ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿದೆ.
ಉಳಿದಂತೆ ಕಾಂಗ್ರೆಸ್ 2, ಪಕ್ಷೇತರರು 1 ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಒಂದು ಸ್ಥಾನ ಪಡೆಯದ ಜೆಡಿಎಸ್‌ಗೆ ತೀವ್ರ ಮುಖಭಂಗವಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನೈತಿಕ ಹೊಣೆಹೊತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಉಪಚುನಾವಣೆ ಏಕೆ ಬಂತು?
ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದ 17 ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಕಳೆದ ಜುಲೈ 24ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಮೈತ್ರಿ ಸರ್ಕಾರ ವಿಫಲಗೊಂಡಿತ್ತು.ಶಾಸಕರ ರಾಜೀನಾಮೆ ಪರಿಶೀಲಿಸಿದ ಬಳಿಕ ಅಂದಿನಸ್ಪೀಕರ್ ರಮೇಶ್ ಕುಮಾರ್, ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ವಿಧಾನಸಭೆ ಅವಧಿ (2023) ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ರಾಜ್ಯದ ರಾಜಕೀಯ ಬೆಳವಣಿಗೆ ಮತ್ತೊಮ್ಮೆ ದೇಶದ ಗಮನ ಸೆಳೆದಿತ್ತು.
ಇದನ್ನೂ ಓದಿ...16 ಅತೃಪ್ತ ಶಾಸಕರ ರಾಜೀನಾಮೆ ಹಿಂದಿರುವ ಅಸಲಿ ಕಾರಣಗಳು ಏನು?
ಸುಪ್ರೀಂ ಮೆಟ್ಟಿಲೇರಿದ್ದ ಅನರ್ಹರು
ಮೊದಲಿಗೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಉಳಿದ ಅನರ್ಹ ಶಾಸಕರು ಕೋರ್ಟ್ ಮೋರೆ ಹೋಗಿದ್ದರು.ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತ್ತು.
ನ. 23ರಂದು ತೀರ್ಪು ಪ್ರಕಟಿಸಿದ ಕೋರ್ಟ್, ಸ್ಪೀಕರ್ ನಡೆ ಸರಿಯಿದೆ ಆದರೆ ಅನರ್ಹತೆಯ ಅವಧಿ ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಜೊತೆಗೆ, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು. ಗೆಲುವು ಸಾಧಿಸಿದರೆ ಮಾತ್ರ ಮಂತ್ರಿಯಾಗಲು ಅವಕಾಶವಿದೆ ಎಂದು ಹೇಳಿತ್ತು.
ಇದನ್ನೂ ಓದಿ...ಅನರ್ಹರಿಗೆ ನೆಮ್ಮದಿ ಕೊಟ್ಟ ತೀರ್ಪು: ಸ್ಪೀಕರ್ ನಿರ್ಧಾರಕ್ಕೂ ಮಾನ್ಯತೆ
ಉಪಚುನಾವಣೆ ದಿನಾಂಕ ಪ್ರಕಟ
ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆ 15 ಕೇತ್ರಗಳಿಗೆ ಡಿ.5ಕ್ಕೆ ಉಪಚುನಾವಣೆಯಲ್ಲಿ ನಡೆಸಲು ಚುನಾವಣಾ ಆಯೋಗ ದಿನಾಂಕ ಘೋಷಿಸಿತ್ತು.
ಬಿಜೆಪಿಗೆ ಸೇರಿದ ಅನರ್ಹರು
ಗೋಕಾಕದ ರಮೇಶ ಜಾರಕಿಹೊಳಿ, ಹುಣಸೂರಿನ ಎಚ್.ವಿಶ್ವನಾಥ್, ಅಥಣಿಯ ಮಹೇಶ್ ಕುಮಠಳ್ಳಿ, ಕಾಗವಾಡದ ಶ್ರೀಮಂತ ಗೌಡ ಪಾಟೀಲ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರಿನ ಬಿ.ಸಿ.ಪಾಟೀಲ, ಹೊಸಪೇಟೆಯ ಆನಂದ್ ಸಿಂಗ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ, ಕೆ.ಆರ್.ಪುರದ ಭೈರತಿ ಬಸವರಾಜ್, ಯಶವಂತಪುರದ ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿನಗರದ ಮುನಿರತ್ನ, ಮಹಾಲಕ್ಷ್ಮಿ ಲೇಔಟ್‌ನ ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣಗೌಡ, ಹೊಸಪೇಟೆಯ ಎಂ.ಟಿ.ಬಿ.ನಾಗರಾಜ್, ರಾಣೆಬೆನ್ನೂರಿನ ಆರ್.ಶಂಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ
ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ನಿಟ್ಟಿನಲ್ಲಿ ನಾಯಕರು ಭರ್ಜರಿ ಪ್ರಚಾರ ನಡೆಸುವ ಮೂಲಕ ತಂತ್ರಗಾರಿಕೆ ನಡೆಸಿದ್ದರು.
ಸಂಖ್ಯಾಬಲದ ಲೆಕ್ಕಚಾರ...
ರಾಜ್ಯ ವಿಧಾನಸಭೆಯ ಒಟ್ಟು ಸಂಖ್ಯಾಬಲ 224. ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಬಿಜೆಪಿ –117, ಕಾಂಗ್ರೆಸ್ 68, ಜೆಡಿಎಸ್ - 34 ಹಾಗೂ3 ಪಕ್ಷೇತರ ಶಾಸಕರು ಇದ್ದಾರೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.