ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಇಲ್ಲಿ ಭೇಟಿಯಾಗಿ ಕರ್ನಾಟಕದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ ₹18,177 ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಎನ್‌ಡಿಆರ್‌ಎಫ್‌ನಿಂದ ₹4,663.12 ಕೋಟಿ ಇನ್‌ಪುಟ್ ಸಬ್ಸಿಡಿ, ₹12,577.86 ಕೋಟಿ ತುರ್ತು ಪರಿಹಾರ, ಕುಡಿಯುವ ನೀರಿಗಾಗಿ ₹566.78 ಕೋಟಿ ಹಾಗೂ ಜಾನುವಾರುಗಳ ಸಂರಕ್ಷಣೆಗಾಗಿ ₹363.68 ಕೋಟಿ ಒದಗಿಸುವಂತೆ ಕೋರಿದರು.
‘ರೈತರಿಗೆ ಇನ್‌ಪುಟ್ ಸಬ್ಸಿಡಿ ನೀಡಲು 2015-16ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶ ಪರಿಗಣಿಸಬೇಕು’ ಎಂದೂ ಅವರು ಮನವಿ ಮಾಡಿದರು.
‘ಬರ ಪರಿಹಾರಕ್ಕಾಗಿ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ಸೆಪ್ಟೆಂಬರ್ 22ರಂದು ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್ ತಿಂಗಳಲ್ಲಿ ಅಧ್ಯಯನ ನಡೆಸಿ
ವರದಿ ಸಲ್ಲಿಸಿತ್ತು. ಆ ಬಳಿಕ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು’ ಎಂದಿದ್ದಾರೆ.
‘ಎನ್‌ಡಿಆರ್‌ಎಫ್ ಅಡಿ ₹17,901 ಕೋಟಿ ಪರಿಹಾರ ನೀಡುವಂತೆ ಅಕ್ಟೋಬರ್‌ನಲ್ಲಿ ಕೃಷಿ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ನವೆಂಬರ್ 4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಹೀಗಾಗಿ, ₹18,177 ಕೋಟಿ ಪರಿಹಾರ ನೀಡಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಿದ್ದರಾಮಯ್ಯ, ‘ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸಭೆಯನ್ನು ತುರ್ತಾಗಿ ನಡೆಸುವಂತೆ ಮನವಿ ಮಾಡಿದ್ದೇವೆ. ನಮ್ಮ ಅಹವಾಲನ್ನು ಸಮಾಧಾನದಿಂದ ಕೇಳಿದ ಪ್ರಧಾನಿಯವರು ಈ ವಿಷಯವನ್ನು ಶಾ ಅವರಿಗೆ ಕೂಡಲೇ ತಿಳಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.
‘ಬರ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ದಿನಗಳನ್ನು 150 ದಿನಗಳಿಗೆ ಹೆಚ್ಚಿಸುವಂತೆ ಮನವಿ ಮಾಡಲಾಗಿದೆ’ ಎಂದರು.
‘ಜಾತಿ ಗಣತಿಗೆ ಬದ್ಧ’: ‘ದೇಶದಾದ್ಯಂತ ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರವನ್ನು ಒತ್ತಾಯಿ ಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆ. ಅದನ್ನು ಅನುಸರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ’ ಎಂದು ಸಿದ್ದರಾಮಯ್ಯ ಅವರು ಹೇಳಿದರು.
‘ಈ ವಿಚಾರದಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ. ವರದಿಯನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಬೇಕಿದೆ. ಊಹಾಪೋಹದ ಆಧಾರದಲ್ಲಿ ಕೆಲವು ಸಮುದಾಯದವರು ವಿರೋಧ ಮಾಡುತ್ತಿದ್ದಾರೆ’ ಎಂದರು.
‘ಭದ್ರಾ ಮೇಲ್ಡಂಡೆ: ಹಣ ನೀಡದ ಕೇಂದ್ರ’
‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ₹5,300 ಕೋಟಿ ಘೋಷಿಸಿದ್ದರು. ಈ ಘೋಷಣೆ ಆಧಾರದಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ₹5,300 ಕೋಟಿ ನೀಡುವುದಾಗಿ ಪ್ರಕಟಿಸಿದ್ದರು. ಇವತ್ತಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಈ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದೇವೆ’ ಎಂದು ಸಿದ್ದರಾಮಯ್ಯ ಹೇಳಿದರು.
‘ಮಹದಾಯಿ ಯೋಜನೆಗೆ ಗೆಜೆಟ್ ಅಧಿಸೂಚನೆ ಆಗಿದ್ದು, ಟೆಂಡರ್ ಕರೆಯಲಾಗಿದೆ. ಆದರೆ, ಈ ತನಕ ಪರಿಸರ ಅನುಮೋದನೆ ಸಿಕ್ಕಿಲ್ಲ. ಕೂಡಲೇ ಪರಿಸರ ಅನುಮೋದನೆ ಕೊಡಿಸುವಂತೆ ಮನವಿ ಮಾಡಿದ್ದೇವೆ’ ಎಂದರು.
ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ಕೋರಿದ್ದೇವೆ. ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳಿಗಾಗಿ ಸರ್ವ ಪಕ್ಷ ನಿಯೋಗದ ಜತೆ ಕೇಂದ್ರಕ್ಕೆ ಬರಲು ಸಿದ್ದರಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.