ADVERTISEMENT

Karnataka By Election Results: ಮೂರೂ ಕಾಂಗ್ರೆಸ್ ಪಾಲು; ಎನ್‌ಡಿಎಗೆ ಆಘಾತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 10:07 IST
Last Updated 23 ನವೆಂಬರ್ 2024, 10:07 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

‌ಬೆಂಗಳೂರು: ರಾಜ್ಯದ ಎಲ್ಲ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಈ ಮೂಲಕ ಜನರ ಬೆಂಬಲ ಕಳೆದುಕೊಂಡಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಚನ್ನಪಟ್ಟಣ...

ADVERTISEMENT

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್, ಶಿಗ್ಗಾವಿಯಲ್ಲಿ ಯಾಸೀರ ಅಹಮದ್ ಖಾನ್ ಪಠಾಣ ಮತ್ತು ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಜಯಭೇರಿ ಮೊಳಗಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ (ಬಿಜೆಪಿ–ಜೆಡಿಎಸ್‌) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ 25,357 ಮತಗಳ ಅಂತರದಿಂದ ಸೋಲಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದರು.

ಸಿ.ಪಿ.ಯೋಗೇಶ್ವರ್ 1,12,388 ಮತಗಳು, ಎನ್‌ಡಿಎ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 87,031 ಮತಗಳನ್ನು ಪಡೆದರು. ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರಿಂದ ಯೋಗೇಶ್ವರ್ ಕಾಂಗ್ರೆಸ್‌ ಸೇರಿದ್ದರು.

ಶಿಗ್ಗಾವಿ...

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಖಾನ್ ಪಠಾಣ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ‘ಕಮಲ’ದ ಭದ್ರಕೋಟೆಯಲ್ಲಿ ಈ ಬಾರಿ ‘ಕೈ’ ಬಾವುಟ ಹಾರಿಸಿದೆ.

ನಾಲ್ಕು ಅವಧಿಯಲ್ಲಿ‌ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಕಾಂಗ್ರೆಸ್‌ನ ಯಾಸೀರ ಅಹಮದ್ ಖಾನ್ ಪಠಾಣ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 13,448 ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು.

ಪಠಾಣ ಅವರು 1,00,587 ಮತ ಪಡೆದರೇ, ಸಂಸದ ಬಸವರಾಜ ಬೊಮ್ಮಾಯಿ ಅವರ ಮಗನಾದ ಬಿಜೆಪಿಯ ಅಭ್ಯರ್ಥಿ ಭರತ್ ಬೊಮ್ಮಾಯಿ 86,960 ಮತ ಪಡೆದು ಪರಾಭವಗೊಂಡಿದ್ದಾರೆ.

ಸಂಡೂರು...

ಕಾಂಗ್ರೆಸ್‌ ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ.

ನಿಕಟ ಪೈಪೋಟಿ ನೀಡಿದ್ದ ಬಿಜೆಪಿಯ ಬಂಗಾರು ಹನುಮಂತ ಅವರನ್ನು 9,645 ಮತಗಳ ಅಂತರದಿಂದ ಸೋಲಿಸಿ ಜಯ ಸಾಧಿಸಿದ್ದಾರೆ. ಅನ್ನಪೂರ್ಣ ಅವರಿಗೆ ಒಟ್ಟು 93,616 ಮತಗಳು ಲಭಿಸಿದರೇ, ಬಂಗಾರು ಹನುಮಂತ ಅವರು 83,967 ಮತಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.