ಬೆಂಗಳೂರು: ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಕರ್ನಾಟಕದ ಭಕ್ತರ ಅನುಕೂಲಕ್ಕೆ ನಿರ್ಮಿಸಲಾಗಿದ್ದ ಛತ್ರಕ್ಕಾಗಿ 44 ವರ್ಷಗಳ ಹಿಂದೆ ನೀಡಿದ್ದ ಜಮೀನಿನ ಗುತ್ತಿಗೆ ನವೀಕರಣವಾಗದೇ 15 ವರ್ಷಗಳು ಕಳೆದಿವೆ. ಈ ಜಮೀನಿನ ಮೇಲೆ ರಿಯಲ್ ಎಸ್ಟೇಟ್‌ನವರ ಕಣ್ಣು ಬಿದ್ದಿದ್ದು, ಜಮೀನು ಕೈ ತಪ್ಪುವ ಸಾಧ್ಯತೆಯಿದೆ.
ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕರ್ನಾಟಕದಿಂದ ಬರುವ ಭಕ್ತರಿಗಾಗಿ ಛತ್ರ ನಿರ್ಮಿಸಲು 1969ರಲ್ಲಿ ಆಂಧ್ರ ಪ್ರದೇಶವು 4 ಎಕರೆ 13 ಗುಂಟೆ ಜಮೀನನ್ನು ಅಲ್ಲಿನ ಸರ್ಕಾರವು ಗುತ್ತಿಗೆ ಆಧಾರದಲ್ಲಿ 16 ವರ್ಷಗಳ ಅವಧಿಗೆ ಮಂಜೂರು ಮಾಡಿತ್ತು. ಕರ್ನಾಟಕ ಸರ್ಕಾರವು ಅಲ್ಲಿ 24 ಕೊಠಡಿಗಳ ಕಟ್ಟಡವನ್ನು ನಿರ್ಮಿಸಿತ್ತು. 1986, 1997ರಲ್ಲಿ ನವೀಕರಣವಾಗಿತ್ತು. 1997ರಲ್ಲಿ ನವೀಕರಣ ಮಾಡುವಾಗ ₹ 5000 ಇದ್ದ ನೆಲಬಾಡಿಗೆಯನ್ನು ₹ 6,500ಕ್ಕೆ ಏರಿಸಲಾಗಿತ್ತು. ಈ ನವೀಕರಣದ ಅವಧಿ 2008ಕ್ಕೆ ಮುಗಿದಿದೆ. ಆನಂತರ ನವೀಕರಣಗೊಂಡಿಲ್ಲ. ಅಲ್ಲಿಂದ ಇಲ್ಲಿವರೆಗೆ ಆಡಳಿತ ನಡೆಸಿದ ಕರ್ನಾಟಕದ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಭಕ್ತರು ದೂರಿದ್ದಾರೆ.
44 ವರ್ಷಗಳ ಹಿಂದೆ ಈ ಜಮೀನು ಮಂಜೂರು ಮಾಡುವಾಗ ಆ ಜಮೀನು ಆಯಕಟ್ಟಿಗಿಂತ ಹೊರಗೆ ಇತ್ತು. ಈಗ ನಗರ ಬೆಳೆದಿದ್ದು, ದೇವಸ್ಥಾನದ ಸುತ್ತಲ ಪ್ರದೇಶಗಳೆಲ್ಲ ವಾಣಿಜ್ಯ ಕಟ್ಟಡಗಳಿಂದ ತುಂಬಿ ಹೋಗಿವೆ. ದೇವಸ್ಥಾನದ ಸಮೀಪ ಇರುವ ಈ ಸ್ಥಳಕ್ಕೂ ಪ್ರಾಮುಖ್ಯ ಬಂದಿದೆ.
‘ಈ ಗುತ್ತಿಗೆ ನವೀಕರಣವಾಗಿಲ್ಲ. ಶೀಘ್ರ ನವೀಕರಿಸಲು ಆಂಧ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ಆ ಅವಧಿಯಲ್ಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ, ನವೀಕರಣ ಆಗಿಲ್ಲ. ಬಸವರಾಜ ಬೊಮ್ಮಾಯಿಯವರು ಮಂಡಿಸಿದ್ದ 2022–23ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕ ಛತ್ರ ಪುನರ್‌ನಿರ್ಮಾಣಕ್ಕಾಗಿ ₹ 85 ಕೋಟಿ ಅನುದಾನ ನೀಡಿದ್ದರು. ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿತ್ತು. ಇಲ್ಲಿವರೆಗೆ ಕಟ್ಟೆಡ ಕಾಮಗಾರಿ ನಡೆದಿಲ್ಲ’ ಎಂದು ಶ್ರೀಶೈಲದ ಭಕ್ತ, ಲಿಂಗಸಗೂರು ಸಮರ್ಥ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ ಶರಣಪ್ಪ ಮೇಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಲ್ಲಿಂದ 1 ಕಿಲೋಮೀಟರ್ ದೂರದಲ್ಲಿ ಇಲ್ಲವೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ಜಮೀನು ಒದಗಿಸುತ್ತೇವೆ. ಅಲ್ಲಿ ಛತ್ರ ನಿರ್ಮಿಸಿ ಎಂದು ಆಂಧ್ರ ಸರ್ಕಾರದ ಈಗ ಅಧಿಕಾರಿಗಳು ಹೇಳುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರವು ಆಂಧ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಿ ಈ ಜಮೀನು ಉಳಿಸಿಕೊಳ್ಳಬೇಕು. ಇಲ್ಲಿರುವ ಶಿಥಿಲ ಕಟ್ಟಡ ತೆಗೆದು ಹೊಸ ಕಟ್ಟಡ ನಿರ್ಮಿಸಬೇಕು. ಎಲ್ಲೋ ದೂರದಲ್ಲಿ ಛತ್ರ ನಿರ್ಮಿಸಿದರೆ ಶ್ರೀಶೈಲದ ಭಕ್ತರಿಗೆ ಉಪಯೋಗವಾಗುವುದಿಲ್ಲ’ ಎಂದು ವಿವರಿಸಿದರು.
‘ಬೆಂಗಳೂರಿನಿಂದ ಶ್ರೀಶೈಲಕ್ಕೆ ಹೋಗುವ ಭಕ್ತರ ಪ್ರಮಾಣ ಕಡಿಮೆ. ಉತ್ತರ ಕರ್ನಾಟಕದ ಭಕ್ತರ ಸಂಖ್ಯೆ ಹೆಚ್ಚು. ರಾಜ್ಯದಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದು, ಜಾತ್ರೆಯ ಸಂದರ್ಭದಲ್ಲಿ 2–3 ಲಕ್ಷ ಜನರು ಹೋಗುತ್ತಾರೆ. ಭಕ್ತರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದರು.
ಈಗಾಗಲೇ ಈ ಜಾಗದ ಒತ್ತುವರಿ ಆಗುತ್ತಿದೆ. ನಿರ್ಲಕ್ಷಿಸಿದರೆ ಜಮೀನು ಬೇರೆಯವರ ಪಾಲಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಂಧ್ರದ ಮುಖ್ಯಮಂತ್ರಿ ಜೊತೆಗೆ ಮಾತುಕತೆ ನಡೆಸಿ ಛತ್ರದ ಜಾಗವನ್ನು ಉಳಿಸಿಕೊಳ್ಳಬೇಕುಶರಣಪ್ಪ ಮೇಟಿ ಲಿಂಗಸುಗೂರು ಸಮರ್ಥ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ
‘ಆ.6ಕ್ಕೆ ಮುಜರಾಯಿ ಆಯುಕ್ತರು ಶ್ರೀಶೈಲಕ್ಕೆ’ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕರ್ನಾಟಕ ಛತ್ರಕ್ಕಾಗಿ ನೀಡಿರುವ ಜಮೀನಿಗೆ ಸಂಬಂಧಿಸಿದ ವಿವಾದ ಏನು ಎಂಬುದನ್ನು ತಿಳಿಯಲು ಮುಜರಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಅವರೇ ಆ.6ಕ್ಕೆ ಶ್ರೀಶೈಲಕ್ಕೆ ತೆರಳಲಿದ್ದಾರೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಅವರು ಅಲ್ಲಿನ ಸ್ಥಿತಿಗತಿ ತಿಳಿದುಕೊಂಡು ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಗೂ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.