ADVERTISEMENT

ಕೆ.ಆರ್‌.ಪುರ ಕ್ಷೇತ್ರ: ಅನುದಾನ ಸಿಕ್ಕರೂ ಅಭಿವೃದ್ಧಿ ಮರೀಚಿಕೆ

ಆರೋಪ– ಪ್ರತ್ಯಾರೋಪ

ಪ್ರವೀಣ ಕುಮಾರ್ ಪಿ.ವಿ.
Published 2 ಡಿಸೆಂಬರ್ 2019, 20:09 IST
Last Updated 2 ಡಿಸೆಂಬರ್ 2019, 20:09 IST
ಎಂ.ನಾರಾಯಣಸ್ವಾಮಿ ಮತ್ತು ಬೈರತಿ ಬಸವರಾಜು
ಎಂ.ನಾರಾಯಣಸ್ವಾಮಿ ಮತ್ತು ಬೈರತಿ ಬಸವರಾಜು   

ಜನಸೇವೆ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ಅವರು ಬೀಗುತ್ತಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣ ಸ್ವಾಮಿ ಕಾಂಗ್ರೆಸ್‌ ಹುರಿಯಾಳು. ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಎಂದು ನಂಬಿರುವ ಅವರು ‘ಪಕ್ಷ ದ್ರೋಹ’ ಮಾಡಿದವರಿಗೆ ಮತದಾರರು ಬುದ್ಧಿ ಕಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಬಿಬಿಎಂಪಿಯ ಪೂರ್ವದ ಹೆಬ್ಬಾಗಿಲಿನಂತಿದೆ ಕೆ.ಆರ್.ಪುರ ಕ್ಷೇತ್ರ. ಹೊರವರ್ತುಲ ರಸ್ತೆಯುದ್ದಕ್ಕೂ ಚಾಚಿಕೊಂಡಿರುವ ಈ ಕ್ಷೇತ್ರದಲ್ಲಿ ಜನವಸತಿ ಹಾಗೂ ಕೈಗಾರಿಕೆಗಳ ಬೆಳವಣಿಗೆ ಕ್ಷಿಪ್ರಗತಿಯಲ್ಲಿದೆ. ಉಪಚುನಾವಣೆ ಅಖಾಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಇಲ್ಲಿ ನೇರ ಪೈಪೋಟಿ ಇದೆ. ಈ ಹಿಂದಿನ ಚುನಾವಣೆಗಳಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡುತ್ತಿದ್ದವರೇ ಈಗ ಎದುರಾಳಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ಸತತ ಎರಡು ಬಾರಿ ಗೆದ್ದಿರುವ ಬಿ.ಎ. ಬಸವರಾಜು (ಬೈರತಿ ಬಸವರಾಜು) ಈ ಬಾರಿ ಬಿಜೆಪಿ ಅಭ್ಯರ್ಥಿ. ಜನಸೇವೆ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ಅವರು ಬೀಗುತ್ತಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣ ಸ್ವಾಮಿ ಕಾಂಗ್ರೆಸ್‌ ಹುರಿಯಾಳು. ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಎಂದು ನಂಬಿರುವ ಅವರು ‘ಪಕ್ಷ ದ್ರೋಹ’ ಮಾಡಿದವರಿಗೆಮತದಾರರು ಬುದ್ಧಿ ಕಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

‘ಜನಸೇವೆಯೇ ನನ್ನ ಗೆಲುವಿಗೆ ಶ್ರೀರಕ್ಷೆ’:ಬೈರತಿ ಬಸವರಾಜು

ADVERTISEMENT

* ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿಮ್ಮನ್ನು ಜನ ಏಕೆ ಮತ್ತೆ ಗೆಲ್ಲಿಸಬೇಕು?

ಸತತ ಏಳು ವರ್ಷಗಳಿಂದ ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕದಲ್ಲಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಇದೇ ನನಗೆ ಶ್ರೀರಕ್ಷೆ. ಈ ಕಾರಣಕ್ಕಾಗಿಯೇ ಜನ ಖಂಡಿತಾ ನನ್ನನ್ನು ಗೆಲ್ಲಿಸುತ್ತಾರೆ.

* ಗೆದ್ದ ಮೇಲೆ ರಾಜೀನಾಮೆ ನೀಡಿದ್ದು ಪಕ್ಷಕ್ಕೆ, ಮತದಾರರಿಗೆ ಮಾಡಿದ ಅನ್ಯಾಯವಲ್ಲವೇ?

ಕ್ಷೇತ್ರದ ಅಭಿವೃದ್ಧಿಯ ಕಾರಣಕ್ಕೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅದು ಜನರಿಗೂ ಗೊತ್ತಿದೆ. ಈ ಹಿಂದೆಯೂ ಜನ ನನಗೆ ಮತ ನೀಡಿದ್ದರೇ ಹೊರತು, ಕಾಂಗ್ರೆಸ್‌ ಅಭ್ಯರ್ಥಿ ಎಂಬ ಕಾರಣಕ್ಕಲ್ಲ. ಬಡವರಿಗೆ, ದೀನದಲಿತರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆ ಕಾರಣಕ್ಕೆ ನನ್ನನ್ನು ಜನ ಬೆಂಬಲಿಸುತ್ತಿದ್ದಾರೆ.

* ಕಾಂಗ್ರೆಸ್‌ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಕೆ.ಆರ್‌. ಪುರ ಕ್ಷೇತ್ರದ ಅಭಿವೃದ್ಧಿಗೆ ₹ 2ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಆದರೂ ಅಭಿವೃದ್ಧಿ ಆಗಿಲ್ಲ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆಯಲ್ಲ?

₹ 2 ಸಾವಿರ ಕೋಟಿ ಅನುದಾನ ನೀಡಿದ್ದು ಸುಳ್ಳು. ಸುಮಾರು ₹ 600 ಕೋಟಿ ಅನುದಾನ ಮಂಜೂರಾಗಿದ್ದು ನಿಜ. ಹಿಂದಿನ ಸರ್ಕಾರಗಳು ಜನರ ತೆರಿಗೆ ಪಾಲನ್ನು ಈ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟಿವೆ ಅಷ್ಟೇ. ಅದನ್ನು ಪಡೆಯುವುದು ನಮ್ಮ ಹಕ್ಕು.ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಈ ಅನುದಾನವನ್ನು ಸಮರ್ಪಕವಾಗಿ ಬಳಸಲಾಗಿದೆ.

* ನೀವು ಬಿಜೆಪಿಯನ್ನು ಕಟು ಶಬ್ದಗಳಲ್ಲಿ ಟೀಕಿಸುತ್ತಿದ್ದವರು. ಬಸವರಾಜು ಅವರು ದಬ್ಬಾಳಿಕೆ ಮಾಡುತ್ತಾರೆ ಎಂದು ಈ ಹಿಂದೆ ಬಿಜೆಪಿ ನಾಯಕರೂ ಆರೋಪ ಮಾಡಿದ್ದರು. ಈಗ ಜೊತೆಯಾಗಿ ಹೋಗಲು ಮುಜುಗರವಾಗುವುದಿಲ್ಲವೇ?

ರಾಜಕಾರಣದಲ್ಲಿ ಇವೆಲ್ಲ ಸಹಜ. ಈಗ ನಾನು ಬಿಜೆಪಿ ಅಭ್ಯರ್ಥಿ. ಪಕ್ಷದವರು ಯಾರೂ ಇದಕ್ಕೆ ಚಕಾರ ಎತ್ತಿಲ್ಲ. ನನ್ನ ಬೆಂಬಲಿಗರು ಹಾಗೂ ಬಿಜೆ‍ಪಿ ಕಾರ್ಯಕರ್ತರು ಹಾಲು ಜೇನಿನಂತೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ ಹಾಗೂ ನಾನು ಅಣ್ಣತಮ್ಮನಂತಿದ್ದೇವೆ. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಜೊತೆಯಾಗಿ ಮತ ಯಾಚಿಸುತ್ತಿದ್ದೇವೆ.

***

ಬಿಜೆಪಿಯ ಒಳಬೇಗುದಿ ನನ್ನ ಕೈಹಿಡಿಯಲಿದೆ:ಎಂ.ನಾರಾಯಣ ಸ್ವಾಮಿ

* ಎಂಎಲ್‌ಸಿ ಆಗಿರುವ ನಿಮ್ಮನ್ನೇ ಪಕ್ಷವು ಕಣಕ್ಕಿಳಿಸಿದ್ದೇಕೆ?

ನಾನು ಈ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವ. ಎಂಎಲ್‌ಸಿಯಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಸ್ಥಳೀಯ ಹಾಗೂ ಬಲಿಷ್ಠ ಅಭ್ಯರ್ಥಿ ಬೇಕು ಎಂಬ ಕಾರಣಕ್ಕೆ ಪಕ್ಷ ಟಿಕೆಟ್‌ ನೀಡಿದೆ.

* ನಿಮಗೆ ಅನುಕೂಲಕರ ಅಂಶ ಯಾವುದು?

ಬೈರತಿ ವಿರುದ್ಧ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಆದಿಯಾಗಿ ಬಿಜೆಪಿಯ ನಾಯಕರು ಈ ಹಿಂದೆ ಗಂಭೀರ ಆರೋಪ ಮಾಡಿದ್ದರು. ಭೂ ಮಾಫಿಯಾ, ದಾದಾಗಿರಿ ನಡೆಸುತ್ತಾರೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದೆಲ್ಲಾ ದೂಷಿಸಿದ್ದರು. ಅವರು ಪಕ್ಷಾಂತರ ಮಾಡಿದ ಮಾತ್ರಕ್ಕೆ ಕಳಂಕ ಹೋಗುತ್ತದೆಯೇ? ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲೇ ನೋವಿದೆ. ಇದೇ ನನಗೆ ಶ್ರೀರಕ್ಷೆ.

* ಬೈರತಿ ಈ ಕ್ಷೇತ್ರಕ್ಕೆ ಭಾರಿ ಅನುದಾನ ತಂದಿದ್ದಾರೆ. ಅದು ಅವರಿಗೆ ವರವಾಗುವುದಿಲ್ಲವೇ?

ಕಾಂಗ್ರೆಸ್‌ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಈ ಕ್ಷೇತ್ರಕ್ಕೆ ₹ 2 ಸಾವಿರ ಕೋಟಿ ಅನುದಾನ ಬಿಡುಗಡೆ ಆಗಿದೆ. ಆದರೆ ಅಭಿವೃದ್ಧಿ ಆಗಿಲ್ಲ. ಸರಿಯಾದ ರಸ್ತೆಗಳಿಲ್ಲ. ಕೆಲಸ ಮಾಡದೆ ಬೋಗಸ್‌ ಬಿಲ್‌ ಮಾಡಿಸಿಕೊಂಡ ಪ್ರಕರಣಗಳೂ ಇವೆ. ಅವರೀಗ ಹಣಬಲ ತೋಳ್ಬಲ ತೋರಿಸಲು ಮುಂದಾಗಿದ್ದಾರೆ. ಅಭಿವೃದ್ಧಿ ಮಾಡಿದ್ದರೆ ಇದೆಲ್ಲದರ ಅಗತ್ಯವಿತ್ತೇ?

* ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಆರು ಕಾರ್ಪೊರೇಟರ್‌ಗಳಲ್ಲಿ ನಾಲ್ವರು ನಿಮ್ಮೊಂದಿಗಿಲ್ಲ. ಇದು ಹಿನ್ನಡೆಯಲ್ಲವೇ?

ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ನಾಲ್ವರು ಕಾರ್ಪೊರೇಟರ್‌ಗಳ ಬಗ್ಗೆ ಕ್ಷೇತ್ರದಲ್ಲಿ ಸದಭಿಪ್ರಾಯವಿಲ್ಲ. ಸರ್ಕಾರಿ ಜಾಗಗಳಲ್ಲಿ ಅಕ್ರಮ ಬಡಾವಣೆ ನಿರ್ಮಿಸಿದವರು, ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲಿರುವವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರೆ. ಇದರಿಂದ ನಮಗೆ ಅನುಕೂಲವೇ ಜಾಸ್ತಿ. ಕಾರ್ಯಕರ್ತರು ಪಕ್ಷದ ಜೊತೆಗಿದ್ದಾರೆ. ಇದು ಕಾಂಗ್ರೆಸ್‌ ಭದ್ರಕೋಟೆ. ಬಿಜೆಪಿ ಇಲ್ಲಿ ಒಮ್ಮೆ ಮಾತ್ರ ಗೆದ್ದಿದೆ. ಬೈರತಿ ಗೆದ್ದಿದ್ದೂ ಕಾಂಗ್ರೆಸ್‌ ಚಿಹ್ನೆಯಲ್ಲೇ.

* ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಸೂಚಿ ಏನು?

ಹಸಿರು ಕೆ.ಆರ್‌.ಪುರ, ಸ್ವಚ್ಛ ಕೆ.ಆರ್‌.ಪುರ ಹಾಗೂ ಸಂಚಾರ ದಟ್ಟಣೆಗೆ ಪರಿಹಾರ ನನ್ನ ಕಾರ್ಯಸೂಚಿ. ರೌಡಿಸಂ, ವಸೂಲಿ ದಂಧೆ, ಮಾದಕವಸ್ತು ಜಾಲ ಮಟ್ಟ ಹಾಕುವುದು ಹಾಗೂ ಸರ್ಕಾರಿ ಜಾಗದ ಅತಿಕ್ರಮಣ ತೆರವುಗೊಳಿಸಿ ಉದ್ಯಾನ ನಿರ್ಮಿಸುವುದು, ಸರ್ಕಾರಿ ಆಸ್ಪತ್ರೆ ಹಾಗೂ ಕೆರೆಗಳ ಅಭಿವೃದ್ಧಿಗೆ ನನ್ನ ಆದ್ಯತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.