ADVERTISEMENT

ಕೆಆರ್‌ಎಸ್‌ ‘ಡಿಸ್ನಿ ಲ್ಯಾಂಡ್‌’ಗೆ ₹2,663.74 ಕೋಟಿ; ಸಂಪುಟ ಸಭೆ ಒಪ್ಪಿಗೆ

ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ; 30 ವರ್ಷ ಗುತ್ತಿಗೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:20 IST
Last Updated 26 ಜುಲೈ 2024, 16:20 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರವನ್ನು (ಕೆಆರ್‌ಎಸ್‌) ₹2,663.74 ಕೋಟಿ ವೆಚ್ಚದಲ್ಲಿ  ‘ಡಿಸ್ನಿ ಲ್ಯಾಂಡ್‌’ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ವಿವರ ನೀಡಿದರು.

ADVERTISEMENT

ಕೃಷ್ಣರಾಜ ಸಾಗರ ಜಲಾಶಯದ ಕೆಳಭಾಗದಲ್ಲಿನ 198 ಎಕರೆ ಜಾಗದಲ್ಲಿ ಬೃಂದಾವನ ಉದ್ಯಾನವನದ ಸೌಂದರ್ಯೀಕರಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.  ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಟೆಂಡರ್‌ ಕರೆಯುವ ಜಲಸಂಪನ್ಮೂಲ ಇಲಾಖೆಯ ಪ್ರಸ್ತಾವನೆಗೆ ಸಂಪುಟ ಸಭೆ ಅನುಮೋದನೆ ನೀಡಿತು ಎಂದರು.

ಇದಕ್ಕಾಗಿ ಹಣಕಾಸು ಇಲಾಖೆ, ಯೋಜನಾ ಇಲಾಖೆ, ಮೂಲಭೂತಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಈ ಇಲಾಖೆಗಳ ಅಭಿಪ್ರಾಯಗಳನ್ನು ಪರಿಷ್ಕರಿಸಿ ಟೆಂಡರ್‌ ಮೂಲಕ ಸಾರ್ವಜನಿಕ– ಖಾಸಗಿ ಸಹಭಾಗಿತ್ವದ ಚೌಕಟ್ಟಿನಲ್ಲಿ ಯೋಜನೆ ಅನುಷ್ಠಾನಗೊಳಿಸಲು ನಿರ್ಣಯಿಸಲಾಗಿದೆ ಎಂದರು.

ಕೃಷ್ಣರಾಜ ಸಾಗರದಲ್ಲಿ ಕ್ಯಾಸ್ಕೇಡ್, ಗ್ರ್ಯಾಂಡ್‌ ಸ್ಟ್ರೀಟ್‌, ಎಂಟ್ರಿ ಪ್ಲಾಝಾ, ಬೋಟಿಂಗ್‌ ಲೇಕ್‌, ಆಂಪಿಥೇಟರ್‌, ಬೃಹತ್ ಪ್ರತಿಮೆ, ಸಸ್ಯ ಉದ್ಯಾನ, ಜಂಗಲ್‌ ಬೋಟ್ ರೈಡ್‌, ಮೀನಾ ಬಜಾರ್‌, ಲೇಸರ್‌ಫೌಂಟೇನ್‌ ಶೋ, ಬೊಂಬೆ ಮ್ಯೂಸಿಯಂ, ವಾಟರ್‌ ಪಾರ್ಕ್‌, ಟೆಕ್ನೋ ಪಾರ್ಕ್‌, ರೋಲರ್‌ ಕೋಸ್ಟರ್‌, ಒಳಾಂಗಣ ಅಮ್ಯೂಸ್‌ಮೆಂಟ್‌ ಪಾರ್ಕ್‌, ರಿವರ್‌ ವ್ಯೂ ಡೆಕ್‌, ವ್ಯಾಕ್ಸ್‌ ಮ್ಯೂಸಿಯಂ, ಇತಿಹಾಸ ಮ್ಯೂಸಿಯಂ ಮುಂತಾದವು ಇರಲಿವೆ ಎಂದು ಪಾಟೀಲ ಹೇಳಿದರು.

ಸಂಪುಟ ಸಭೆಯ ಇತರ ತೀರ್ಮಾನಗಳು

* ಎವಿಜಿಸಿ ಉತ್ಕೃಷ್ಟತಾ ಕೇಂದ್ರ: ಅನಿಮೇಶನ್, ವಿಶುವಲ್‌ ಎಫೆಕ್ಟ್ಸ್‌ ಮತ್ತು ಗೇಮಿಂಗ್‌ ಉದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ₹16 ಕೋಟಿ ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಆರಂಭಿಸಲಾಗುವುದು.

*15 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ: ಈಗ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ 15 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ₹105 ಕೋಟಿ ನೀಡಲು ಒಪ್ಪಿಗೆ. ಪ್ರತಿ ಹಾಸ್ಟೆಲ್‌ನ ನಿರ್ಮಾಣ ವೆಚ್ಚ ₹7 ಕೋಟಿ. ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಯಿತು.

* ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ಹುದ್ದೆಗೆ ಬಡ್ತಿ ಹೊಂದಲು ಪ್ರೌಢ ಶಾಲಾ ಶಿಕ್ಷಕರಿಗೆ ಸ್ನಾತಕೋತ್ತರ ಪದವಿಯಲ್ಲಿ ಶೇ 55 ರಷ್ಟು ಅಂಕ ನಿಗದಿಪಡಿಸಿರುವುದನ್ನು ಪರಿಷ್ಕರಿಸಿ ಕನಿಷ್ಠ ಶೇ 50 ರಷ್ಟು ಅಂಕಗಳನ್ನು ನಿಗದಿಪಡಿಸಲು ಒಪ್ಪಿಗೆ.

* ವಯೋಮಿತಿ ಸಡಿಲಿಕೆ: 2017–18 ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ 2023–24 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಬಾರಿಗೆ ವಯೋಮಿತಿ ಸಡಿಲಿಸಿ ವಿಶೇಷ ಅವಕಾಶ ನೀಡುವ ಸಂಬಂಧ ಹೊರಡಿಸಿದ್ದ ಆದೇಶಕ್ಕೆ ಘಟನೋತ್ತರ ಅನುಮೋದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.