ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಹತ್ತು ದಿನಗಳ ಕಲಾಪದಲ್ಲಿ ಪ್ರಬಲ ಅಸ್ತ್ರಗಳನ್ನು ಪ್ರಯೋಗಿಸುವ ಮೂಲಕ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಸಜ್ಜಾಗಿದೆ. ‘ಕೇಂದ್ರದ ಅನ್ಯಾಯ’ ಮುಂದಿಟ್ಟು ದೆಹಲಿವರೆಗೂ ರಾಜ್ಯದ ಕೂಗನ್ನು ಕೊಂಡೊಯ್ದಿದ್ದ ಸರ್ಕಾರದ ನೇತಾರರು, ಇದೇ ಪ್ರತ್ಯಸ್ತ್ರ ಮುಂದಿಟ್ಟು ಎದುರಾಳಿಗಳನ್ನು ಕಟ್ಟಿಹಾಕಲು ಅಣಿಯಾಗಿದ್ದಾರೆ.
ಸದ್ಯವೇ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದ ರಾಜಕೀಯ ದಾಳಗಳಿಗೆ ಈ ಅಧಿವೇಶನ ವೇದಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆಬ್ರುವರಿ 16) 2024–25ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸುವರು. ಉಳಿದ ಎಂಟು ದಿನಗಳ ಕಲಾಪದಲ್ಲಿ ಚರ್ಚೆಗೆ ಲಭ್ಯವಿರುವ ಅವಕಾಶವನ್ನು ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಚನೆ ವಿರೋಧ ಪಕ್ಷಗಳಲ್ಲಿದೆ.
ಬರ ನಿರ್ವಹಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾಮಗಾರಿಗಳಲ್ಲಿ ಹಿನ್ನಡೆಯ ಜತೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿರುವ ‘ಕಮಿಷನ್’ ಆರೋಪ ಅಧಿವೇಶನದಲ್ಲಿ ಸದ್ದು ಮಾಡಬಹುದು. ವರ್ಷದ ಮೊದಲ ಅಧಿವೇಶನದಲ್ಲೇ ಸರ್ಕಾರದ ಮೇಲೆ ಮುಗಿಬೀಳುವ ಮೂಲಕ ಲೋಕಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್‌ನ ವರ್ಚಸ್ಸು ಕುಂದಿಸುವ ತಂತ್ರಗಾರಿಕೆಯನ್ನು ವಿರೋಧ ಪಕ್ಷಗಳು ಹೆಣೆಯುತ್ತಿವೆ.
ಗುತ್ತಿಗೆದಾರರ ಸಂಘದ ಆರೋಪದ ಕಾರಣಕ್ಕಾಗಿಯೇ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರಕ್ಕೆ ‘ಶೇಕಡ 40ರಷ್ಟು ಕಮಿಷನ್ ಸರ್ಕಾರ’ ಎಂಬ ಕುಖ್ಯಾತಿ ಮೆತ್ತಿಕೊಂಡಿತ್ತು. ಅದೇ ಆರೋಪವನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರದ ವಿರುದ್ಧವೂ ಮಾಡಿದ್ದಾರೆ. ಈ ಹೇಳಿಕೆಯನ್ನು ಮುಂದಿಟ್ಟುಕೊಂಡೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ತಾಲೀಮನ್ನು ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ನಡೆಸುತ್ತಿದ್ದಾರೆ.
ಸೋಮವಾರ ಸಭೆ
ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕಾಂಗ ಪಕ್ಷದ ಸಭೆಗಳು ಸೋಮವಾರ ನಡೆಯಲಿವೆ. ಮಂಗಳವಾರ ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಸಭೆ ನಡೆಸಿ ಕಲಾಪದ ಕಾರ್ಯತಂತ್ರವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತೆರಿಗೆ ಕದನದತ್ತ ಕುತೂಹಲ
ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯೂ ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಆರ್ಥಿಕ ಸ್ಥಿತಿ ಕುರಿತ ಶ್ವೇತ ಪತ್ರ ಪ್ರಕಟಿಸಿ ಕೇಂದ್ರದ ವಿರುದ್ಧ ಮತ್ತೊಮ್ಮೆ ಆರೋಪ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್ ಅನುದಾನ ಹಂಚಿಕೆಗೂ ಮೀರಿ, ಕಾಮಗಾರಿಗಳಿಗೆ ಅನಮೋದನೆ ನೀಡಿರುವುದನ್ನೂ ವಿರೋಧ ಪಕ್ಷಗಳ ವಿರುದ್ಧದ ಅಸ್ತ್ರವಾಗಿ ಸರ್ಕಾರ ಬಳಸುವ ಸಂಭವ ಇದೆ. 15ನೇ ಹಣಕಾಸು ಆಯೋಗದ ಅನುದಾನದ ಹಂಚಿಕೆ ಸೂತ್ರಗಳಿಗೆ ಯುಪಿಎ ಸರ್ಕಾರ ಕಾರಣ ಎಂಬ ತಿರುಗೇಟು ನೀಡುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗುತ್ತಿವೆ.
ವಿರೋಧ ಪಕ್ಷಗಳ ಅಸ್ತ್ರ
*ರಾಜ್ಯದ ವಿವಿಧೆಡೆ ಉಲ್ಬಣಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ
*ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ವಿತರಣೆಯಲ್ಲಿನ ವಿಳಂಬ ಸೇರಿದಂತೆ ಬರ ನಿರ್ವಹಣೆ
ಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ವಾದ
*ರಾಜ್ಯದ ವಿವಿಧೆಡೆ ಅಪರಾಧ ಕೃತ್ಯಗಳಲ್ಲಿ ಹೆಚ್ಚಳ, ಸಂಘರ್ಷದ ವಾತಾವರಣ ನಿರ್ಮಾಣ ಆಗಿದೆ ಎಂಬ ಆರೋಪ
ಸರ್ಕಾರದ ಪ್ರತ್ಯಸ್ತ್ರ
*ಬರದ ಸಮರ್ಥ ನಿರ್ವಹಣೆ, ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತವನ್ನು ಸಜ್ಜುಗೊಳಿಸಲಾಗಿದೆ ಎಂಬ ವಾದ
*ಸಂತ್ರಸ್ತರ ಖಾತೆಗೆ ಪರಿಹಾರ ಜಮೆಯ ವಿವರಗಳನ್ನು ಮುಂದಿಟ್ಟು, ಬರ ಪರಿಹಾರ ಕೋರಿ ಮನವಿ ಸಲ್ಲಿಸಿ ಐದು ತಿಂಗಳು ಕಳೆದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ
*ಈಗ ಎನ್‌ಡಿಎ ಮೈತ್ರಿ ಕೂಟದ ಭಾಗವಾಗಿರುವ
ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ವಿರುದ್ಧ ಮಾಡಿದ್ದ ಆರೋಪಗಳನ್ನು ಸದನದ ಮುಂದಿಟ್ಟು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.