ಬೆಂಗಳೂರು: ಕೋವಿಡ್ -19 ವಾರ್ ರೂಂಗಳಿಗೆ ಭೇಟಿ ನೀಡಿದ ಮುಖ್ಯಮಮತ್ರಿ ಯಡಿಯೂರಪ್ಪ, ಗುಣಮುಖರಾಗಿಯೂ ಸಹ 20-30 ದಿನಗಳವರೆಗೆ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗದೇ ಹಾಸಿಗೆಗಳನ್ನು ಆಕ್ರಮಿಸಿಕೊಂಡಿರುವ 800 ಕ್ಕೂ ಹೆಚ್ಚು ರೋಗಿಗಳನ್ನು ಮನೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾಗಡಿ ರಸ್ತೆಯ ಆರೋಗ್ಯ ಸೌಧ ಮತ್ತು ಮಲ್ಲೇಶ್ವರಂನ ಕೋವಿಡ್ ವಾರ್ ರೂಂಗಳಿಗೆ ಭೇಟಿ ಕೊಟ್ಟ ಅವರು, ‘ಬೆಂಗಳೂರಿನ ಆಸ್ಪತ್ರೆಗಳಲ್ಲಿ 12,299 ಹಾಸಿಗೆಗಳಿವೆ. ಇದರಲ್ಲಿ 1–10 ದಿನಗಳವರೆಗೆ ಚಿಕತ್ಸೆ ಪಡೆಯುತ್ತಿರುವ 6,500 ರೋಗಿಗಳು, 1–20 ದಿನಗಳವರೆಗೆ ಚಿಕಿತ್ಸೆ ಪಡೆಯುತ್ತಿರುವ 1900 ರೋಗಿಗಳು ಮತ್ತು 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ 503 ರೋಗಿಗಳು, 30 ದಿನಗಳಿಂದ ಇರುವ 337 ರೋಗಿಗಳು ಇದ್ದಾರೆ’ ಎಂದು ಮಾಹಿತಿ ನೀಡಿದರು. 20–30 ದಿನಗಳಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಆಕ್ರಮಿಸಿಕೊಂಡಿರುವ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
.
'ವೈದ್ಯರ ಸಲಹೆಯ ಹೊರತಾಗಿಯೂ, 20–30 ದಿನ ಕಳೆದರೂ 800 ಮಂದಿ ಆಸ್ಪತ್ರೆಯಲ್ಲಿಯೇ ಇದ್ದಾರೆ. ಗಂಭೀರ ಸ್ಥಿಯಲ್ಲಿರುವ ರೋಗಿಗಳಿಗೆ ಹಾಸಿಗೆ ಕಲ್ಪಿಸಬೇಕಿರುವುದರಿಂದ ಅವರನ್ನು ಮನೆಗೆ ಕಳುಹಿಸಿ ಅಲ್ಲಿಯೇ ಔಷಧ ಪಡೆದು ಆರೋಗ್ಯ ನಿರ್ವಹಣೆಗೆ ತಿಳಿಸಬೇಕು. ನಮ್ಮ ಬಳಿ ಈಗ ಸರಿಯಾದ ಅಂಕಿಅಂಶಗಳಿವೆ. ಹೀಗಾಗಿ, ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿಯಂತ್ರಿಸಬಹುದು,’ ಎಂದು ಅವರು ಹೇಳಿದರು.
ರಾಜ್ಯ ಕೋವಿಡ್ ವಾರ್ ರೂಂ ದೇಶದಲ್ಲೇ ಮಾದರಿಯಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಕೋವಿಡ್ ವಾರ್ ರೂಮ್ ದೇಶದ ಯಾವುದೇ ಭಾಗದಲ್ಲೂ ಇಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.