ADVERTISEMENT

ಗೋಕಾಕ್ ಅಖಾಡದಲ್ಲೊಂದು ಸುತ್ತು| ‘ಜೋಳಿಗೆ’ಯಲ್ಲಡಗಿದೆ ಫಲಿತಾಂಶ!

ತ್ರಿಕೋನ ಸ್ಪರ್ಧೆಯ ಆಯಾಮ

ಶ್ರೀಕಾಂತ ಕಲ್ಲಮ್ಮನವರ
Published 3 ಡಿಸೆಂಬರ್ 2019, 15:02 IST
Last Updated 3 ಡಿಸೆಂಬರ್ 2019, 15:02 IST
ರಮೇಶ ಜಾರಕಿಹೊಳಿ (ಬಿಜೆಪಿ) ಮತ್ತು ಲಖನ್‌ ಜಾರಕಿಹೊಳಿ (ಕಾಂಗ್ರೆಸ್)
ರಮೇಶ ಜಾರಕಿಹೊಳಿ (ಬಿಜೆಪಿ) ಮತ್ತು ಲಖನ್‌ ಜಾರಕಿಹೊಳಿ (ಕಾಂಗ್ರೆಸ್)   

ಬೆಳಗಾವಿ: ಸಮ್ಮಿಶ್ರ ಸರ್ಕಾರ ಪತನದ ‘ರೂವಾರಿ’, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಸ್ಪರ್ಧೆ ಯಿಂದಾಗಿ ಗೋಕಾಕ ಉಪ ಚುನಾವಣಾ ಕಣ ರಾಜ್ಯದ ಗಮನ ಸೆಳೆದಿದೆ. ಇವರಿಗೆ ಕಾಂಗ್ರೆಸ್‌ ಅಭ್ಯರ್ಥಿ, ಸಹೋದರ ಲಖನ್‌ ಸೆಡ್ಡು ಹೊಡೆದಿದ್ದಾರೆ. ಜೆಡಿಎಸ್‌ನಿಂದ ಕಣಕ್ಕಿಳಿಯುವ ಮೂಲಕ ಅಶೋಕ ಪೂಜಾರಿ ತ್ರಿಕೋನ ಸ್ಪರ್ಧೆಯ ಆಯಾಮ ಒದಗಿಸಿದ್ದಾರೆ. ಮೇಲ್ನೋಟಕ್ಕೆ ಸಹೋದರರ ನಡುವಿನ ಹೋರಾಟ ಎನ್ನುವಂತೆ ಕಂಡುಬಂದರೂ, ಒಳಾರ್ಥದಲ್ಲಿ ಜಾರಕಿಹೊಳಿ ಕುಟುಂಬ ಹಾಗೂ ಇತರರ ನಡುವಿನ ಜಿದ್ದಾಜಿದ್ದಿಯ ಕಣವಾಗಿದೆ.

ಇಲ್ಲಿ ಪಕ್ಷ, ಸಿದ್ಧಾಂತ, ಸಂಘಟನೆಗಿಂತ ‘ಜಾರಕಿಹೊಳಿ’ ಕುಟುಂಬ ಕೇಂದ್ರಿತ ರಾಜಕಾರಣವಿದೆ. ನಗರಸಭೆ, ಗ್ರಾಮ ಪಂಚಾಯ್ತಿ, ಸಂಘ– ಸಂಸ್ಥೆ ಸೇರಿದಂತೆ ಸ್ಥಳೀಯವಾಗಿ ನಡೆಯುವ ಎಲ್ಲ ಚುನಾವಣೆಗಳೂ ‘ಜಾರಕಿಹೊಳಿ’ ನೆರಳಿನಲ್ಲಿಯೇ ನಡೆಯುತ್ತವೆ. ಇದು ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ನಡೆದುಕೊಂಡುಬಂದಿದೆ. ಪ್ರಸ್ತುತ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ದೊಡ್ಡ ಸಾಹುಕಾರ್‌ (ರಮೇಶ), ಸಣ್ಣ ಸಾಹುಕಾರ್‌ (ಲಖನ್‌) ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ತಪ್ಪಿಯೂ ಮೂರನೇ ಅಭ್ಯರ್ಥಿಯ ಬಗ್ಗೆ ಬಹಿರಂಗವಾಗಿ ಪ್ರಸ್ತಾಪವಾಗುವುದಿಲ್ಲ. ಪರಿಶಿಷ್ಟ ಪಂಗಡದ (ವಾಲ್ಮೀಕಿ) ರಮೇಶ, ಕಳೆದ ಐದು ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಎಸ್‌.ಟಿ. ವರ್ಗಕ್ಕೆ ಮೀಸಲಾಗಿದ್ದ ಈ ಕ್ಷೇತ್ರವು 2008ರಲ್ಲಿ ಸಾಮಾನ್ಯವಾದ ನಂತರವೂ ಅವರ ಗೆಲುವಿನ ಓಟ ಮುಂದುವರಿಯಿತು. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. 16 ಜನ ಶಾಸಕರ ತಂಡವನ್ನು ಕಟ್ಟಿಕೊಂಡು ಹೊರಬಂದು, ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದರು. ಆ ನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಇತಿಹಾಸ.

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆನ್ನುವ ಷರತ್ತಿನಿಂದಲೇ ಸಮ್ಮಿಶ್ರ ಸರ್ಕಾರ ಕೆಡವಿದ್ದೆ’ ಎಂದು ರಮೇಶ ಹೇಳುವ ಮೂಲಕ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ–ವೀರಶೈವ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದಾರೆ. ಮುಸ್ಲಿಂ ಹಾಗೂ ಇತರ ಮತಗಳು ಬೇರೆಡೆ ಹೋಗದಂತೆ ತಡೆಯಲು ಬೆವರು ಹರಿಸುತ್ತಿದ್ದಾರೆ. ಪಕ್ಕದ ಅರಭಾವಿ ಕ್ಷೇತ್ರದ ಶಾಸಕ, ಸಹೋದರ ಬಾಲಚಂದ್ರ ಜಾರಕಿಹೊಳಿ ಸಾಥ್‌ ಸಿಕ್ಕಿರುವುದು ‘ಆನೆ ಬಲ’ ಬಂದಂತಾಗಿದೆ.

ADVERTISEMENT

ಜಾರಕಿಹೊಳಿ ಬ್ರಾಂಡ್‌: ಗೋಕಾಕ ಜೊತೆ ಕರ ದಂಟು ಹೇಗೆ ಬ್ರಾಂಡ್‌ ಆಗಿದೆಯೋ, ಅದೇ ರೀತಿ ‘ಜಾರಕಿಹೊಳಿ’ ಹೆಸರೂ ಬ್ರಾಂಡ್‌ ಆಗಬೇಕು. ಸ್ಪರ್ಧಿ; ಪ್ರತಿ ಸ್ಪರ್ಧಿ ಇಬ್ಬರೂ ತಮ್ಮವರಾಗಿರಬೇಕು. ಪಕ್ಷ ಯಾವುದೇ ಇರಲಿ, ಗೆದ್ದು ಬರುವವರು ತಮ್ಮವರೇ ಆಗಿರಬೇಕು ಎನ್ನುವ ತಂತ್ರವನ್ನು ಸತೀಶ ಹೆಣೆದಿದ್ದಾರೆ. ಲಖನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ, ಕಣಕ್ಕಿಳಿಸಿದ್ದಾರೆ. ಅಣ್ಣ– ತಮ್ಮಂದಿರು ಎಷ್ಟೇ ಬೈದಾಡಿಕೊಂಡರೂ ಒಳಗೊಳಗೆ ಒಂದೇ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

‘ನಾವು ಸಹೋದರರಾಗಿದ್ದರೂ ನಮ್ಮ ರಾಜಕೀಯ ನಿಲುವುಗಳು ಭಿನ್ನವಾಗಿವೆ. ಗೋಕಾಕ ನಗರವನ್ನು ಅಭಿವೃದ್ಧಿಪಡಿಸದ ರಮೇಶ ಅವರಿಗೆ ತಕ್ಕ ಪಾಠ ಕಲಿಸಿ’ ಎಂದು ಲಖನ್‌, ಮತದಾರರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ.

ಜೋಳಿಗೆ ಮಹಿಮೆ: ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಅಶೋಕ ಪೂಜಾರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ಪಕ್ಷ ಪ್ರಯತ್ನಿಸಿತ್ತು. ಆದರೆ, ಇದನ್ನು ತಿರಸ್ಕರಿಸಿದ ಪೂಜಾರಿ, ‘ಗೋಕಾಕದಲ್ಲಿರುವ ಸರ್ವಾಧಿಕಾರಿ ರಾಜಕೀಯ ವ್ಯವಸ್ಥೆ ಬದ ಲಾಯಿಸುವ ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ಪಕ್ಷದಿಂದ ಹೊರಬಂದರು. ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿದ್ದಾರೆ.

ಇದಕ್ಕೂ ಮುಂಚೆ, ಅವರು ಮೂರು ಸಲ ರಮೇಶ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಲಿಂಗಾಯತ (ಜಂಗಮ) ಸಮಾಜದ ಪೂಜಾರಿ ಅವರು ಜೋಳಿಗೆ ಹಿಡಿದು, ಮತಗಳ ಭಿಕ್ಷಾಟನೆಗೆ ಹೊರಟಿದ್ದಾರೆ. ಆ ಜೋಳಿಗೆಯಲ್ಲಿ ಈಗ ನೋಟು, ನಾಣ್ಯದ ಜೊತೆ ಅಕ್ಕಿ, ಜೋಳ ಕೂಡ ಹಾಕುತ್ತಿದ್ದಾರೆ. ಚುನಾವಣೆಯಲ್ಲಿ ಎಷ್ಟು ಜನರು ಈ ‘ಜೋಳಿಗೆ’ಗೆ ಮತ ಹಾಕುತ್ತಾರೆ ಎನ್ನುವುದರ ಮೇಲೆ ಚುನಾವಣಾ ಫಲಿತಾಂಶ ನಿರ್ಧಾರ ವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.