ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ಬಿಸಿ ತಾರಕಕ್ಕೇರಿದೆ. ಘಟಾನುಘಟಿಗಳ ಪ್ರವೇಶದಿಂದ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆರೋಪ– ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಈ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ ತಮ್ಮ ಮೊಮ್ಮಗ ನಿಖಿಲ್ ಪರ ಪ್ರಚಾರ ನಡೆಸಿ ಕಾಂಗ್ರೆಸ್‌ನ ನಾಯಕರ ವಿರುದ್ಧ ಹರಿಹಾಯ್ದರು.
ಜೆ.ಬ್ಯಾಡರಹಳ್ಳಿ ಬಹಿರಂಗ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಮುಖ್ಯಮಂತ್ರಿಗೆ ಇರುವ ಗರ್ವದ ಸೊಕ್ಕು ಮುರಿಯಬೇಕು ಎಂದು ಕರೆಕೊಟ್ಟರು.
ಡಿ.ಕೆ ಸಹೋದರರನ್ನು ‘ಅಪೂರ್ವ ಸಹೋದರರು’ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಅವರನ್ನು ‘ಕನ್ವರ್ಟೆಡ್ ಕಾಂಗ್ರೆಸ್ ಜಂಟಲ್‌ಮನ್’ ಎಂದು ಟೀಕಿಸಿದರು. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜತೆಗೂಡಿ ನಿಖಿಲ್ ಪರವಾಗಿ ಪ್ರಚಾರ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಗ್ಗಾವಿಯಲ್ಲಿ ಎರಡು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪರ ಬಿರುಸಿನ ಪ್ರಚಾರ ನಡೆಸಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ‘ಲೋಕಸಭಾ ಚುನಾವಣೆಗೆ ನಾನು ಮಾತ್ರ ನಿಲ್ಲಲ್ಲ. ನನಗೆ ಬೇಕಾಗಿಲ್ಲ ಅಂತ ಹೇಳುತ್ತಲೇ ಅವರೇ ಟಿಕೆಟ್ ಪಡೆದರು. ಈಗ ಉಪಚುನಾವಣೆಯಲ್ಲಿ ನನ್ನ ಮಗ ಸ್ಪರ್ಧಿಸಲ್ಲ. ನನ್ನ ಮಗನಿಗೆ ಟಿಕೆಟ್ ಕೇಳುವುದಿಲ್ಲ ಅನ್ನುತ್ತಲೇ ಅವರ ಮಗ ಭರತ್‌ಗೆ ಟಿಕೆಟ್ ತಂದರು. ಇದು ಬೊಮ್ಮಾಯಿ ಅವರ ಸ್ವಭಾವ’ ಎಂದು ವ್ಯಂಗ್ಯವಾಡಿದರು.
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಶಾಸಕ ಬೈರತಿ ಬಸವರಾಜು ಪ್ರಚಾರ ನಡೆಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಪ್ರಚಾರ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.