ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ನಾಮಪತ್ರ ಭರಾಟೆ ಶುಕ್ರವಾರ ಕೊನೆಗೊಂಡಿದ್ದು, ಪ್ರಚಾರದ ಅಬ್ಬರಕ್ಕೆ ವೇದಿಕೆ ಅಣಿಯಾಗಿದೆ.
ನಾಮಪತ್ರ ಸಲ್ಲಿಕೆಯ ಅಂತಿಮ ದಿನವೇ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರೆ, ‘ಕೈ’ ನಾಯಕರು ಎದುರಾಳಿ ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ನಡೆದ ಬಹಿರಂಗ ಸಭೆ, ಮಾತಿನ ಕದನಕ್ಕೆ ದಾರಿ ಮಾಡಿಕೊಟ್ಟಿದೆ.
ಮೂರು ಕ್ಷೇತ್ರಗಳ ಪೈಕಿ ಶಿಗ್ಗಾವಿಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತೀವ್ರವಾಗಿ ತಟ್ಟಿದೆ. ಒಬ್ಬರು ಮುಸ್ಲಿಂ ಹಾಗೂ ಮತ್ತೊಬ್ಬರು ಲಿಂಗಾಯತ ಪಂಚಮಸಾಲಿ ಸಮುದಾಯದ ಅಭ್ಯರ್ಥಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರಿಬ್ಬರ ಸ್ಪರ್ಧೆ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದೆ.
ಸಂಡೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್. ವೆಂಕಣ್ಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಶಿಗ್ಗಾವಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಗ ಭರತ್ ಬೊಮ್ಮಾಯಿ, ಭಾರಿ ಮೆರವಣಿಗೆಯಲ್ಲಿ ಸಾಗಿ ಚುನಾವಣಾ ಕಣಕ್ಕೆ ಅಧಿಕೃತವಾಗಿ ಅಡಿಯಿಟ್ಟರು. ಗುರುವಾರ ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್, ತಮ್ಮ ಬಲ ಪ್ರದರ್ಶನಕ್ಕೆ ಈ ಅವಕಾಶ ಬಳಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಅತಿರಥರು ಅವರಿಗೆ ಜತೆಯಾಗಿದ್ದರು.
ಇದಕ್ಕೆ ಸವಾಲು ಒಡ್ಡುವ ರೀತಿಯಲ್ಲಿ ಭಾರಿ ಜನಸ್ತೋಮದೊಂದಿಗೆ ನಿಖಿಲ್ ಕುಮಾರಸ್ವಾಮಿಯವರನ್ನು ಮೆರವಣಿಗೆಯಲ್ಲಿ ಕರೆದೊಯ್ದ ಜೆಡಿಎಸ್, ತನ್ನ ಭದ್ರ ನೆಲೆಯಲ್ಲಿ ಶಕ್ತಿ ಹೇಗಿದೆ ಎಂದು ತೋರಿಸುವ ಯತ್ನ ಮಾಡಿತು. ತಮ್ಮ ಅಜ್ಜ ಎಚ್.ಡಿ. ದೇವೇಗೌಡರು ಹಾಗೂ ಅಪ್ಪ ಕುಮಾರಸ್ವಾಮಿ ಜತೆಗೆ ಬೆಂಗಳೂರಿನಲ್ಲಿ ದೇವರ ಪೂಜೆ ನೆರವೇರಿಸಿದ ನಿಖಿಲ್, ಕುಟುಂಬಸ್ಥರೊಂದಿಗೆ ಚನ್ನಪಟ್ಟಣಕ್ಕೆ ತೆರಳಿದರು. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿರುವುದರಿಂದಾಗಿ, ಅವರು ನಾಮಪತ್ರ ಸಲ್ಲಿಸುವಾಗ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಹಿಂದೆ ಜಿಲ್ಲಾ ಉಸ್ತುವಾರಿಯಾಗಿದ್ದ ಸಿ.ಎನ್. ಅಶ್ವತ್ಥನಾರಾಯಣ ಜತೆಗೂಡಿದ್ದರು.ಅತ್ತ ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಗೋವಿಂದ ಕಾರಜೋಳ, ಅಭ್ಯರ್ಥಿಯ ತಂದೆ ಬಸವರಾಜ ಬೊಮ್ಮಾಯಿ ಜತೆಯಾದರು. ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಭಾರಿ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಜಿ. ಜನಾರ್ದನ ರೆಡ್ಡಿ ಅವರ ಜತೆಗೆ ಸಾಗಿದರು.
ಶಿಗ್ಗಾವಿ: ಕಾಂಗ್ರೆಸ್‌ಗೆ ಬಂಡಾಯದ ಬೇಗೆ
ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇಬ್ಬರು ಮಾಜಿ ಶಾಸಕರು ಬಂಡಾಯದ ಕಹಳೆ ಊದಿದ್ದಾರೆ.
ಮಾಜಿ ಶಾಸಕರಾದ ಸೈಯದ್ ಅಜ್ಜಂಪೀರ್ ಖಾದ್ರಿ, ಮಂಜುನಾಥ್ ಕುನ್ನೂರು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದರು. ಮಗ ರಾಜು ಅವರಿಗಾದರೂ ಟಿಕೆಟ್ ನೀಡುವಂತೆ ಕುನ್ನೂರು ಒತ್ತಡ ಹೇರುತ್ತಿದ್ದರು. ಆದರೆ, ಇಬ್ಬರಿಗೂ ಟಿಕೆಟ್ ಕೈ ತಪ್ಪಿದೆ.
‘ಅಪರಾಧ ಹಿನ್ನೆಲೆಯುಳ್ಳ ಪಠಾಣ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದ ಖಾದ್ರಿ ಹಾಗೂ ಮಂಜುನಾಥ್ ಅವರು ಶುಕ್ರವಾರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಅವಧಿ ಮುಗಿಯಲು 13 ನಿಮಿಷ ಬಾಕಿ ಇರುವಾಗ ಬೈಕ್‌ನಲ್ಲಿ ಬಂದ ಖಾದ್ರಿ, ಚುನಾವಣಾಧಿಕಾರಿ ಕಚೇರಿಯೊಳಗೆ ಓಡೋಡಿ ಹೋಗಿ ಉಮೇದುವಾರಿಕೆ ಸಲ್ಲಿಸಿದರು. ಮುಸ್ಲಿಂ ಸಮುದಾಯದ ಮುಖಂಡರಾದ ಖಾದ್ರಿ, 1999ರಲ್ಲಿ ಶಾಸಕರಾಗಿದ್ದರು. ಪಂಚಮಸಾಲಿ ಲಿಂಗಾಯತ ಸಮುದಾಯದ ಮಂಜುನಾಥ್ ಕುನ್ನೂರು ಅವರು 1989 ಹಾಗೂ 1994ರ ಅವಧಿಯಲ್ಲಿ ಎರಡು ಬಾರಿ ಶಾಸಕರಾಗಿದ್ದರು.
ಸಚಿವ ಜಮೀರ್ ಕಾರಿಗೆ ಕಲ್ಲೇಟು
ಹಾವೇರಿ: ಬಂಡಾಯ ಎದ್ದಿರುವ ಸೈಯದ್ ಅಜ್ಜಂಪೀರ ಖಾದ್ರಿ ಅವರ ಜತೆ ಸಂಧಾನ ಮಾಡಲು ಹುಲಗೂರಿನಲ್ಲಿರುವ ಮನೆಗೆ ಶುಕ್ರವಾರ ಹೋಗಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರಿನ ಮೇಲೆ, ಖಾದ್ರಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದರು. ಕಾರಿನ ಗಾಜು ಒಡೆದಿದೆ.
ಸ್ಥಳದಲ್ಲಿದ್ದ ಮುಖಂಡರು, ಜಮೀರ್ ಅವರನ್ನು ಸ್ಥಳದಿಂದ ಸುರಕ್ಷಿತವಾಗಿ ವಾಪಸು ಕಳುಹಿಸಿ ಕೊಟ್ಟಿದ್ದಾರೆ.
‘ಶಿಗ್ಗಾವಿಯಲ್ಲಿ ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಒತ್ತಡ ಹೇರಿದ್ದರಿಂದ ಯಾಸೀರ್ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಬೆಳಿಗ್ಗೆ ಇಲ್ಲಿಗೆ ಬಂದ ಜಮೀರ್ ಅವರು ಯಾಸೀರ್ ಅವರ ಕಾರಿನಲ್ಲಿ ಖಾದ್ರಿಯವರ ಮನೆಗೆ ಹೋಗಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆಗೆ ಖಾದ್ರಿ ಬೆಂಬಲಿಗರು, ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.