ADVERTISEMENT

ಬಿಜೆಪಿಯಿಂದ ಬಂದವರಿಗೆ ಟಿಕೆಟ್: ವಿರೋಧ

ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ಮುಖಂಡರ ಸಭೆ * ಪಕ್ಷಾಂತರಿಗಳಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‌ಗೆ ಹಾನಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:42 IST
Last Updated 11 ನವೆಂಬರ್ 2019, 19:42 IST
   

ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಪಕ್ಷಕ್ಕೆ ಬಂದವರಿಗೆ ವಿಧಾನಸಭೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್‌ನ ಕೆಲ ಹಿರಿಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

15 ಕ್ಷೇತ್ರಗಳಲ್ಲಿ 8ಕ್ಕೆ ಈಗಾಗಲೇ ಅಭ್ಯರ್ಥಿ ಪಟ್ಟಿ ಪ್ರಕಟಿಸಲಾಗಿದ್ದು, ಉಳಿದ 7 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪಕ್ಷದ ಹಿರಿಯ ಮುಖಂಡರ ಸಭೆ ನಡೆಯಿತು. ಪಕ್ಷಾಂತರಿಗಳಿಗೆ ಟಿಕೆಟ್ ಕೊಡುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

‘ಈಗ ಬಿಜೆಪಿಯಲ್ಲಿ ಅವಕಾಶಸಿಗುತ್ತಿಲ್ಲ ಎಂಬ ಕಾರಣಕ್ಕೆ ಪಕ್ಷಕ್ಕೆ ಬಂದು ಸ್ಪರ್ಧಿಸುತ್ತಾರೆ. ಮತ್ತೆ ನೆಪ ಹೇಳಿಕೊಂಡುವಾಪಸ್ ಹೋಗುತ್ತಾರೆ. ಮೈಸೂರಿನಲ್ಲಿ ಸಿ.ಎಚ್.ವಿಜಯಶಂಕರ್ ಇದೇ ರೀತಿ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗಲಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ, ಬೆಳೆಸಬಹುದು. ಪಕ್ಷದ ಅಭ್ಯರ್ಥಿ ಗೆಲ್ಲಲು ಅವಕಾಶ
ಇಲ್ಲದ ಕ್ಷೇತ್ರಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಹೊರಗಿನಿಂದ ಬಂದವರಿಗೆ ಅವಕಾಶ ನೀಡುವಂತೆಸಲಹೆ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂದು ನನ್ನ ವಿರುದ್ಧ ಕೆಲ ಹಿರಿಯರು ಆರೋಪ ಮಾಡುತ್ತಿದ್ದೀರಿ. ನೀವು ಹೇಳಿದವರಿಗೆ ಟಿಕೆಟ್ ಕೊಡಲಾಗುವುದು. ನಾನೂ ಪ್ರಚಾರಕ್ಕೆ ಬರುತ್ತೇನೆ. ಆದರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನೀವೇ ಹೊರಬೇಕು’ ಎಂಬ ಪ್ರಸ್ತಾಪವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಿರಿಯರ ಮುಂದಿಟ್ಟಿದ್ದಾರೆ. ಇದಕ್ಕೆ ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಏಕವ್ಯಕ್ತಿ ನಿರ್ಧಾರ ಇರುವುದಿಲ್ಲ. ಸಾಮೂಹಿಕ ನಾಯಕತ್ವದ ಮೇಲೆ ಪಕ್ಷ ಮುನ್ನಡೆಸಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲೂ ಇದೇ ದಾರಿಯಲ್ಲಿ ಸಾಗುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

‘ನಾವು ಕಾಂಗ್ರೆಸ್‌ನಲ್ಲಿ ಇದ್ದೇವೆ. ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೇವೆ. ಇದು ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ತೀರ್ಪಿನ ನಂತರ ನಿರ್ಧಾರ: ಅನರ್ಹ ಶಾಸಕರ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಇದೇ 13ರಂದು ತೀರ್ಪು ಪ್ರಕಟಿಸಲಿದೆ.ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಸಭೆ ಮುಗಿಯುವ ಮುನ್ನವೇ ತೆರಳಿದರು. ಶಾಸಕ ಜಿ.ಪರಮೇಶ್ವರ ಗೈರಾಗಿದ್ದರು.

ಚಿಕ್ಕಬಳ್ಳಾಪುರ ಅಭ್ಯರ್ಥಿ ಬದಲಿಗೆ ಚಿಂತನೆ
ಈಗಾಗಲೇ 8 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಮಾಡಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಬದಲಿಸುವ ಬಗ್ಗೆ ಚರ್ಚಿಸಲಾಗಿದೆ.

ಎಂ.ಆಂಜನಪ್ಪ ಅವರಿಗೆ ಟಿಕೆಟ್ ನೀಡಲಾಗಿದ್ದು, ಬಿಜೆಪಿಯಿಂದ ಡಾ.ಕೆ.ಸುಧಾಕರ್ ಸ್ಪರ್ಧಿಸಿದರೆ ಅವರಿಗೆ ಪೈಪೋಟಿ ನೀಡುವುದು ಕಷ್ಟಕರವಾಗಬಹುದು. ಹಾಗಾಗಿ ಬೇರೆಯವರಿಗೆ ಅವಕಾಶ ನೀಡುವಂತೆ ಕೆಲವರು ಸಲಹೆ ನೀಡಿದ್ದಾರೆ. ಸಭೆ ನಂತರ ಶಾಸಕ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಶಾಸಕರ ಜತೆಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವೂ ಪ್ರಸ್ತಾಪವಾಗಿದ್ದು, ಮಾಜಿ ಶಾಸಕ ಪ್ರಿಯಕೃಷ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಒಲವು ವ್ಯಕ್ತವಾಯಿತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.