ಕಳೆದ ವರ್ಷ, 2022ರ ಜುಲೈ 22, ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಸಭೆಯ ವಿವರಗಳನ್ನು ನೀಡಿದ್ದ ಸಚಿವ ಜೆ. ಸಿ. ಮಾಧುಸ್ವಾಮಿ ಅವರು, ಮುಂದಿನ ಮೂರು ವರ್ಷಗಳಲ್ಲಿ, ಜವಳಿ, ಚರ್ಮ, ಆಹಾರ ಸಂಸ್ಕರಣೆಯಂತಹ ದುಡಿಯುವ ಕೈಗಳ ಆವಶ್ಯಕತೆ ಹೆಚ್ಚಿರುವ ಉದ್ಯಮ ಕ್ಷೇತ್ರಗಳಲ್ಲಿ 7.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು, ಇದರಲ್ಲಿ ಜವಳಿ ರಂಗದ ಪಾಲು 4 ಲಕ್ಷ ಉದ್ಯೋಗಗಳು ಎಂದು ಪ್ರಕಟಿಸಿದ್ದರು.
ಆ ಹಿನ್ನೆಲೆಯಲ್ಲಿ ಬಜೆಟ್ ಏನೇನು ಅವಕಾಶ ಕಲ್ಪಿಸಿದೆ ಎಂದು ಗಮನಿಸಿದರೆ ನಿರಾಸೆ ಕಾಣಿಸುತ್ತದೆ. 25 ಸ್ಥಳಗಳಲ್ಲಿ ಮೆಗಾ- ಮಿನಿ ಜವಳಿ ಪಾರ್ಕ್‌ಗಳ ಮೂಲಕ 25,000 ಉದ್ಯೋಗಗಳು ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಖಾಸಗಿಯವರು ₹4,292 ಕೋಟಿ ಹೂಡಿಕೆಗೆ ಒಪ್ಪಿದ್ದು, ಅವು ಸ್ಥಾಪನೆಗೊಂಡರೆ 44,257 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಬಜೆಟ್ ಹೇಳಿದೆ. ಇದು ಸರ್ಕಾರದ ಆಕಾಂಕ್ಷೆಗಿಂತ ಬಹಳ ಕಡಿಮೆ ಇರುವುದು ಎದ್ದು ಕಾಣಿಸುತ್ತಿದೆ. ಚರ್ಮ, ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ಉದ್ಯೋಗ ಸೃಷ್ಟಿಯ ಬಗ್ಗೆ ಬಜೆಟ್ ಮೌನ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಲೆಕ್ಕಾಚಾರಗಳ ಪ್ರಕಾರ ರಾಜ್ಯದ ನಿರುದ್ಯೋಗ ಸರಾಸರಿ ಶೇ 3.41ರಷ್ಟು ಇದೆ. ರಾಜ್ಯದ ಆದಾಯದಲ್ಲಿ ಶೇ 60ರಷ್ಟು ಪಾಲನ್ನು ತರುವ ಮಾಹಿತಿ ತಂತ್ರಜ್ಞಾನ ಸೇವಾಕ್ಷೇತ್ರದಲ್ಲಿ, ಜಾಗತಿಕ ಹಿಂಜರಿತದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಒಂದೇ ಸಮನೆ ಉದ್ಯೋಗ ಕಡಿತ ನಡೆಯುತ್ತಿರುವುದು ಕಳವಳಗಳಿಗೆ ಕಾರಣವಾಗಿದೆ; ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಲೀ, ಉದ್ಯೋಗ ಸೃಷ್ಟಿಗಾಗಲೀ ಬಜೆಟ್ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ.
ಶಿಕ್ಷಣವೂ ಕ್ಯಾಪೆಕ್ಸ್ ಅಲ್ಲವೆ?: ಶಿಕ್ಷಣ ಕ್ಷೇತ್ರಕ್ಕೆ ₹37,960 ಕೋಟಿ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯಡಿ ಎಲ್ಲ ಸರ್ಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಸಂಪೂರ್ಣ ಉಚಿತ ಶಿಕ್ಷಣದ ಭರವಸೆ ಸ್ವಾಗತಾರ್ಹ ನಿರ್ಧಾರ. ಅದರಿಂದ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ. ಅದನ್ನುಳಿದರೆ, ರಾಜ್ಯದ 50,000 ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ಶೇ 5ರಷ್ಟು ಪ್ರಾಥಮಿಕ ಶಿಕ್ಷಣದ ಶಾಲೆಗಳು ಮುಚ್ಚುವಂತಹ ಹಂತದಲ್ಲಿರುವಾಗ, ಸರ್ಕಾರ ಶಾಲಾ ಕೊಠಡಿಗಳ, ಶೌಚಾಲಯಗಳ, ವಸತಿ ನಿಲಯಗಳ ನಿರ್ಮಾಣದ -ದುರಸ್ತಿಯ ತೇಪೆಗಳ ಬದಲು ಸ್ವಲ್ಪ ಸಮಗ್ರವಾದ ದೂರಗಾಮಿ ಕ್ರಮಕ್ಕೆ ಮುಂದಾಗಬೇಕೆಂಬ ನಿರೀಕ್ಷೆ ಈ ಬಜೆಟ್‌ನಲ್ಲಿ ಈಡೇರಿಲ್ಲ. ಹೂಡಿಕೆಗೆ ದಶಕದಲ್ಲೇ ಹೆಚ್ಚು (ಶೇ 30.4ರಷ್ಟು) ಹಣ ಕಾದಿರಿಸಿ ರೈಲು, ವಿಮಾನ ನಿಲ್ದಾಣ, ಬಂದರು, ಲಾಜಿಸ್ಟಿಕ್ಸ್ ಎಂದು ಕಾರ್ಪೊರೇಟ್ ಕಂಪನಿಗಳಿಗೆ ಸವಲತ್ತು ಹೆಚ್ಚಿಸುವುದರಲ್ಲೇ ಉತ್ಸುಕತೆ ತೋರಿಸುತ್ತಿರುವ ಸರ್ಕಾರಕ್ಕೆ ಶಿಕ್ಷಣದ ಮೂಲಕ ಮಾನವ ಸಂಪನ್ಮೂಲಕ್ಕೆ ಮಾಡಬಹುದಾದ ಹೂಡಿಕೆ ಕೂಡ ಬಂಡವಾಳ ಹೂಡಿಕೆ ಆಗಬಹುದು ಅನ್ನಿಸಲಿಲ್ಲ.
ಆರೋಗ್ಯಕ್ಕೆ ಇಚ್ಛಾಶಕ್ತಿ ಇಲ್ಲ: ಆರೋಗ್ಯಕ್ಕೆ ಸಂಬಂಧಿಸಿ ದೇಶದ ಬೇರೆ ರಾಜ್ಯಗಳ ಸರಾಸರಿ ಹಂಚಿಕೆಗೆ ಹೋಲಿಸಿ ನೋಡಿದರೆ, ರಾಜ್ಯ ಸರ್ಕಾರವು ಇನ್ನೂ ಹಿಂದುಳಿದಿದೆ; ತಾನೇ ನೇಮಿಸಿದ ತಜ್ಞರ ಸಮಿತಿಯ ಶಿಫಾರಸುಗಳು ಮತ್ತು 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಪರಿಗಣಿಸುವುದಿದ್ದರೆ, 2025ರ ಹೊತ್ತಿಗೆ, ರಾಜ್ಯದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ ಶೇ 8ರಷ್ಟು ಹಣವನ್ನು ಮೀಸಲಿಡಬೇಕಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಮಾಡಿದಂತೆಯೇ, ಈ ಬಾರಿ ಕೂಡ ಅದು ಶೇ 5ರಷ್ಟು ಮಾತ್ರ ಇದೆ.
ಸರ್ವೋದಯ- ಕ್ಷೇಮಾಭಿವೃದ್ಧಿ: ರಾಜ್ಯ ಸರ್ಕಾರ ಸರ್ವೊದಯ ಮತ್ತು ಕ್ಷೇಮಾಭಿವೃದ್ಧಿಗಳಿಗೆ ₹81,318 ಕೋಟಿಗಳನ್ನು ಮೀಸಲಿರಿಸಿರುವುದಾಗಿ ಹೇಳಿದೆ. ಇದರಲ್ಲಿ ದುರ್ಬಲ ಎಂದು ಪರಿಗಣಿಸಲಾಗುವ ಮಹಿಳೆ, ಮಕ್ಕಳು ಮತ್ತು ಹಿಂದುಳಿದ- ಪರಿಶಿಷ್ಟ ಜನಸಮುದಾಯಗಳಿಗೆ ಒಟ್ಟು ಹಂಚಿಕೆ ಕೇವಲ ₹16,839 ಕೋಟಿ; ಇಲ್ಲಿ ಎದ್ದು ಕಾಣಿಸಿದ್ದು, ಭೂರಹಿತ ಮಹಿಳಾ ಕೃಷಿ ಕಾರ್ಮಿಕ ಸಮುದಾಯಕ್ಕೆ ತಿಂಗಳಿಗೆ ₹500 ಸಹಾಯಧನ. ಅದನ್ನು ಬಿಟ್ಟರೆ, ಅಲ್ಲಲ್ಲಿ ಚದುರಿದಂತೆ ಕೆಲವು ಹಂಚಿಕೆಗಳು ಮತ್ತು ಈಗಾಗಲೇ ಜಾರಿಯಲ್ಲಿರುವಯೋಜನೆಗಳ ಮುಂದುವರಿಕೆ ಮಾತ್ರ ಕಾಣಿಸುತ್ತಿವೆ.
ಆಹಾ ಚುನಾವಣಾ ಬಜೆಟ್ ಎಂದು ಸರ್ಕಾರದ ಬೆಂಬಲಿಗರು ಸಂಭ್ರಮಿಸುವ ಆಕರ್ಷಕ ಪ್ಯಾಕೇಜಿಂಗನ್ನೂ ಈ ಬಜೆಟ್ ಹೊಂದಿಲ್ಲ.
ಲೇಖಕ: ಸಾಮಾಜಿಕ ವಿಶ್ಲೇಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.