ADVERTISEMENT

ಉಪ ಚುನಾವಣೆ | 3 ಕ್ಷೇತ್ರ: ಮೂವರಿಗೂ ಸವಾಲು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 22:27 IST
Last Updated 15 ಅಕ್ಟೋಬರ್ 2024, 22:27 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯದ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ಹಾಗೂ ಮತ್ತೊಬ್ಬರಿಂದ ಕಿತ್ತುಕೊಳ್ಳುವ ಹಣಾಹಣಿಗೆ ವೇದಿಕೆಯಾಗಲಿದೆ.

ADVERTISEMENT

ಸಂಸದರಾಗಿ ಆಯ್ಕೆಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ತುಕಾರಾಂ ಅವರು ರಾಜೀನಾಮೆ ನೀಡಿದ್ದರಿಂದ ಈ ಉಪ ಚುನಾವಣೆ ಎದುರಾಗಿದೆ. ಚನ್ನಪಟ್ಟಣ (ಜೆಡಿಎಸ್‌), ಶಿಗ್ಗಾವಿ (ಬಿಜೆಪಿ) ಹಾಗೂ ಸಂಡೂರು (ಕಾಂಗ್ರೆಸ್‌) ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದೆ.

ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಈಗಾಗಲೇ ತಯಾರಿ ನಡೆಸಿವೆ. ಜೆಡಿಎಸ್‌ ವಶದಲ್ಲಿದ್ದ ಚನ್ನಪಟ್ಟಣ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಮೈತ್ರಿಕೂಟದ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ ಮಧ್ಯೆಯೇ ಪೈಪೋಟಿ ಎದುರಾಗಿದೆ. ಏತನ್ಮಧ್ಯೆ, ತಮ್ಮ ರಾಜಕೀಯ ಎದುರಾಳಿಯಾದ ಎಚ್.ಡಿ. ಕುಮಾರಸ್ವಾಮಿ ಅವರಿಂದ ಕ್ಷೇತ್ರವನ್ನು ಕಿತ್ತುಕೊಂಡು, ಲೋಕಸಭಾ ಚುನಾವಣೆಯಲ್ಲಿ ತನ್ನ ತಮ್ಮ ಡಿ.ಕೆ. ಸುರೇಶ್ ಅವರನ್ನು ಸೋಲಿಸಿದ್ದಕ್ಕೆ ಪ‍್ರತೀಕಾರ ತೀರಿಸಲೇಬೇಕು ಎಂಬ ಹಟಕ್ಕೆ ಉಪ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಬಿದ್ದಿದ್ದಾರೆ. ಹೀಗಾಗಿ, ಶಿಗ್ಗಾವಿ, ಸಂಡೂರಿಗಿಂತ ಈ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿದೆ.

ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಮೈತ್ರಿಕೂಟಕ್ಕೆ ಕಗ್ಗಂಟಾಗಿದೆ. 2023ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದ ವಿಧಾನ ಪರಿಷತ್ತಿನ ಹಾಲಿ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತೆ ಸ್ಪರ್ಧಿಸುವ ಇರಾದೆಯಲ್ಲಿದ್ದಾರೆ. ಜೆಡಿಎಸ್‌ ಎರಡು ಬಾರಿ ಸತತವಾಗಿ ಗೆದ್ದಿರುವುದರಿಂದಾಗಿ, ಕ್ಷೇತ್ರ ಉಳಿಸಿಕೊಳ್ಳಲೇಬೇಕು ಎಂಬ ತವಕದಲ್ಲಿ ಕುಮಾರಸ್ವಾಮಿ ಇದ್ದಾರೆ. ಈ ಜಿದ್ದಾಜಿದ್ದಿ, ಮೈತ್ರಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. 

ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ದಿನದಿಂದಲೇ, ಚನ್ನಪಟ್ಟಣವನ್ನೇ ಕೇಂದ್ರವಾಗಿರಿಸಿಕೊಂಡು ರಾಮನಗರದ ರಾಜಕಾರಣವನ್ನು ಕಟ್ಟುತ್ತಿರುವ ಡಿ.ಕೆ. ಶಿವಕುಮಾರ್, ತೀವ್ರ ಪೈಪೋಟಿ ನೀಡುವ ತಯಾರಿ ನಡೆಸಿದ್ದಾರೆ.

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತಮ್ಮ ಕುಟುಂಬದವರನ್ನೇ ಕಣಕ್ಕೆ ಇಳಿಸಲು ಬಳ್ಳಾರಿ ಸಂಸದ ಇ. ತುಕಾರಾಂ ಸಿದ್ಧತೆ ನಡೆಸಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ಕರೆಯಿಸಿಕೊಂಡು, ಬೃಹತ್ ಕಾರ್ಯಕ್ರಮವನ್ನೂ ನಡೆಸಿದ್ದಾರೆ. ಈ ಕ್ಷೇತ್ರವನ್ನು ಕಿತ್ತುಕೊಳ್ಳಲು ಬಿಜೆಪಿ ನಾಯಕರು ಭರ್ಜರಿ ತಯಾರಿಯಲ್ಲಿದ್ದಾರೆ. 

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಡಿತದಲ್ಲಿದ್ದ ಶಿಗ್ಗಾವಿಯನ್ನು ಈ ಬಾರಿಯಾದರೂ ಕಸಿದುಕೊಳ್ಳಬೇಕೆಂಬ ಹವಣಿಕೆ ಕಾಂಗ್ರೆಸ್ ನಾಯಕರಲ್ಲಿದೆ. ತಮ್ಮ ಪುತ್ರ ಭರತ್ ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದರೂ, ಅವರ ಹೆಸರೂ ಪಕ್ಷದ ಪರಿಶೀಲನಾ ಪಟ್ಟಿಯಲ್ಲಿದೆ. ಹಿಂದೆ ಬೀಳಗಿಯಲ್ಲಿ ಸೋತಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ ಶಿಗ್ಗಾವಿ ಕಡೆ ಮುಖ ಮಾಡಿದ್ದಾರೆ. 

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಗೆಲುವು ತಂದುಕೊಡುವ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಆಖೈರಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಉಪಚುನಾವಣೆಯನ್ನು ಎದುರಿಸಲು ಕಾಂಗ್ರೆಸ್‌ ಪಕ್ಷ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿದ್ದೇವೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಉಪಸಮರವು ರಾಜ್ಯದ ಅಭಿವೃದ್ಧಿ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರಕ್ಕೆ ಪಾಠ ಕಲಿಸಲಿದೆ. ಜನವಿರೋಧಿ ಆಡಳಿತದ ವಿರುದ್ಧ ಜನಾದೇಶ ವ್ಯಕ್ತವಾಗಲಿದೆ
.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

ಚನ್ನಪಟ್ಟಣಕ್ಕೆ ‘ಮೈತ್ರಿಕೂಟ’ದಲ್ಲಿ ಜಗ್ಗಾಟ

ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಎರಡೂ ಪಕ್ಷಗಳ ನಾಯಕರು ಹೇಳುತ್ತಲೇ ಬಂದಿದ್ದಾರೆ. ಆದರೆ ಕ್ಷೇತ್ರವನ್ನು ಬಿಟ್ಟುಕೊಡಲು ಎರಡೂ ಪಕ್ಷಗಳು ಸಿದ್ದರಿಲ್ಲ. 

ಜೆಡಿಎಸ್‌ಗೆ ಅಭ್ಯರ್ಥಿ ಸ್ಥಾನ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿಯ ಸಿ.ಪಿ.ಯೋಗೇಶ್ವರ್‌ ಸೋಮವಾರವಷ್ಟೇ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಚನ್ನಪಟ್ಟಣ ಬಿಜೆಪಿ ಘಟಕದ ಕಚೇರಿಯಲ್ಲಿದ್ದ ಬಿಜೆಪಿ–ಜೆಡಿಎಸ್‌ ಮೈತ್ರಿ ಬ್ಯಾನರ್‌ ಅನ್ನು ತೆರವು ಮಾಡಲಾಗಿದೆ. ಬಿಜೆಪಿಯ ಹೊಸ ಬ್ಯಾನರ್‌ ಹಾಕಲಾಗಿದೆ. 

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಹೇಳಿಕೆ ನೀಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ‘ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಒತ್ತಡವಿದೆ. ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಕೂತು ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ. ಎರಡೂ ಪಕ್ಷಗಳ ಒಮ್ಮತವಿಲ್ಲದೆ ಯೋಗೀಶ್ವರ್‌ ಹೇಗೆ ಸ್ಪರ್ಧಿಸುತ್ತಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.