ಬೆಂಗಳೂರು: ರಾಜ್ಯ ಎಲ್ಲ ಭಾಗಗಳಲ್ಲೂ ಉಪಖನಿಜಗಳಿಗೆ ಏಕ ರೂಪದ ರಾಯಧನ ವಿಧಿಸುವ, ಗಣಿ ಗುತ್ತಿಗೆ ಮತ್ತು ಭೋಗ್ಯಕ್ಕೆ ಅನುಮತಿ ನೀಡುವ ನಿಯಮವನ್ನು ಸರಳೀಕರಿಸುವ ಕರ್ನಾಟಕ ರಾಜ್ಯ ಉಪಖನಿಜ ನೀತಿಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ಮೂಲಕ ಜಲ್ಲಿ ಕ್ರಷರ್‌ಗಳು, ಎಂ ಸ್ಯಾಂಡ್ ಗಣಿಗಾರಿಕೆಯನ್ನು ಕ್ರಮಬದ್ಧಗೊಳಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಖನಿಜಗಳ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಲ್ಲ ನಿಯಮಗಳೂ ಇಡೀ ರಾಜ್ಯಕ್ಕೆ ಏಕ ರೂಪದಲ್ಲಿರಲಿವೆ. ಮರಳು, ಎಂ ಸ್ಯಾಂಡ್, ಜಲ್ಲಿ ಮುಂತಾದವು ಸಾರ್ವಜನಿಕರಿಗೆ ಸುಲಭದ ದರದಲ್ಲಿ ಸಿಗುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.
ಸಂಪುಟ ಸಭೆಯ ಪ್ರಮುಖ ಅಂಶಗಳು:
* ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಜಂಬುನಾಥ ಹಳ್ಳಿಯಲ್ಲಿ ಹಂಪಿ ಶುರ್ಗಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಸ್ಥಾಪನೆಗೆ ಒಪ್ಪಿಗೆ. ಕಾರ್ಖಾನೆ ಸ್ಥಾಪನೆಗೆ ಗಣಿಗಾರಿಕೆಯಿಂದಾಗಿ ಪಾಳು ಬಿದ್ದಿರುವ 82 ಎಕರೆ ಭೂಮಿ ನೀಡಲಾಗುವುದು. ಸಂಸದ
ಜಿ.ಎಂ.ಸಿದ್ದೇಶ್ವರ ಒಡೆತನದ ಹಂಪಿ ಶುಗರ್ಸ್ ₹454 ಕೋಟಿ ಬಂಡವಾಳ ಹೂಡಲಿದೆ.
* ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕುಳಾಯಿಯಲ್ಲಿರುವ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೀನು ಸಂಸ್ಕರಣಾ ಸ್ಥಾವರವನ್ನು ₹25 ಕೋಟಿ ವೆಚ್ಚದಲ್ಲಿ ಮರೈನ್ ಎಕ್ಸ್‌ಪೋರ್ಟ್ ಯೂನಿಟ್ ಆಗಿ ಉನ್ನತೀಕರಿಸಲು ಒಪ್ಪಿಗೆ.
* ಇನ್ವೆಸ್ಟ್ ಕರ್ನಾಟಕ–2022 ಆಯೋಜಿಸಲು ಇವೆಂಟ್ ಮ್ಯಾನೇಜ್‌ಮೆಂಟ್ ಪಾರ್ಟ್‌ನರ್ ಅನ್ನು ನೇಮಿಸಲು ಮಾಡಿದ್ದ ಆದೇಶಕ್ಕೆ ಘಟನೋತ್ತರ ಅನುಮೋದನೆ ಮತ್ತು ₹74.99 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮತಿ.
* ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯಲ್ಲಿರುವ ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಸುಮಾರು 155 ಗ್ರಾಮಗಳ ರೈತರ ವಿದ್ಯುತ್ ಗೃಹ ಬಳಕೆಯ ವಿದ್ಯುತ್ ಶುಲ್ಕದ ಬಾಕಿ ಮೊತ್ತ ₹38.67 ಕೋಟಿಗಳಲ್ಲಿ ಬಡ್ಡಿ ಮೊತ್ತ ₹₹3.62 ಕೋಟಿ ಮನ್ನಾ ಮಾಡಿ ಅನುಮೋದನೆ ಹಾಗೂ ಅಸಲು ಮೊತ್ತ ₹35.04 ಕೋಟಿಗಳನ್ನು ಗ್ರಾಹಕರಿಂದ ವಸೂಲಿಗೆ ಮಾಡಲು ಒಪ್ಪಿಗೆ.
* ಗಿಣಿಗೇರಾ– ರಾಯಚೂರು, ತುಮಕೂರು– ರಾಯದುರ್ಗ, ಬಾಗಲಕೋಟೆ–ಕುಡಚಿ ಮತ್ತು ಚಿಕ್ಕಮಗಳೂರು–ಬೇಲೂರು ನೂತನ ರೈಲು ಮಾರ್ಗಗಳ ಯೋಜನೆಗಳ ಪರಿಷ್ಕೃತ ಅಂದಾಜುಗಳಿಂದ ಹೆಚ್ಚಾಗಿರುವ ರಾಜ್ಯದ ಪಾಲಿನ ಮೊತ್ತ ₹964.41 ಕೋಟಿಗಳಿಗೆ ಅನುಮೋದನೆ.
* 2022– 23 ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಂದ ಮೋಟಾರು ವಾಹನ ತೆರಿಗೆ ಮೊತ್ತ ₹166.99 ಕೋಟಿ ಸರ್ಕಾರಕ್ಕೆ ಪಾವತಿಸುವುದರಿಂದ ವಿನಾಯ್ತಿ ನೀಡಲು ಒಪ್ಪಿಗೆ.
* ಬೆಂಗಳೂರು ಜಲಮಂಡಳಿಯು ಶಿವ ಅಣೆಕಟ್ಟೆಯಿಂದ ಶಿವ ಸಮತೋಲನ ಜಲಾಶಯ (ಎಸ್‌ಬಿಆರ್) ದವರೆಗೆ ಸುಮಾರು 2.5 ಕಿ.ಮೀ ಉದ್ದದ 3,200 ಮಿ.ಮೀ ವ್ಯಾಸದ ಕಚ್ಚಾ ನೀರು ಸರಬರಾಜು (ಫ್ಯಾಬ್ರಿಕೇಷನ್ ಮತ್ತು ಜೋಡಣೆ ಸೇರಿ) ಕಾಮಗಾರಿಗೆ ₹93.05 ಕೋಟಿ ಅಂದಾಜು ಪಟ್ಟಿಗೆ ಅನುಮೋದನೆ.
* ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಹತ್ತಿರ ಕೃಷ್ಣಾ ನದಿಯ ನೀರನ್ನು ಉಪಯೋಗಿಸಿಕೊಂಡು ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕಿನ 14 ಗ್ರಾಮಗಳ ಸುಮಾರು 8,390 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ₹567 ಕೋಟಿ ಮೊತ್ತದ ಕರಗಾಂವ ಏತ ನೀರಾವರಿ ಯೋಜನೆ ಅನುಮತಿ
* ಕೇಂದ್ರ ಸರ್ಕಾರದ ಕೋರಿಕೆ ಮೇರೆಗೆ ಬಿಎಸ್‌ಎನ್‌ಎಲ್‌ಗಳಿಗೆ ಪ್ರತಿ ಗ್ರಾಮಗಳಲ್ಲಿ 4 ಜಿ ಮೊಬೈಲ್ ಟವರ್ ಅಳವಡಿಸಲು ತಲಾ 2,000 ಚದರಡಿ ಭೂಮಿ ನೀಡಲು ತೀರ್ಮಾನ.
* ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಡಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ರೂಂ, ವಿಡಿಯೊ ಸಂವಾದ ವ್ಯವಸ್ಥೆಗಳ ಸ್ಥಾಪನೆಗೆ ₹13.6 ಕೋಟಿ.
ವೇತನ ಪರಿಷ್ಕರಣೆ ₹7,246 ಕೋಟಿ
ರಾಜ್ಯ ಸರ್ಕಾರಿ ನೌಕರರಿಗೆ ಶೇ 17 ರಷ್ಟು ವೇತನ ಪರಿಷ್ಕರಿಸಿ ಹೊರಡಿಸಿದ್ದ ಆದೇಶವನ್ನು ಸಚಿವ ಸಂಪುಟ ಸಭೆಯಲ್ಲಿ ಸ್ಥಿರೀಕರಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ವೇತನ ಹೆಚ್ಚಳವನ್ನು ಭರಿಸಲು ವರ್ಷಕ್ಕೆ ₹7246.85 ಕೋಟಿ ಹೆಚ್ಚುವರಿ ಬೇಕಾಗುತ್ತದೆ ಎಂದರು.
ಪರೀಕ್ಷೆ ಇಲ್ಲದೆ ಬಡ್ತಿ: ನಿರ್ಧಾರವಿಲ್ಲ
ಬೆಂಗಳೂರು: ಪದವಿ ಪೂರೈಸಿರುವ ಶೇ 40ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರೀಕ್ಷೆ ಇಲ್ಲದೆ ಬಡ್ತಿ ನೀಡುವ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪದವಿ ಪೂರೈಸಿದ ಎಷ್ಟು ಶಿಕ್ಷಕರು ಇದ್ದಾರೆ, ಎಷ್ಟು ಉದ್ಯೋಗಳು ನಷ್ಟವಾಗುತ್ತವೆ ಎಂಬ ನಿಖರ ಮಾಹಿತಿ ಇಲ್ಲದ ಕಾರಣ ತೀರ್ಮಾನ ತೆಗೆದುಕೊಳ್ಳಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.