ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ಕಾರಣರಾದವರ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ತಮ್ಮ ವಿರುದ್ಧದ ಬಂಡಾಯಗಾರರನ್ನು ಸಂಪುಟದಿಂದ ದೂರವಿಡುವ ಮೂಲಕ ನಳೀನ್ ಕುಮಾರ್ ಕಟೀಲ್ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ. ಕಟೀಲ್ ಕಾಮಿಡಿ ಮಾಡಲು ಮಾತ್ರ. ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆವರೆಗೂ ಬಿಎಸ್‌ವೈ ಅವರೇ ಹೈಕಮಾಂಡ್ ಆಗಿದ್ದಾರೆ’ ಎಂದು ವ್ಯಂಗ್ಯವಾಡಿದೆ.
ಮೊದಲೆಲ್ಲ ಕಾಂಗ್ರೆಸ್‌ಗೆ ‘ಹೈಕಮಾಂಡ್ ಸಂಸ್ಕೃತಿ’ ಎಂದು ಹೇಳುತ್ತಿದ್ದ ಬಿಜೆಪಿ ಈಗ ತಮ್ಮದೇ ‘ಬಲಿಷ್ಠ ಹೈಕಮಾಂಡ್’ ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಡಬಲ್ ಸ್ಟ್ಯಾಂಡರ್ಡ್ ನೀತಿ ನಿರೂಪಿಸಿತ್ತು. ಯಡಿಯೂರಪ್ಪ ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದ ಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರಾಜಭವನದಲ್ಲಿ ಬುಧವಾರ (ಆ.4)ರಂದು ನಡೆದ ಸಮಾರಂಭದಲ್ಲಿ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿಯೂ ಸೇರಿಕೊಂಡಂತೆ ಬೊಮ್ಮಾಯಿ ಸಂಪುಟದ ಬಲ ಮೂವತ್ತಕ್ಕೆ ಏರಿದೆ. ನಾಲ್ಕು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗಿದೆ. 29 ಜನರ ಪೈಕಿ 23 ಹಳೆಯ ಮುಖಗಳೇ ಆಗಿವೆ. ಆರು ಹೊಸ ಮುಖಗಳಿಗಷ್ಟೇ ಅವಕಾಶ ನೀಡಲಾಗಿದೆ.
ಕರ್ನಾಟಕದ ಬಿಜೆಪಿ ಮತ್ತು ಸರ್ಕಾರವನ್ನು ಯಡಿಯೂರಪ್ಪ ಹಿಡಿತದಿಂದ ತಪ್ಪಿಸಲು ಹೊಸ ಮಾರ್ಗ ಹುಡುಕುವುದು, ಬೊಮ್ಮಾಯಿ ನೇತೃತ್ವದಲ್ಲಿ ‘ಪರ್ಯಾಯ’ವೊಂದನ್ನು ಸೃಷ್ಟಿಸುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ ಇದ್ದಂತೆ ಮೇಲ್ನೋಟಕ್ಕೆ ತೋರುತ್ತಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.