ADVERTISEMENT

ಕಸ್ತೂರಿ ರಂಗನ್‌ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 0:20 IST
Last Updated 27 ಸೆಪ್ಟೆಂಬರ್ 2024, 0:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸುವ ಬಗ್ಗೆ ಡಾ.ಕಸ್ತೂರಿ ರಂಗನ್‌ ವರದಿ ಆಧರಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ಸರ್ಕಾರ ನಿರ್ಧರಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ವರದಿಯನ್ನು ತಿರಸ್ಕರಿಸಿ ಕೈಗೊಂಡಿದ್ದ ನಿರ್ಣಯವನ್ನೇ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ADVERTISEMENT

ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರವು 2024ರ ಜುಲೈ 31ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿತ್ತು. 60 ದಿನಗಳಲ್ಲಿ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿತ್ತು ಎಂದು ಅವರು ಹೇಳಿದರು.

ಕಸ್ತೂರಿರಂಗನ್ ವರದಿಯು 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು. ಇದರಲ್ಲಿ ಆಗಿದ್ದ ಕೆಲವು ಲೋಪಗಳನ್ನು ತಿದ್ದುಪಡಿ ಮಾಡಿದಾಗ, 19,252.70 ಚ.ಕಿ.ಮೀ ಪರಿಸರ ಸೂಕ್ಷ್ಮ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ರಾಜ್ಯದ ವಿವಿಧ ಅರಣ್ಯ ಕಾನೂನುಗಳ ಅಡಿಯಲ್ಲಿ ಈಗಾಗಲೇ 16,164 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಆದ ಕಾರಣ ಕಸ್ತೂರಿರಂಗನ್ ವರದಿ ತಿರಸ್ಕರಿಸಲಾಗಿದೆ ಎಂದು ಪಾಟೀಲ ವಿವರಿಸಿದರು.

ಸಂಪುಟದ ಪ್ರಮುಖ ತೀರ್ಮಾನಗಳು:

  • ವಿಧಾನಪರಿಷತ್ತಿಗೆ ಇಬ್ಬರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ಬಗ್ಗೆ ಮುಖ್ಯಮಂತ್ರಿಯವರಿಗೆ ಅಧಿಕಾರ.

  • ಮೈಸೂರು ಜಿಲ್ಲೆ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿದುರುಗೂಡು ಗ್ರಾಮದಿಂದ ರಾಜ್ಯ ಹೆದ್ದಾರಿ–57 ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಬಿನಿ ನದಿಗೆ ಅಡ್ಡಲಾಗಿ ₹29.35 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅಸ್ತು.

  • ದಕ್ಷಿಣಕನ್ನಡ ಜಿಲ್ಲೆ ಹ್ಯಾಟ್‌–ಹಿಲ್‌ನಲ್ಲಿ ನ್ಯಾಯಾಂಗ ಅಧಿಕಾರಿಗಳ ವಸತಿ ನಿಲಯ ಕಟ್ಟಡಗಳ ನಿರ್ಮಾಣದ ₹11.70 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.

  • ಶಿರಸಿ ತಾಲ್ಲೂಕು ಚಿಪಗಿ ಗ್ರಾಮದಲ್ಲಿ ಡಿಯೋಸಿಸ್‌ ಎಜುಕೇಷನ್ ಸೊಸೈಟಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ 5 ಎಕರೆ 12 ಗುಂಟೆ ಜಮೀನನ್ನು ಕಾಯಂ ಆಗಿ ಮಂಜೂರು ಮಾಡಲು ತೀರ್ಮಾನ.

  • ಬೆಂಗಳೂರು ದಕ್ಷಿಣ ತಾಲ್ಲೂಕಿನ ಹೊಸಕೆರೆಹಳ್ಳಿ ಗ್ರಾಮದಲ್ಲಿ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘಕ್ಕೆ 20 ಗುಂಟೆ ಜಮೀನು ನೀಡಲು ಒಪ್ಪಿಗೆ.

  • ಸರ್ಕಾರಿ ಪ್ರೌಢ ಶಾಲೆಗಳಿಗೆ ಟಿಎಎಲ್‌ಪಿ ಮಾದರಿಯ ಕಂಪ್ಯೂಟರ್‌ ಲ್ಯಾಬ್ ಮತ್ತು ಇಂಟರ್‌ನೆಟ್‌ ಸೌಲಭ್ಯಗಳನ್ನು ₹14.97 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲು ತೀರ್ಮಾನ.

  • ರಾಜ್ಯದ 74 ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ₹40.79 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಒಪ್ಪಿಗೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.