ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದಕ್ಕೆ ಹೋಗಿರುವುದರಿಂದ ಯಾವುದೇ ಸಚಿವರ ಖಾತೆಗಳೂ ಬದಲಾವಣೆ ಆಗುವುದಿಲ್ಲ. ಆದರೆ, ಸಚಿವರ ಜಿಲ್ಲಾ ಉಸ್ತುವಾರಿಯನ್ನು ಬದಲಿಸಿ, ಸಚಿವರಿಗೆ ತವರು ಜಿಲ್ಲೆಗಳ ಉಸ್ತುವಾರಿ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರ ಖಾತೆಗಳು ಬದಲಾಗಬಹುದು ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ಅವರನ್ನು ಕೈಬಿಡಲಾಗುತ್ತದೆ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿತ್ತು. ಆದರೆ, ಆರ್‌ಎಸ್‌ಎಸ್ ಮೂಲದ ಯಾವುದೇ ಸಚಿವರ ಖಾತೆಗಳು ಬದಲಾಗುವುದಿಲ್ಲ ಮತ್ತು ಕೈಬಿಡುವುದೂ ಇಲ್ಲ. ಇದಕ್ಕೆ ಆರ್‌ಎಸ್‌ಎಸ್ ಒಪ್ಪಿಯೂ ಇಲ್ಲ ಎಂದು ಹೇಳಲಾಗಿದೆ.
ಗೃಹ ಖಾತೆಯನ್ನು ಆರಗ ಅವರಿಂದ ಹಿಂದಕ್ಕೆ ಪಡೆದು ಅದನ್ನು ಅಶೋಕ ಅಥವಾ ಸುನೀಲ್ ಕುಮಾರ್ ಅವರಿಗೆ ನೀಡಬಹುದು ಎಂಬ ಚರ್ಚೆ ನಡೆದಿತ್ತು. ಆದರೆ, ಇಂತಹ ಯಾವುದೇ ಪ್ರಸ್ತಾವ ಮುಖ್ಯಮಂತ್ರಿಯವರ ಮುಂದಿಲ್ಲ. ಪಕ್ಷದ ವರಿಷ್ಠರ ಜತೆಗೂ ಅಂತಹ ಚರ್ಚೆ ನಡೆಸಿಲ್ಲ ಎಂದೂ ಮೂಲಗಳು ತಿಳಿಸಿವೆ.
ಆದರೆ ಚುನಾವಣೆಯ ಹಿತದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಆಗಬಹುದು. ಸಚಿವರಿಗೆ ತವರು ಜಿಲ್ಲೆಗಳಲ್ಲೇ ಉಸ್ತುವಾರಿ ನೀಡಲಾಗುವುದು. ಇದರಿಂದ ಚುನಾವಣೆಗೆ ತಯಾರಿ ನಡೆಸಲು ಅನುಕೂಲ ಆಗಬಹುದು ಎಂಬ ಚರ್ಚೆಯೂ ನಡೆದಿದೆ. ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿದಾಗ, ತವರು ಜಿಲ್ಲೆಗಳು ಸಿಗದೇ ಕೆಲವು ಸಚಿವರು ಮುನಿಸಿಕೊಂಡಿದ್ದರು. ಈ ಬಾರಿ ಅವರನ್ನು ಸಮಾಧಾನ ಪಡಿಸಲಾಗುವುದು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.