ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಮತಬೇಟೆಯ ‘ಅಸ್ತ್ರ’ವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನಲ್ಲಿ ಬಜೆಟ್ ಮಂಡಿಸುವ ಸಾಧ್ಯತೆಯಿದ್ದು, ಕೇಂದ್ರದಿಂದ ಕರ್ನಾಟಕಕ್ಕೆ ಹಂಚಿಕೆ ಆಗಲಿರುವ ತೆರಿಗೆ ಪಾಲು ₹ 37,252 ಕೋಟಿ ಮೇಲೆ ಅವರು ಕಣ್ಣಿಟ್ಟಿದ್ದಾರೆ.
ಮಾರ್ಚ್‌ಗೆ ಅಂತ್ಯಗೊಳ್ಳುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಸಿಗುವ ತೆರಿಗೆ ಪಾಲಿನ ಮೊತ್ತಕ್ಕಿಂತ 2023-24ನೇ ಸಾಲಿನಲ್ಲಿ ಸುಮಾರು ₹ 5 ಸಾವಿರ ಕೋಟಿ ಹೆಚ್ಚು ಸಿಗಲಿದೆ.
ತೆರಿಗೆ ವಿಕೇಂದ್ರೀಕರಣದ ಅಡಿಯಲ್ಲಿ ರಾಜ್ಯಗಳಿಗೆ ₹ 1.02 ಲಕ್ಷ ಕೋಟಿ ಹಂಚಿಕೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂದಾಜಿಸಿದ್ದಾರೆ. 15ನೇ ಹಣಕಾಸು ಆಯೋಗವು ನಿಗದಿಪಡಿಸಿದಂತೆ, ಕರ್ನಾಟಕವು ಕೇಂದ್ರದಿಂದ ತೆರಿಗೆ ಪಾಲು ಶೇ 3.647ರಷ್ಟು ಪಡೆಯಲು ಅರ್ಹವಾಗಿದೆ. ಅದರ ಆಧಾರದಲ್ಲಿ ಕರ್ನಾಟಕಕ್ಕೆ ₹ 37,252 ಕೋಟಿ ಅಂದಾಜಿಸಲಾಗಿದೆ.
ಕರ್ನಾಟಕಕ್ಕೆ 2022-23ನೇ ಸಾಲಿನಲ್ಲಿ ₹ 29,783 ಕೋಟಿ ಸಿಗಬಹುದು ಎಂದು ಕೇಂದ್ರ ಸರ್ಕಾರ ಮೊದಲು ಅಂದಾಜಿಸಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಕರ್ನಾಟಕಕ್ಕೆ ಪ್ರಸಕ್ತ ವರ್ಷ ₹ 34,596 ಕೋಟಿ ಸಿಗಲಿದೆ. ‘ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಇನ್ನಷ್ಟು ಸುಧಾರಿಸಿದರೆ ಈ ಮೊತ್ತ ಮತ್ತಷ್ಟು ಹೆಚ್ಚಬಹುದು’ ಎಂದು ಆಯವ್ಯಯ ಮತ್ತು ನೀತಿ ಅಧ್ಯಯನ ಕೇಂದ್ರದ ಮಧುಸೂಧನ್ ರಾವ್ ತಿಳಿಸಿದರು.
ಹೆಚ್ಚಳವಾದ ತೆರಿಗೆ ಪಾಲು ಚುನಾವಣಾ ಬಜೆಟ್ ಸಿದ್ಧಪಡಿಸುತ್ತಿರುವ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗೆ ಅನುಕೂಲ ಆಗಬಹುದು. ಆದರೆ, ಸಾಲ ಮರುಪಾವತಿಯೂ ಸೇರಿದಂತೆ ಹೆಚ್ಚುತ್ತಿರುವ ಬದ್ಧ ವೆಚ್ಚವನ್ನು ಮುಖ್ಯಮಂತ್ರಿ ಹೇಗೆ ನಿಭಾಯಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ.
ಮಾರ್ಚ್ 2022ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಬದ್ಧ ವೆಚ್ಚವು ರಾಜ್ಯದ ಆದಾಯದ ಸುಮಾರು ಶೇ 90ರಷ್ಟಕ್ಕೆ ತಲುಪಿದೆ. ಅದರರ್ಥ, ಸರ್ಕಾರದ ಆದಾಯದಲ್ಲಿ ಶೇ 90% ಸಂಬಳ, ಪಿಂಚಣಿ, ಸಹಾಯಧನ ಇತ್ಯಾದಿಗಳಿಗೆ ವೆಚ್ಚವಾಗುತ್ತದೆ.
ಅಲ್ಲದೆ, ಕರ್ನಾಟಕದ ಸಾಲದ ಪ್ರಮಾಣವೂ ಹೆಚ್ಚುತ್ತಿದೆ. 2023-24ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆ ₹ 5.91 ಲಕ್ಷ ಕೋಟಿ ಆಗಬಹುದೆಂದು ಅಂದಾಜಿಸಲಾಗಿದೆ. ಕಳೆದ ಸಾಲಿನ ಬಜೆಟ್‌ನಲ್ಲಿ (2022-23) ರಾಜ್ಯ ₹ 72 ಸಾವಿರ ಕೋಟಿ ಸಾಲ ಪಡೆಯಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಹೀಗೆ ಪಡೆದ ಸಾಲದ ಮರುಪಾವತಿಗೆ ಮುಖ್ಯಮಂತ್ರಿ ₹ 41,572.24 ಕೋಟಿ ಮೀಸಲಿಟ್ಟಿದ್ದಾರೆ. ಆ ಮೊತ್ತದಲ್ಲಿ ಅಸಲು ₹ 12,632.70 ಕೋಟಿ, ಬಡ್ಡಿ ಮೊತ್ತ ₹ 28,939.54 ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.