ADVERTISEMENT

ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ಅವ್ಯವಹಾರ: ₹769 ಕೋಟಿ ಅಕ್ರಮ

ಬಿಜೆಪಿ ಸರ್ಕಾರದ ಅವಧಿಯ ಖರೀದಿ * ನ್ಯಾ. ಡಿಕುನ್ಹಾ ಆಯೋಗದ ವರದಿ ಸಂಪುಟ ಸಭೆಗೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ನಡೆದ ಅವ್ಯವಹಾರಗಳ ಕುರಿತು ತನಿಖೆ ನಡೆಸಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಆಯೋಗವು ಒಟ್ಟು ₹3,741.36 ಕೋಟಿ ಮೊತ್ತದ ಖರೀದಿಯಲ್ಲಿ ₹769 ಕೋಟಿಯ ಅವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಿದೆ.

ಆಯೋಗವು ಇತ್ತೀಚೆಗೆ ಸಲ್ಲಿಸಿರುವ ಮಧ್ಯಂತರ ವರದಿ ಆಧರಿಸಿ, ಅವ್ಯವಹಾರಕ್ಕೆ ಕಾರಣರಾದವರಿಂದ ಹಣ ವಸೂಲಿ ಮಾಡಲು ಮತ್ತು ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸಲು ಸರ್ಕಾರ ಮುಂದಡಿ ಇಟ್ಟಿದೆ.

ADVERTISEMENT

ಕೋವಿಡ್ ಸಾಂಕ್ರಾಮಿಕವು ರಾಜ್ಯವನ್ನು ಕಾಡಿದಾಗ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕೋವಿಡ್ ಅಕ್ರಮದ ತನಿಖೆಗೆ ಆಯೋಗವನ್ನು ರಚಿಸಲಾಗಿತ್ತು. 

ಗುರುವಾರ (ಅ.10) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಈ ಅಕ್ರಮದಲ್ಲಿ ಭಾಗಿಯಾದ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ನಗರಾಭಿವೃದ್ಧಿ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಅವರ ಮೇಲೆ ನಿರ್ದಿಷ್ಟವಾದ ಆರೋಪ ಪಟ್ಟಿ ಸಿದ್ಧಪಡಿಸುವ ಕುರಿತ ಪ್ರಸ್ತಾವ ಸಚಿವ ಸಂಪುಟದ ಮುಂದೆ ಬರಲಿದೆ. 

ಅಕ್ರಮದಲ್ಲಿ ಭಾಗಿಯಾದ ಖಾಸಗಿ ಸಂಸ್ಥೆಗಳಿಂದ ಹಣ ವಸೂಲಿ ಮಾಡಲು ಮತ್ತು ಹೆಚ್ಚಿನ ತನಿಖೆ ಅಗತ್ಯ ಇರುವ ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ‘ಪ್ರತ್ಯೇಕ ಕೋಶ’ ರಚಿಸುವ ಬಗ್ಗೆಯೂ ಸಭೆಗೆ ಪ್ರಸ್ತಾವ ಮಂಡಿಸಲಾಗಿದೆ. 

‘ಈ ಪ್ರತ್ಯೇಕ ಕೋಶ ರಚನೆ ಕುರಿತು ನಿರ್ಧರಿಸಲು ಮತ್ತು ಈ ಕೋಶ ನೀಡುವ ವರದಿಯನ್ನು ಪರಿಶೀಲಿಸಿ ವರದಿ ಅಂತಿಮಗೊಳಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವೃಂದ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಉನ್ನತಮಟ್ಟದ ಸಮಿತಿ ರಚಿಸಲು ಮತ್ತು ಈ ಸಮಿತಿಯ ಮೇಲ್ವಿಚಾರಣೆಗೆ ಸಚಿವ ಸಂಪುಟ ಉಪ ಸಮಿತಿ ರಚಿಸುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೋವಿಡ್‌ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪಗಳ ತನಿಖೆಗೆ ರಾಜ್ಯ ಸರ್ಕಾರ 2023ರ ಆಗಸ್ಟ್ 25ರಂದು ಜಾನ್ ಮೈಕೆಲ್ ಡಿಕುನ್ಹಾ  ಏಕ ಸದಸ್ಯ ಆಯೋಗವನ್ನು ರಚಿಸಿತ್ತು. ಈ ಆಯೋಗ ಇದೇ ಆಗಸ್ಟ್‌ 31ರಂದು ಮಧ್ಯಂತರ ವರದಿ ಸಲ್ಲಿಸಿದೆ. ಈ ವರದಿಯನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಕುರಿತು ವಿವರಣೆ ನೀಡಲು ಸಂಬಂಧಪಟ್ಟ ಇಲಾಖೆಗಳಾದ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ನಗರಾಭಿವೃದ್ಧಿ ಇಲಾಖೆಗಳ ಮುಖ್ಯಸ್ಥರಿಗೆ ಸೆ. 9ರಂದು ಹಸ್ತಾಂತರಿಸಲಾಗಿತ್ತು. ತಪ್ಪಿತಸ್ಥರಿಂದ ಹಣ ವಸೂಲಿ, ಶಿಸ್ತು ಕ್ರಮ ಮತ್ತು ಅಪರಾಧ ಮೊಕದ್ದಮೆ ದಾಖಲಿಸಲು ಈ ಇಲಾಖೆಗಳು ಸೂಚಿಸಿವೆ. ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಸೋಮವಾರ (ಅ.7) ನಡೆದ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸಭೆಯಲ್ಲಿ ಆಯೋಗ ನೀಡಿರುವ ಮಧ್ಯಂತರ ವರದಿಯನ್ನು ಆಧರಿಸಿದ, ಪ್ರಸ್ತಾವವನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ತೀರ್ಮಾನಿಸಲಾಗಿತ್ತು ಎಂದೂ ಮೂಲಗಳು ಹೇಳಿವೆ.

ನ್ಯಾ. ಡಿಕುನ್ಹಾ ಆಯೋಗವು 11 ಸಂಪುಟಗಳಲ್ಲಿ ಮಧ್ಯಂತರ ವರದಿಯನ್ನು ನೀಡಿದೆ. ಇನ್ನು ಬಿಬಿಎಂಪಿ ನಾಲ್ಕು ವಲಯಗಳ ಮತ್ತು ರಾಜ್ಯದ ಎಲ್ಲ 31 ಜಿಲ್ಲೆಗಳ ವರದಿ ಸಲ್ಲಿಸಬೇಕಿದೆ. ಈ ವರದಿಗೆ ಸಂಬಂಧಿಸಿದಂತೆ ಆಯೋಗವು ಇಲಾಖೆಗಳಿಂದ ಸುಮಾರು 55 ಸಾವಿರ ಕಡತಗಳನ್ನು ಪಡೆದು ಪರಿಶೀಲಿಸಿದೆ. ಆ ಕಡತಗಳನ್ನು ವಾಪಸ್‌ ಪಡೆದು ವರದಿಯಲ್ಲಿ ವಿವರಿಸಿದ ಲೋಪದೋಷಗಳಿಗೆ ಕಾರಣರಾದ ವಿವಿಧ ವೃಂದಗಳ ಅಧಿಕಾರಿ, ಸಿಬ್ಬಂದಿ ವಿರುದ್ಧ ದೋಷಾರೋಪಣೆ ಪಟ್ಟಿ ತಯಾರಿಸಬೇಕಿದೆ. ಇಲಾಖೆಗಳ ಅಧಿಕಾರಿ, ನೌಕರರ ವಿರುದ್ಧ ಆರೋಪಗಳು ಇರುವುದರಿಂದ ತನಿಖೆಗೆ ಪ್ರತ್ಯೇಕ ಕೋಶ ರಚಿಸುವ ಅಗತ್ಯವಿದೆ ಎಂದು ಸಚಿವ ಸಂಪುಟಕ್ಕೆ ಆರೋಗ್ಯ ಇಲಾಖೆ ಮಂಡಿಸಿದ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ ಎಂದೂ ಗೊತ್ತಾಗಿದೆ.

ಸಂಪುಟ ಸಭೆ ಮುಂದಿರುವ ಪ್ರಸ್ತಾವವೇನು?

  •  ಆಯೋಗದ ವರದಿಯ ಕುರಿತು ನಿಯಮಾನುಸಾರ ಕ್ರಮ

  •  ತಪ್ಪಿಸ್ಥರನ್ನು ಗುರುತಿಸಿ ಕ್ರಮ ಮತ್ತು ಹೆಚ್ಚಿನ ತನಿಖೆಗೆ ‘ಪ್ರತ್ಯೇಕ ಕೋಶ’

  •  ‘ಪ್ರತ್ಯೇಕ ಕೋಶ’ ರಚಿಸಲು ಮತ್ತು ವರದಿ ಅಂತಿಮಗೊಳಿಸಲು ಅಧಿಕಾರಿಗಳ ಉನ್ನತಮಟ್ಟದ ಸಮಿತಿ

  •  ಉನ್ನತಮಟ್ಟದ ಸಮಿತಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ

  •  ಉನ್ನತಮಟ್ಟದ ಸಮಿತಿಯ ಮೇಲ್ವಿಚಾರಣೆಗೆ ಸಚಿವ ಸಂಪುಟ ಉಪ ಸಮಿತಿ

  •  ₹ 160.25 ಕೋಟಿ ಮೊತ್ತದ ವೈದ್ಯಕೀಯ ಉಪಕರಣಗಳು, ತಪಾಸಣಾ ಕಿಟ್‌ಗಳನ್ನು ಯಾವುದೇ ಅನುಮೋದನೆ ಇಲ್ಲದೇ ಖರೀದಿಸಲಾಗಿದೆ

  •  ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆಗೆ ಅನಗತ್ಯವಾಗಿ ₹84.71 ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸಲಾಗಿದೆ. ಈ ಕಾಮಗಾರಿಗಳು ಪೂರ್ಣವಾಗಿಲ್ಲ

  •  ಪಿಎಂ.ಕೇರ್ಸ್‌ ನಿಧಿ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳಿಗೆ ನಿಧಿಯಿಂದ ಹಣ ಬಿಡುಗಡೆಯಾಗಿದೆ. ಹೀಗಿದ್ದೂ ಆರೋಗ್ಯ ಇಲಾಖೆಯಿಂದ ₹12 ಕೋಟಿ ಅಕ್ರಮವಾಗಿ ಬಿಡುಗಡೆ ಮಾಡಲಾಗಿದೆ

  • 17.28 ಲಕ್ಷ ಡೋಸ್‌ಗಳಷ್ಟು ಕೋವಿಡ್‌ ತಡೆ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆಯ ಲಸಿಕಾ ಕೇಂದ್ರಗಳಿಂದ ಕಾಣೆಯಾಗಿವೆ

  • ಸುಮಾರು ₹1,000 ಬೆಲೆಯ ಇನ್‌ಫ್ರಾರೆಡ್‌ ಥರ್ಮಾಮೀಟರ್‌ಗಳಿಗೆ ತಲಾ ₹15,000 ಪಾವತಿಸಲಾಗಿದೆ

  • 15.82 ಲಕ್ಷ ಅವಧಿ ಮುಗಿದ ಆರ್‌ಟಿ–ಪಿಸಿಆರ್‌ ಕಿಟ್‌ಗಳನ್ನು ₹3.11 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ

  • ಕಿದ್ವಾಯಿ ಸಂಸ್ಥೆಯಲ್ಲಿ ಕಾರ್ಯದೊತ್ತಡದ ಕಾರಣ ಖಾಸಗಿ ಸಂಸ್ಥೆಗಳಿಗೆ ಸೋಂಕು ತಪಾಸಣೆಗೆ ಮಾದರಿಗಳು ಮತ್ತು ಚಿಕಿತ್ಸೆಗೆ ರೋಗಿಗಳನ್ನು ಕಳುಹಿಸಲಾಗಿದೆ. ಇದರಲ್ಲೇ ₹264.35 ಕೊಟಿಯಷ್ಟು ಅಕ್ರಮ ನಡೆದಿದೆ ಎಂದು ಸಂಸ್ಥೆಯೇ ವರದಿ ನೀಡಿದೆ

ನ್ಯಾಯಮೂರ್ತಿ ಡಿಕುನ್ಹಾ ಆಯೋಗ

2023ರ ಆಗಸ್ಟ್ 25ರಂದು ನ್ಯಾ. ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಆಯೋಗ ರಚನೆ

2024ರ ಆಗಸ್ಟ್ 31ರಂದು ಮಧ್ಯಂತರ ವರದಿ

11 ಸಂಪುಟಗಳಲ್ಲಿತ್ತು ತನಿಖೆಯ ಸಾರ

55 ಸಾವಿರ ಕಡತಗಳ ಪರಿಶೀಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.