ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯ ನಡೆಸಿ, ಭಾರಿ ಅನಾಹುತ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರ, ಸುಲ್ತಾನ್‌ಪಾಳ್ಯ, ಡಿ.ಜೆ.ಹಳ್ಳಿ, ಕೊಡಿಗೆಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಸ್, ಸೈಯದ್ ಮುದಾಸೀರ್ ಪಾಷಾ, ಮಹಮದ್ ಫೈಸಲ್, ಮಹಮದ್ ಉಮರ್ ಎಂಬ ಶಂಕಿತರನ್ನು ಬಂಧಿಸಿದ್ದಾರೆ.
ಸುಲ್ತಾನ್ ಪಾಳ್ಯದ ಪ್ರಾರ್ಥನಾ ಸ್ಥಳ ಮತ್ತು ಆರ್.ಟಿ. ನಗರದ ಕನಕ ಬಡಾವಣೆಯ ಸೈಯದ್ ಸುಹೇಲ್ ಬಾಡಿಗೆ ಮನೆಯಲ್ಲಿ ಸಭೆ ಸೇರಿ ಉಗ್ರ ಚಟುವಟಿಕೆ ಹಾಗೂ ಸ್ಫೋಟ ನಡೆಸುವುದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಚರ್ಚೆ ನಡೆಸುತ್ತಿದ್ದರು. ಈ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಕೇಂದ್ರ ಗುಪ್ತಚರ ಇಲಾಖೆ ಸಂಪರ್ಕಿಸಿದ್ದರು. ಎರಡೂ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಂಗಳವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದರು.
ಶಂಕಿತರಿಂದ 7 ನಾಡ ಬಂದೂಕು, 45 ಗುಂಡುಗಳು, ಸ್ಯಾಟಲೈಟ್ ಮಾದರಿಯ ವಾಕಿಟಾಕಿಗಳು, 12 ಮೊಬೈಲ್, ಡ್ರಾಗರ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
‘ಐವರೂ 35 ವರ್ಷದ ಒಳಗಿನವರೇ ಆಗಿದ್ದು, ಚಾಲಕ ಹಾಗೂ ಮೆಕ್ಯಾನಿಕಲ್ ವೃತ್ತಿಯಲ್ಲಿ ತೊಡಗಿದ್ದರು. ಪ್ರಕರಣದ ಸೂತ್ರಧಾರ ಜುನೈದ್ ಅಹಮದ್ ದುಬೈಗೆ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಿ ಕರೆತರಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ.
ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿ, ಅಪರಾಧದ ಒಳಸಂಚು, ಶಸ್ತ್ರಾಸ್ರ ಕಾಯ್ದೆ ಅಡಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಉದ್ಯಮದ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಾಪಾರಿ ನೂರ್ ಅಹಮದ್ ಹಾಗೂ ಜುನೈದ್ ಅಹಮದ್ ಗುಂಪಿನ ನಡುವೆ ವೈಷಮ್ಯ ಬೆಳೆದಿತ್ತು. ನೂರ್ ಅಹಮದ್‌ರನ್ನು ಅಪಹರಿಸಿ, ಹೊಸಕೋಟೆ ಬಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜುನೈದ್ ಸೇರಿದಂತೆ 21 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಕರಣದ ಪ್ರಮುಖ ಆರೋಪಿ ಟಿ.ನಜೀರ್, ಅದೇ ಜೈಲಿನಲ್ಲಿದ್ದ. ಆತನ ಸಂಪರ್ಕಕ್ಕೆ ಈ ಶಂಕಿತರು ಬಂದಿದ್ದರು. 18 ತಿಂಗಳ ಬಳಿಕ ಆರೋಪಿಗಳು ಬಿಡುಗಡೆಯಾಗಿದ್ದರು’ ಎಂದು ಕಮಿಷನರ್ ತಿಳಿಸಿದರು.
‘ಜಾಮೀನನ ಮೇಲೆ ಬಿಡುಗಡೆ ನಂತರವೂ ಜುನೈದ್ ವಿರುದ್ಧ ರಕ್ತಚಂದನ ಕಳವು, ದರೋಡೆ ಪ್ರಕರಣಗಳು ದಾಖಲಾಗಿದ್ದವು. ಮತ್ತೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ದುಬೈಗೆ ಪರಾರಿಯಾಗಿದ್ದ. ಅಲ್ಲಿಂದಲೇ ಇವರಿಗೆ ಕರೆ ಮಾಡಿ ವಿಧ್ವಂಸಕ ಕೃತ್ಯ ಎಸಗುವಂತೆ ಪ್ರೇರಣೆ ನೀಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
ಶಂಕಿತರನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಎಸಿಪಿ ಕುಮಾರ್ ನೇತೃತ್ವದ ತಂಡವು ಎನ್‌ಐಎ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಹೆಚ್ಚಿನ ತನಿಖೆಗೆ ಸಿಸಿಬಿ ಪೊಲೀಸರು 7 ದಿನ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಲಾಗುವುದು, ಶಂಕಿತರು ಭೇಟಿ ನೀಡಿರುವ ಸ್ಥಳಗಳನ್ನು ಪತ್ತೆ ಹಚ್ಚಲಾಗುವುದು, ಯಾರನ್ನಾದರೂ ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದರೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಕಮಿಷನರ್ ಶ್ಲಾಘನೆ: ‘ಸಕಾಲದಲ್ಲಿ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ಶಂಕಿತರನ್ನು ಬಂಧಿಸಿದ್ದರಿಂದ ಸಂಭವನೀಯ ದುಷ್ಕೃತ್ಯ ತಪ್ಪಿದೆ. ಶಂಕಿತರು ಯಾವ ನಿಷೇಧಿತ ಭಯೋತ್ಪಾದನಾ ಸಂಘಟನೆಗೆ ಸೇರಿದ್ದಾರೆ ಎಂಬುದು ವಿಸ್ತೃತ ತನಿಖೆಯಿಂದ ಗೊತ್ತಾಗಬೇಕಿದೆ. ಸಿಸಿಬಿ ಪೊಲೀಸರ ಕಾರ್ಯ ಶ್ಲಾಘನೀಯ’ ಎಂದು ದಯಾನಂದ್ ಹೇಳಿದರು.
ಮಾಸ್ಟರ್ ಮೈಂಡ್ ಜುನೈದ್ ಯಾರು, ಎಲ್ಲಿದ್ದಾನೆ?
* ಉದ್ಯಮದ ವೈಷಮ್ಯಕ್ಕೆ ನೂರ್ ಅಹಮದ್ ಕೊಲೆ ಮಾಡಿದ್ದ ಪ್ರಮುಖ ಆರೋಪಿ ಜುನೈದ್.
* ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ನಜೀರ್ ಜೊತೆಗೆ ಜುನೈದ್‌ಗೆ ಸಂಪರ್ಕ.
* 2020ರಲ್ಲಿ ಕೆಂಪು ಮರಳು ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನ.
* 2021ರಲ್ಲಿ ಡಕಾಯಿತಿ ಪ್ರಕರಣದಲ್ಲಿ ಸೆರೆ.
* ಸದ್ಯ ದುಬೈನಲ್ಲಿ ತಲೆಮರೆಸಿ ಕೊಂಡಿರುವ ಶಂಕಿತ. ಅಲ್ಲಿಂದಲೇ ಕುಳಿತು ಸಂಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.