ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಎಸ್. ಸುರೇಶ್‌ಕುಮಾರ್, ಸಿ.ಪಿ. ಯೋಗೇಶ್ವರ, ಆರ್. ಶಂಕರ್, ಶ್ರೀಮಂತ ಪಾಟೀಲ ಅವರನ್ನು ಬಸವರಾಜ ಬೊಮ್ಮಾಯಿ ಅವರ ಸಂಪುಟದಿಂದ ಕೈ ಬಿಡುವುದು ಖಚಿತವಾಗಿದೆ.
ಅಲ್ಲದೆ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅರವಿಂದ ಬೆಲ್ಲದ, ಬಸವನಗೌಡ ಪಾಟೀಲ ಯತ್ನಾಳ್, ರೇಣುಕಾಚಾರ್ಯ, ರಾಜೂ ಗೌಡ ಅವರ ಹೆಸರೂ ಸಚಿವರಾಗುವವರ ಪಟ್ಟಿಯಲ್ಲಿ ಇಲ್ಲ.
ಎಚ್.ಡಿ. ಕುಮಾರಸ್ವಾಮಿ ನೇತೃತೃತ್ವದ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 17 ಮಂದಿ ಶಾಸಕರಲ್ಲಿ ಶಂಕರ್ ಮತ್ತು ಶ್ರೀಮಂತ ಪಾಟೀಲ ಪ್ರಮುಖರು. ಆರ್. ಶಂಕರ್ ಅವರು ತೋಟಗಾರಿಕೆ ಸಚಿವರಾಗಿದ್ದರೆ, ಶ್ರೀಮಂತ ಪಾಟೀಲ ಅವರು ಅಲ್ಪಸಂಖ್ಯಾತರ ಕಲ್ಯಾಣ ಖಾತೆಯನ್ನು ನಿಭಾಯಿಸಿದ್ದರು.
ದೆಹಲಿಯಿಂದ ಬುಧವಾರ ಬೆಳಿಗ್ಗೆ ಮರಳಿರುವ ಸಿ.ಪಿ. ಯೋಗೇಶ್ವರ, ‘ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲದೇ ಇದ್ದರೆ ಪಕ್ಷದ ಕೆಲಸ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಸರ್ಕಾರ ವಿರುದ್ಧ ಅಪಸ್ವರ ಎತ್ತಿದವರಲ್ಲಿ ಬಸನಗೌಡ ಪಾಟೀಲ ಯತ್ನಾಳ್, ಯೋಗೇಶ್ವರ, ಅರವಿಂದ ಬೆಲ್ಲದ ಪ್ರಮುಖರು.
ಇದನ್ನೂ ಓದಿ... ಇಂದು ಸಚಿವರಾಗಿ ಒಟ್ಟು 29 ಶಾಸಕರ ಪ್ರಮಾಣ ವಚನ: ಬೊಮ್ಮಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.