ಬೆಂಗಳೂರು: ರಾಜ್ಯ ಸರ್ಕಾರದ ಆಯ್ದ ಕೆಲವು ಇಲಾಖೆಗಳ ‘ಎ’ ಮತ್ತು ‘ಬಿ’ ಶ್ರೇಣಿಯ ಹುದ್ದೆಗಳಿಗೆ ಸಂದರ್ಶನ ನಡೆಸದೇ, ಲಿಖಿತ ಪರೀಕ್ಷೆ ಮೂಲಕ ನೇರವಾಗಿ ನೇಮಕಾತಿ ಮಾಡಿಕೊಳ್ಳುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.
ಈ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವೇ (ಕೆಪಿಎಸ್‌ಸಿ) ಪರೀಕ್ಷೆ ನಡೆಸುತ್ತದೆ. ಆದರೆ ಸಂದರ್ಶನ ನಡೆಸುವುದಿಲ್ಲ. ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕಾತಿ ಪಟ್ಟಿ ತಯಾರಿಸಲಾಗುತ್ತದೆ.
ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಕೆಲವು ವೃತ್ತಿಪರ (ಪ್ರೊಫೆಷನಲ್) ಹುದ್ದೆಗಳಿಗೆ ಈ ರೀತಿ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳಿಗೆ ಸಂದರ್ಶನ ನಡೆಸದೆ ಲಿಖಿತ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ವಿಶೇಷವಾಗಿ ವೈದ್ಯರು, ಎಂಜಿನಿಯರ್‌ಗಳಂತಹ ಸೇವಾ ವರ್ಗದ ಹುದ್ದೆಗಳಿಗೆ ಮೌಖಿಕ ಸಂದರ್ಶನದ ಅಗತ್ಯವಿಲ್ಲ ಎಂದು ತಿರ್ಮಾನಿಸಲಾಗಿದೆ. ಕೆಎಎಸ್ ಅಥವಾ ಪೊಲೀಸ್ ಇಲಾಖೆ ಹುದ್ದೆಗಳಿಗೆ ಇದು ಅನ್ವಯ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಉತ್ತರ ಪ್ರದೇಶ ಮಾದರಿ ಕಾಯ್ದೆ ಇಲ್ಲ
ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರಿ ಸ್ವತ್ತುಗಳನ್ನು ನಾಶ ಮಾಡುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಕಾನೂನು ತಿದ್ದುಪಡಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.
ಸೆಕ್ಷೆನ್2(ಎ) ಅನ್ವಯ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಗೆ ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ. ಹೀಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ತರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.