ಬೆಂಗಳೂರು: ಕರ್ನಾಟಕ ಬಜೆಟ್ 2023–24 ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೀದಿನಾಯಿಗಳಿಗೂ ಸೇರಿದಂತೆ ಈ ಸಾರಿ ಪ್ರಾಣಿಗಳ ಕಾಳಜಿಗೆ ಆದ್ಯತೆ ಕೊಟ್ಟಿದ್ದಾರೆ.
ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳುವ ಸಲುವಾಗಿ ಹಾಗೂ ಅವುಗಳ ಕಾಳಜಿ ಬಗ್ಗೆ ನಿಗಾ ವಹಿಸಲು ಮತ್ತು ಸಲಹೆ ಸೂಚನೆ ನೀಡಲು ರಾಜ್ಯದಲ್ಲಿ ಒಂದು ಪ್ರತ್ಯೇಕವಾದ ಪೋರ್ಟಲ್ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಈ ಪೋರ್ಟಲ್ ಮೂಲಕ ಸಾರ್ವಜನಿಕರು ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳಲು ತಮ್ಮ ಹೆಸರು ನೋಂದಾಯಿಸಬಹುದು ಎಂದು ತಿಳಿಸಿದ್ದಾರೆ.
ಅಲ್ಲದೇ ಬಜೆಟ್‌ನಲ್ಲಿ ಮುಧೋಳ ನಾಯಿ ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ₹5ಕೋಟಿ ಮೀಸಲಿಡಲಾಗವುದು ಎಂದು ಸಿಎಂ ತಿಳಿಸಿದರು.
ಪ್ರಾಣಿಗಳ ಮೇಲೆ ನಡೆಯುವ ಹಿಂಸೆಯನ್ನು ತಡೆಗಟ್ಟುವ ಸಲುವಾಗಿ ಪ್ರಾಣಿ ದಯಾ ಮಂಡಳಿಗೆ ₹5ಕೋಟಿ ನೀಡಲಾಗುವುದು. ಗಾಯಗೊಳ್ಳುವ ಪ್ರಾಣಿಗಳ ಚಿಕಿತ್ಸೆಗೆ ಸಂಚಾರಿ ಆಸ್ಪತ್ರೆ ಅಥವಾ ಮೊಬೈಲ್ ಕ್ಲಿನಿಕ್‌ಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ತಮ್ಮ ಸಾಕು ನಾಯಿ ಸತ್ತಾಗ ಕಣ್ಣೀರು ಸುರಿಸಿದ್ದ ಬೊಮ್ಮಾಯಿ ಅವರು ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಹೊಂದಿರುವುದು ಅನೇಕ ಬಾರಿ ಸಾಬೀತಾಗಿದೆ. ನಾಯಿ ಕತೆ ಆಧರಿತ ಚಾರ್ಲಿ 777 ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.