ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿರುವ ಬಜೆಟ್‌ನಲ್ಲಿ ಬದ್ಧತೆ ಇಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ಕುರಿತು #KiviMeleHoova ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶೇ 50ರಷ್ಟೂ ಸಹ ಹಿಂದಿನ ಬಜೆಟ್‌ನ ಘೋಷಣೆಗಳು ಪ್ರಗತಿಯಾಗಿಲ್ಲ, ಶೇ 90ರಷ್ಟು ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ, ಶೇ 40ರಷ್ಟು ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲ. ಹೀಗಿರುವಾಗ ಬೊಮ್ಮಾಯಿ ಅವರು ಓದಿರುವ ಬಜೆಟ್ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ’ ಎಂದು ವಾಗ್ದಾಳಿ ನಡೆಸಿದೆ.
‘ಹಿಂದಿನ ಬಜೆಟ್‌ನ ಪ್ರಗತಿ ಶೇ 50ರಷ್ಟು ಕೂಡ ದಾಟಿಲ್ಲ. ಇಂದಿನ ಬಜೆಟ್ ಟೀಕಾಫ್ ಆಗುವುದೇ ಇಲ್ಲ. ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ. ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್‌ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಲ್ಯಾಪ್‌ಟಾಪ್ ಹಂಚಿಕೆಯಿಂದ ಹಿಡಿದು ವಿದ್ಯಾರ್ಥಿವೇತನದವರೆಗೂ ವಿದ್ಯಾರ್ಥಿಗಳಿಗೆ ಬಿಜೆಪಿ ಸರ್ಕಾರ ಎಲ್ಲಾ ತರದಲ್ಲೂ ದ್ರೋಹವೆಸಗಿದೆ. ಈಗಾಗಲೇ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿವೇತನದ ₹4500 ಸಾವಿರ ಕೋಟಿ ಬಾಕಿ ಇದೆ. ಅದನ್ನೇ ಕೊಡದವರು ಬಜೆಟ್ ಘೋಷಣೆಗಳನ್ನು ಈಡೇರಿಸುವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ರೈತರ ಕಿವಿ ಮೇಲೆ ಹೂವಿಟ್ಟ ಸರ್ಕಾರ ಒಂದೇ ಒಂದು ರೈತಪರ ಯೋಜನೆ ಜಾರಿಗೊಳಿಸಲಿಲ್ಲ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಈ ಸ್ಥಾನಕ್ಕೆ ಏರಿದ್ದು ಡಬಲ್ ಇಂಜಿನ್ ಸರ್ಕಾರಗಳ ಕೊಡುಗೆಯಿಂದಲೇ. ಬೆಂಬಲ ಬೆಲೆ ಇಲ್ಲ, ಸಾಲ ಮನ್ನವೂ ಇಲ್ಲ, ರೈತರೆಡೆಗೆ ಆಸಕ್ತಿಯೂ ಇಲ್ಲ’ ಎಂದು ಕಾಂಗ್ರೆಸ್ ಗುಡುಗಿದೆ.
‘ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಸ್ಥಾಪಿಸುತ್ತೇವೆ, ಸ್ಮಾರ್ಟ್ ಫೋನ್ ನೀಡುತ್ತೇವೆ ಎಂದಿತ್ತು ಬಿಜೆಪಿ. ಅದ್ಯಾವ ಭರವಸೆಗಳೂ ಈಡೇರಿಲ್ಲ. ಹೀಗಿರುವಾಗ ಬೊಮ್ಮಾಯಿ ಅವರು ನಾಮಕಾವಸ್ಥೆಗೆ ಓದಿದ ಬಜೆಟ್‌ನಲ್ಲಿ ನಿರೀಕ್ಷೆ ಇಟ್ಟುಕೊಳ್ಳುವಂತಹ ಮೂರ್ಖತನ ಮತ್ತೊಂದಿಲ್ಲ’ ಎಂದು ಕಾಂಗ್ರೆಸ್ ಕುಟುಕಿದೆ.
‘ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳದ ಭರವಸೆ ನೀಡಿತ್ತು ಬಿಜೆಪಿ. ಆದರೆ, ಆ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡದೆ ಜನರ ಕಿವಿ ಮೇಲೆ ಹೂವಿಟ್ಟಿದೆ. ಹೀಗಿರುವಾಗ ಬೊಮ್ಮಾಯಿ ಅವರ ಬಂಡಲ್ ಬಜೆಟ್ ನಂಬಿಕೆಗೆ ಅರ್ಹವೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.