ಬೆಂಗಳೂರು: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಏಳು ಶಾಸಕರ ಹೆಸರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ. ಈ ಬಗ್ಗೆ ಸಂಕ್ಷಿಪ್ತ ವಿವರಣೆ ಕೊಡಲಾಗಿದೆ.
ಉಮೇಶ್ ಕತ್ತಿ:
1985ರಲ್ಲಿ ಶಾಸಕ ವಿಶ್ವನಾಥ್ ಮಲ್ಲಪ್ಪ ಕತ್ತಿ ಅವರ ನಿಧನದ ಬಳಿಕ ಅವರ ಪುತ್ರ ಉಮೇಶ್ ಕತ್ತಿ ರಾಜಕೀಯ ರಂಗಕ್ಕೆ ಪ್ರವೇಶಿಸಿ ಹಲವು ಬಾರಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಜನತಾದಳ, ಜೆಡಿಎಸ್ ಬಳಿಕ ಬಿಜೆಪಿ ಪಕ್ಷದಿಂದ ಚುನಾಯಿತರಾಗಿರುವ ಉಮೇಶ್ ಕತ್ತಿ ಅತ್ಯಂತ ಪ್ರಭಾವಿ ರಾಜಕಾರಣಿಗಳಲ್ಲಿ ಓರ್ವರೆನಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದಲ್ಲಿ ಹಲವು ಬಾರಿ ಜಯ ಸಾಧಿಸಿರುವ ಉಮೇಶ್ ಕತ್ತಿ, ಈಗಾಗಲೇ ಸಚಿವ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ಕ್ಷೇತ್ರ: ಹುಕ್ಕೇರಿ, ಬೆಳಗಾವಿ ಜಿಲ್ಲೆ
ವಯಸ್ಸು: 60
ವಿದ್ಯಾರ್ಹತೆ: ಪಿಯುಸಿ ಅಪೂರ್ಣ
ಜಾತಿ: ಬಣಜಿಗ ಲಿಂಗಾಯತ
ವೃತ್ತಿ: ಕೃಷಿ, ಉದ್ಯಮಿ, ಸಮಾಜಸೇವೆ, ಸಹಕಾರ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.
ಅನುಭವ: 9 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ. ಉಪ ಚುನಾವಣೆ ಸೇರಿ 8 ಬಾರಿ ಗೆಲುವು. ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಣೆ. ಈಗ 4ನೇ ಬಾರಿಗೆ ಸಚಿವರಾಗಿದ್ದಾರೆ.
ಮುರುಗೇಶ್ ನಿರಾಣಿ:
ಮುರುಗೇಶ್ ನಿರಾಣಿ 2004ರಲ್ಲಿ ಬೀಳಗಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು. 2008ರಲ್ಲೂ ಜಯ ಗಳಿಸಿದ್ದರು. ಆಗ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಭಾರಿ ಹಾಗೂ ಮಧ್ಯಮ ಕೈಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ 2014ರಲ್ಲಿ ಸೋಲು ಕಂಡರೂ 2018ರಲ್ಲಿ ಮತ್ತೆ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಪ್ರಭಾವ, ಒತ್ತಡಕ್ಕೆ ಮಣೆ; ಯುವ ಶಾಸಕರಿಗೆ ಸಿಗದ ಮನ್ನಣೆ
ಎಸ್. ಅಂಗಾರ:
ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯ ದೊರಕಿದೆ. ಸತತ 6 ಬಾರಿಗೆ ಸುಳ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ಎಸ್. ಅಂಗಾರಗೆ ಸಚಿವ ಸ್ಥಾನ ದೊರಕಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸಿಗೆ ಕಾರಣವಾಗಿದೆ. ಸಂಘ ಪರಿವಾರ ಪ್ರಬಲವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1994ನೇ ಇಸವಿಯಿಂದ ಎಸ್. ಅಂಗಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.
ಕ್ಷೇತ್ರ: ಸುಳ್ಯ ವಿಧಾನ ಸಭಾ (ಮೀಸಲು)
ಜನನ: ಸುಳ್ಯ ತಾಲ್ಲೂಕಿನ ನೆಲ್ಲೂರುಕೆಮ್ರಾಜೆ ಗ್ರಾಮದ ಸುಳ್ಳಿಯಲ್ಲಿ 1964ರ ಜುಲೈ 1
ವಾಸ: ಸುಳ್ಯ ತಾಲ್ಲೂಕಿನ ಅಮರಮುಡ್ನೂರು ಗ್ರಾಮದ ಕುಂಟಿಕಾನ
ತಂದೆ–ತಾಯಿ: ತಂದೆ ದಿ. ಚನಿಯ ಮತ್ತು ತಾಯಿ ದಿ. ಹುಕ್ರು ಕೂಲಿಕಾರ್ಮಿಕರಾಗಿದ್ದರು.
ವಯಸ್ಸು: 56
ವಿದ್ಯಾರ್ಹತೆ: 8ನೇ ತರಗತಿ
ಜಾತಿ: ಮೊಗೇರ (ಪರಿಶಷ್ಟ ಜಾತಿ)
ವೃತ್ತಿ: ಕೃಷಿ
ಪತ್ನಿ: ವೇದಾವತಿ
ಮಕ್ಕಳು: ಗೌತಮ್ (ಪುತ್ರ), ಪೂಜಾಶ್ರೀ (ಪುತ್ರಿ)
ಸುಳ್ಯ ತಾಲ್ಲೂಕಿನ ಕುಕ್ಕುಜಡ್ಕ ಶಾಲೆಯಲ್ಲಿ 8ನೇ ತರಗತಿ ಪೂರೈಸಿದ ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆರ್‌ಎಸ್‌ಎಸ್ ನಂಟಿನ ಮೂಲಕ ಬಿಜೆಪಿ ಸೇರ್ಪಡೆ. 1988ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸುಳ್ಯ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಸೋಲು ಅನುಭವಿಸಿದ್ದರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು, ಈಗ ಸತತ ಆರನೇ ಬಾರಿ ಶಾಸಕರಾಗಿದ್ದಾರೆ. ಸತತ 27 ವರ್ಷದಿಂದ ಶಾಸಕರಾಗಿದ್ದಾರೆ. ವಿಧಾನ ಸಭೆಯಲ್ಲಿ ಹಿರಿಯ ಶಾಸಕರಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷತೆ ಸೇರಿದಂತೆ ವಿವಿಧ ಸಾಂವಿಧಾನಿಕ ಸಮಿತಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಅರವಿಂದ ಲಿಂಬಾವಳಿ:
ಮಹದೇವಪುರ ಕ್ಷೇತ್ರದ ಜನತೆಯ ಪ್ರೀತಿಗೆ ಪಾತ್ರವಾಗಿರುವ ಅರವಂದ ಲಿಂಬಾವಳಿ, 2004ರಲ್ಲಿ ವಿಧಾನ ಪರಿಷತ್ ಸದಸ್ಯರಾದರು. ಆನಂತರ 2008ರ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರದ ಜನತೆಯ ಪ್ರತಿನಿಧಿಯಾಗಿ ಆಯ್ಕೆಯಾದರು. ಉನ್ನತ ಶಿಕ್ಷಣ ಸಚಿವರಾಗಿಯೂ ಕೆಲಸ ನಿರ್ವಹಿಸಿರುವ ಅರವಿಂದ ಲಿಂಬಾವಳಿ ಅವರು ಈಗ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು.
ಇದನ್ನೂ ಓದಿ:Live: ಸಚಿವ ಸಂಪುಟ ವಿಸ್ತರಣೆ: ರಾಜಭವನ ರಸ್ತೆಯಲ್ಲಿ ಸಂಚಾರ ನಿರ್ಬಂಧ; ನೂತನ ಸಚಿವರ ಪ್ರಮಾಣ ವಚನಕ್ಕೆ ಸಿದ್ಧತೆ
ಎಂ.ಟಿ.ಬಿ ನಾಗರಾಜ್:
ವಿಧಾನ ಪರಿಷತ್ ಸದಸ್ಯರಾಗಿರುವ ಎಂ.ಟಿ.ಬಿ. ನಾಗರಾಜ್ ಸಚಿವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ 17 ಬಂಡಾಯ ಶಾಸಕರಲ್ಲಿ ಎಂ.ಟಿ.ಬಿ ನಾಗರಾಜ್ ಸಹ ಒಬ್ಬರಾಗಿದ್ದರು.
ಆರ್. ಶಂಕರ್:
ರಾಣೇಬೆನ್ನೂರ ತಾಲ್ಲೂಕಿನ ಜನಪ್ರಿಯ ನಾಯಕರಾಗಿರುವ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್, ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಕ್ಷೇತ್ರ: ರಾಣೆಬೆನ್ನೂರು, ಹಾವೇರಿ ಜಿಲ್ಲೆ
ವಯಸ್ಸು: 53
ಜಾತಿ: ಕುರುಬ
ಜನ್ಮಸ್ಥಳ: ಬೆಂಗಳೂರು
ತಂದೆ: ರಾಮಚಂದ್ರಪ್ಪ
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ
ರಾಜಕೀಯ ಅನುಭವ: 2014ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೋಳಿವಾಡ ವಿರುದ್ಧ ಸೋಲು. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಲ್ಲಿ ‘ಕೆಪಿಜೆಪಿ’ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೋಳಿವಾಡ ವಿರುದ್ಧ ಗೆಲುವು.
ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವ ಹಾಗೂ ಪೌರಾಡಳಿತ ಸಚಿವರಾಗಿದ್ದರು. ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆ. ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಣೆ.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ: ಏಳು ನೂತನ ಸಚಿವರ ಪ್ರಮಾಣ ಸ್ವೀಕಾರ
ಸಿ.ಪಿ. ಯೋಗೇಶ್ವರ್:
ಚನ್ನಪಟ್ಟಟ ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ ಸಾಧನೆ ಮಾಡಿರುವ ಸಿ.ಪಿ. ಯೋಗೇಶ್ವರ್ ಜನನಾಯಕನಾಗಿ ಮಿಂಚುತ್ತಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗ ಹಾಗೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಯಸ್ಸು: 57
ವೃತ್ತಿ: ಉದ್ಯಮಿ, ಚಿತ್ರನಟ
ಪತ್ನಿ: ಶೀಲಾ
ಊರು: ಚಕ್ಕೆರೆ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ
ಕ್ಷೇತ್ರ: ವಿಧಾನ ಪರಿಷತ್ ಸದಸ್ಯ
ಜಾತಿ: ಒಕ್ಕಲಿಗ
ವಿದ್ಯಾರ್ಹತೆ: ಬಿಎಸ್ಸಿ
ಅನುಭವ: ಎರಡು ಉಪ ಚುನಾವಣೆ ಸೇರಿದಂತೆ ಒಟ್ಟು ಏಳು ಬಾರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ. ಐದರಲ್ಲಿ ಗೆಲುವು. ಎರಡಲ್ಲಿ ಸೋಲು. 2011ರಿಂದ 2013ರವರೆಗೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.