗೆ ದಿಕ್ಸೂಚಿ ತೋರಿಸುವ ಜತೆಗೆ, ಜನರನ್ನು ಓಲೈಸುವ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಬೇಕಾದ ಅನಿವಾರ್ಯವೂ ಅವರ ಮೇಲಿದೆ.
ಸಾಲದ ಹೊರೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ಅನುದಾನ ಮತ್ತು ತೆರಿಗೆಯ ಪಾಲಿನಲ್ಲಿ ಗಣನೀಯ ಕುಸಿತ ಆಗಿರುವುದರಿಂದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳಿಗೆ ಹೇಗೆ ಹಣ ಹೊಂದಿಸಲಿದ್ದಾರೆ ಎಂಬ ಚರ್ಚೆಗೆ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ಉತ್ತರ ನೀಡಬೇಕಾಗಿದೆ.
ಪತರಗುಟ್ಟಿ ಹೋಗಿರುವ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ ಕ್ಷೇತ್ರಗಳಿಗೆ ಒತ್ತು ನೀಡಬೇಕಾದ ತುರ್ತು ಕೂಡ ಮುಖ್ಯಮಂತ್ರಿ ಮುಂದಿದೆ. ಶಿಕ್ಷಣ, ಆರೋಗ್ಯ, ಮಹಿಳೆ, ಕಾರ್ಮಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ, ಪರಿಶಿಷ್ಟ ಹಾಗೂ ಹಿಂದುಳಿದ ಸಮುದಾಯದವರು ಮತ್ತು ರೈತರ ಮನ ಗೆಲ್ಲುವ ಘೋಷಣೆಗಳನ್ನು ನೀಡಬೇಕಾದ ಒತ್ತಡವೂ ಇದೆ.
ದೊಡ್ಡ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರನ್ನು ಒಲಿಸಿಕೊಳ್ಳಲು ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಅಧಿಕಾರಿಗಳ ವೇತನ ಸಮಿತಿ ಅಥವಾ ಆಯೋಗ ರಚಿಸುವ ಘೋಷಣೆ ಮಾಡುವ ಸಾಧ್ಯತೆ ಇದೆ.
ವಿವಿಧ ಸಮುದಾಯಗಳ ಮಠಾಧೀಶರು, ಜಾತಿ ಸಂಘಟನೆಗಳು ತಮಗೆ ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಮಂಡಿಸಿದ್ದಾರೆ. ಒಂದು ವರ್ಷದ ಬಳಿಕ ಚುನಾವಣೆ ಎದುರಿಸಬೇಕಿದ್ದು, ಜಾತಿ–ಧರ್ಮದ ಮತಗಳನ್ನು ‘ವಿಶ್ವಾಸ’ಕ್ಕೆ ತೆಗೆದುಕೊಳ್ಳಬೇಕಾದ ಇಕ್ಕಟ್ಟು ಕೂಡ ಇದೆ. ಜುಲೈನಲ್ಲಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬೊಮ್ಮಾಯಿ, ಆ ಬಳಿಕ ವಿಧಾನಮಂಡಲದ ಮೂರು ಅಧಿವೇಶನಗಳನ್ನು ಎದುರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.