ಬೆಂಗಳೂರು: 'ವಿರೋಧ ಪಕ್ಷಗಳ ಸುಳ್ಳು, ಟೀಕೆ, ಅಪಪ್ರಚಾರಕ್ಕೆ ಉಪ ಚುನಾವಣೆಯ ಫಲಿತಾಂಶದ ಮೂಲಕ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿಗೆ ಜಯ ಸಿಕ್ಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಉಪಚುನಾವಣೆ ಫಲಿತಾಂಶ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ರಾಜ್ಯದ ಜನತೆ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಕೊಟ್ಟಿದ್ದಾರೆ' ಎಂದರು.
'ಈ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾಧ್ಯಮಗಳು ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ಹೇಳಿದ್ದೆ. ಕೆಲವು ಕ್ಷೇತ್ರದ ಸೋಲು, ಗೆಲುವು ನನ್ನದೇ ಎಂದು ಹೇಳಿದ್ದೆ. ವಿರೋಧ ಪಕ್ಷಗಳು ಟೀಕೆ, ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಭಾವನೆ ಮೇಲೆ ರಾಜಕಾರಣ ನಡೆಯುವುದಿಲ್ಲ., ಬದುಕಿನ ಮೇಲಿನ ರಾಜಕಾರಣಕ್ಕೆ ಒತ್ತು ನೀಡುವಂತೆ ನಮ್ಮ ಜನರೇ ಸಂದೇಶ ನೀಡಿದ್ದಾರೆ' ಎಂದು ತಿಳಿಸಿದರು.
'ವಿರೋಧ ಪಕ್ಷಗಳ ನಾಯಕರು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೇಲೆ ದೊಡ್ಡ ಚರ್ಚೆ ಮಾಡುತ್ತಿದ್ದರು, ಅಭಿವೃದ್ಧಿಗೆ ಹಣವಿಲ್ಲ ಎಂದರು. ಈ ಗ್ಯಾರಂಟಿ ಯೋಜನೆಗಳಿಗಾಗಿ ₹ 56 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದು, 224 ಕ್ಷೇತ್ರಗಳಿಗೆ ಈ ಹಣ ಹಂಚಿದರೆ ಪ್ರತಿ ಕ್ಷೇತ್ರಕ್ಕೆ ಸರಾಸರಿ ₹ 250 ಕೋಟಿ ಪ್ರತಿ ವರ್ಷ ನೀಡಲಾಗುತ್ತಿದೆ. ಇದು ಅಭಿವೃದ್ಧಿ, ಜನರ ಬದುಕಿಗಾಗಿ ನೀಡುತ್ತಿರುವ ಹಣವಲ್ಲವೇ? ಬಡ ಮತ್ತು ಮಧ್ಯಮದ ವರ್ಗದ ಜನರಿಗೆ ಆರ್ಥಿಕ ಶಕ್ತಿ ಸಿಕ್ಕಿಲ್ಲವೇ? ಈ ಯೋಜನೆ ಜಾರಿಯಲ್ಲಿ ಯಾವುದಾದರೂ ಅಕ್ರಮ ನಡೆದಿದೆಯೇ? ಇದೆಲ್ಲವನ್ನು ಅರಿತು ಜನರೇ ತೀರ್ಪು ನೀಡಿದ್ದಾರೆ’ ಎಂದು ತಿಳಿಸಿದರು.
ನಿಖಿಲ್, ಭರತ್ ಸೋಲಲ್ಲ: 'ಚನ್ನಪಟ್ಟಣದ ಫಲಿತಾಂಶವನ್ನು ನಿಖಿಲ್ ಕುಮಾರಸ್ವಾಮಿ ಅವರ ಸೋಲು ಎಂದು ನಾನು ಹೇಳುವುದಿಲ್ಲ. ಅವರ ತಂದೆ ಕುಮಾರಸ್ವಾಮಿ ಅವರು ಆ ಕ್ಷೇತ್ರದಿಂದ ಮುಖ್ಯಮಂತ್ರಿ ಆಗಿದ್ದರು. ಅವರು ಆ ಕ್ಷೇತ್ರದಲ್ಲಿ ಬಿಟ್ಟು ಹೋದ ಗುರುತಿಗೆ ಜನ ತೀರ್ಪು ನೀಡಿದ್ದಾರೆ‘ ಎಂದರು.
'ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸೋಲು ಎಂದು ಹೇಳುವುದಿಲ್ಲ. ಮುಖ್ಯಮಂತ್ರಿಯಾಗಿ ಅವರು ಆ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ಮೇಲೆ ಮತ ನೀಡಿದ್ದಾರೆ. ಸಂಡೂರಿನಲ್ಲಿ ಮೊದಲಿನಿಂದ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ. ಈ ಮೂರು ಕ್ಷೇತ್ರಗಳಲ್ಲಿ ಗ್ಯಾರಂಟಿ ಹಾಗೂ ಅಭಿವೃದ್ಧಿಗೆ ಜನ ಮತ ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರ ಟೀಕೆ ನೀವು ಗಮನಿಸಿದ್ದೀರಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಈ ಹಿಂದೆ ಹೇಳಿದ್ದೆ. ಇಂದು ಅದು ಸಾಬೀತಾಗಿದೆ' ಎಂದು ಹೇಳಿದರು.
'ವಿರೋಧ ಪಕ್ಷಗಳ ನಾಯಕರು ಮುಖ್ಯಮಂತ್ರಿಗಳು, ಮಂತ್ರಿಗಳ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು. ಸತ್ಯಾಂಶವಿದ್ದರೆ ನಮ್ಮನ್ನು ತಿದ್ದುವ ಪ್ರಯತ್ನ ಮಾಡಲಿ. ಆದರೆ ಸುಳ್ಳನ್ನೇ ಮನೆ ದೇವರು ಎಂದು ಪರಿಗಣಿಸಿ ಜನರ ತಲೆಗೆ ತುಂಬಲು ಹೋದರೆ ಕೆಲಸಕ್ಕೆ ಬರುವುದಿಲ್ಲ. ಬೊಮ್ಮಾಯಿ ಅವರ ಕ್ಷೇತ್ರದಲ್ಲಿ 14 ಸಾವಿರ ಮತಗಳ ಅಂತರ ಬಂದಿದೆ. ಈ ಚುನಾವಣೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದಲ್ಲಿ ನಡೆದಿದೆ. ಈ ಭಾಗದಲ್ಲಿ ಆಯ್ಕೆಯಾದ ಕೇಂದ್ರ ಮಂತ್ರಿಗಳು ಎನ್ ಡಿಎ ಮೈತ್ರಿ ಹೆಸರಲ್ಲಿ ಚುನಾವಣೆ ಮಾಡಿದ್ದರು” ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.