ADVERTISEMENT

ಹೊರ ಗುತ್ತಿಗೆಯಲ್ಲಿ ಮೀಸಲಾತಿ: 449 ಹುದ್ದೆಗಳಿಗೆ ಮೊದಲ ಬಾರಿಗೆ ಮೀಸಲು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ಸರ್ಕಾರದ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ಜಾರಿ ಮಾಡುವ ಮಹತ್ವದ ತೀರ್ಮಾನವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.

ಮೊದಲ ಹಂತದಲ್ಲಿ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 449 ಸಿಬ್ಬಂದಿಯ ಹೊರಗುತ್ತಿಗೆ ನೇಮಕದಲ್ಲಿ ಇದು ಅನ್ವಯ ಆಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಸ್ಟರ್‌ ಅನ್ವಯವೇ ನೇಮಕ ಮಾಡಲಾಗುವುದು. ಇದರಲ್ಲಿ ಹೈದರಾಬಾದ್‌ ಕಲ್ಯಾಣ ಮೀಸಲಾತಿಯೂ ಸೇರಿದೆ. ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ 449 ಹುದ್ದೆಗಳ ಸೇವೆ ಪಡೆಯಲು ₹11.30 ಕೋಟಿ ಅಗತ್ಯವಿದೆ. ಇದಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ವಿವರಿಸಿದರು.

ADVERTISEMENT

ಈ ಹಿಂದೆ ಸರ್ಕಾರಿ ಹುದ್ದೆಗಳ ಹೊರಗುತ್ತಿಗೆಯಲ್ಲಿ ಮೀಸಲಾತಿ ಇರಲಿಲ್ಲ. ಹೊರಗುತ್ತಿಗೆಯಲ್ಲೂ ಮೀಸಲಾತಿ ನೀಡಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದವು.

ಫೆಬ್ರುವರಿಯಲ್ಲಿ ಅಧಿವೇಶನ: 2024ರ ಫೆಬ್ರುವರಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ಮತ್ತು ಬಜೆಟ್‌ ಅಧಿವೇಶನ ನಡೆಯಲಿದ್ದು, ಇದರ ದಿನಾಂಕವನ್ನು ತೀರ್ಮಾನಿಸುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿದೆ ಎಂದು ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.