ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ, ಮೊದಲ ಹಂತದಲ್ಲಿ 275 ಪಬ್ಲಿಕ್ ಶಾಲೆಗಳಲ್ಲಿ ಪ್ರಾರಂಭಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಇದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಶಿಕ್ಷಣ ನೀಡಲು ಡಿಎಡ್ ಆದವರಿಗೆ ಮಾಂಟೆಸ್ಸರಿ ತರಬೇತಿ ನೀಡಲಾಗುತ್ತಿದೆ, ಶಿಕ್ಷಕರಿಗೆ ₹7,500 ಮತ್ತು ಆಯಾಗಳಿಗೆ ₹5,000 ಗೌರವ ಸಂಭಾವನೆ ನೀಡಲಾಗುವುದು ಎಂದು ಎಂದು ಮಾಧುಸ್ವಾಮಿ ಹೇಳಿದರು.
ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು
* ವಿಶ್ವಬ್ಯಾಂಕ್ ನೆರವಿನೊಂದಿಗೆ 20 ಜಿಲ್ಲೆಗಳ ಆಯ್ದ ತಾಲ್ಲೂಕುಗಳಲ್ಲಿಉ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಪ್ರದೇಶದ ಪುನರುಜ್ಜೀವನ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು.₹600 ಕೋಟಿ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ ₹180 ಕೋಟಿ ಮತ್ತು ವಿಶ್ವಬ್ಯಾಂಕ್ ₹420 ಕೋಟಿಯನ್ನು ಭರಿಸಲಿವೆ. ಕೋಲಾರ, ಬಾಗೇಪಲ್ಲಿ, ಚಳ್ಳಕೆರೆ, ಶಿಕಾರಿಪುರ, ಗುಂಡ್ಲುಪೇಟೆ, ಹರಪನಹಳ್ಳಿ, ಶಿರಾ, ಅರಸಿಕರೆ, ಕಡೂರು, ಬೈಲಹೊಂಗಲ, ಅಥಣಿ, ಹಿರೇಕೆರೂರು, ಹುನಗುಂದ, ಕುಂದಗೋಳ, ಬಸವನಬಾಗೇವಾಡಿ, ರೋಣ, ಜೀವರ್ಗಿ, ಬಸವಕಲ್ಯಾಣ,ಮಾನ್ವಿ, ಯಲಬುರ್ಗ, ಶಹಾಪುರ ತಾಲ್ಲೂಕುಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.
*ಶಿವಮೊಗ್ಗ ಜಿಲ್ಲೆ ಜೋಗಜಲಪಾತದ ಅಭಿವೃದ್ಧಿಗೆ ಮೆಸರ್ಸ್ ಬಿಆರ್‌ಎಸ್ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಈ ಹಿಂದೆ ₹450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಆದರೆ ಅವರು ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಲಿಲ್ಲ. ಈ ಕರ್ನಾಟಕ ವಿದ್ಯುತ್ ನಿಗಮವೇ ₹120 ಕೋಟಿ ವೆಚ್ಚದಲ್ಲಿ, ರೋಪ್‌ವೇ, ಉದ್ಯಾನ, ಜಲಕ್ರೀಡೆ, ಕೆಫೆಟೇರಿಯಾ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದೆ.
*ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಗೆ ಅನುಮೋದನೆ. 430 ಪ್ರಥಮ ದರ್ಜೆ ಕಾಲೇಜುಗಳು, 87 ಪಾಲಿಟೆಕ್ನಿಕ್ ಮತ್ತು 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಇದಕ್ಕಾಗಿ ₹35 ಕೋಟಿ ನೀಡಲು ಒಪ್ಪಿಗೆ.
* ಸೊರಬ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ
* ಯಾದಗಿರಿ ಜಿಲ್ಲೆ ದೇವದುರ್ಗಾ ತಾಲ್ಲೂಕು ಅರಕೇರಾ ಗ್ರಾಮ ಪಂಚಾಯಿತಿ ತಾಲ್ಲೂಕ್ ಆಗಿ ಮೇಲ್ದರ್ಜೆಗೆ
*ಮುಧೋಳ ತಾಲ್ಲೂಕು ಲೋಕಾಪುರ ಗ್ರಾಮ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ
* ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 225 ಕ್ಕೆ ಹೆಚ್ಚಿಸಲು ಚರ್ಚೆ. ಬಿಬಿಎಂಪಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಬೇಕಾಗಿರುವುದರಿಂದ ಚುನಾವಣೆ ಮುಂದೂಡಲು ಕೋರಿಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.