ADVERTISEMENT

ಚಿಟ್‌ ಫಂಡ್‌ ವ್ಯವಹಾರಕ್ಕೂ ಆನ್‌ಲೈನ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 22:45 IST
Last Updated 27 ಆಗಸ್ಟ್ 2021, 22:45 IST
ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. (ಎಡದಿಂದ) ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆಯ (ಎಫ್‌ಕೆಸಿಸಿಐ) ನಿಯೋಜಿತ ಅಧ್ಯಕ್ಷ ಐ.ಎಸ್‌.ಪ್ರಸಾದ್‌, ರಾಜ್ಯ ಸಹಕಾರ ಸಂಘಗಳ ನಿಬಂಧಕ ಜಿಯಾ ಉಲ್ಲಾ, ಕರ್ನಾಟಕ ಚಿಟ್ ಅಸೋಸಿಯೇಷನ್‌ ಅಧ್ಯಕ್ಷ ಬಸವಲಿಂಗಪ್ಪ ಶಾಂತಗೇರಿ ಹಾಗೂ ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ.ಸುಂದರ್‌ ಇದ್ದರು. 
ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. (ಎಡದಿಂದ) ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆಯ (ಎಫ್‌ಕೆಸಿಸಿಐ) ನಿಯೋಜಿತ ಅಧ್ಯಕ್ಷ ಐ.ಎಸ್‌.ಪ್ರಸಾದ್‌, ರಾಜ್ಯ ಸಹಕಾರ ಸಂಘಗಳ ನಿಬಂಧಕ ಜಿಯಾ ಉಲ್ಲಾ, ಕರ್ನಾಟಕ ಚಿಟ್ ಅಸೋಸಿಯೇಷನ್‌ ಅಧ್ಯಕ್ಷ ಬಸವಲಿಂಗಪ್ಪ ಶಾಂತಗೇರಿ ಹಾಗೂ ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ.ಸುಂದರ್‌ ಇದ್ದರು.    

ಬೆಂಗಳೂರು: ‘ಚಿಟ್‌ ಫಂಡ್‌ ವ್ಯವಹಾರದಲ್ಲೂ ಆನ್‌ಲೈನ್‌ ವ್ಯವಸ್ಥೆ ತರಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರೂ ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ ಮೂಲವೇ ಶುಲ್ಕವನ್ನೂ ಪಾವತಿಸಬಹುದು. ಈ ಸಂಬಂಧ ಸರ್ಕಾರದಿಂದಲೇ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕ ಜಿಯಾ ಉಲ್ಲಾ ತಿಳಿಸಿದರು.

ಚೀಟಿ ಉದ್ಯಮದಿಂದ ಸಾರ್ವಜನಿಕರಿಗೆ ಆಗುತ್ತಿರುವ ನಷ್ಟ ಹಾಗೂ ಮೋಸದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕರ್ನಾಟಕ ಚಿಟ್ ಅಸೋಸಿಯೇಷನ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 1,567 ಚಿಟ್‌ ಫಂಡ್‌ ಸಂಸ್ಥೆಗಳು ನೋಂದಣಿಯಾಗಿವೆ. ಈ ಸಂಸ್ಥೆಗಳು ಶುಲ್ಕದ ರೂಪದಲ್ಲಿ ಒಟ್ಟು ₹1,790 ಕೋಟಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸುತ್ತಿವೆ. ಅನಧಿಕೃತವಾಗಿ ಚೀಟಿ ನಡೆಸುವವರ ಸಂಖ್ಯೆಯೂ ಹೆಚ್ಚಿದೆ. ಅವರೂ ನೋಂದಣಿ ಮಾಡಿಕೊಂಡರೆ ಅನುಕೂಲವಾಗುತ್ತದೆ. ಒಂದಿಬ್ಬರು ಮೋಸ ಮಾಡುವುದರಿಂದ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ’ ಎಂದರು.

ADVERTISEMENT

‘ಆನ್‌ಲೈನ್‌ ವ್ಯವಸ್ಥೆಗೆ ಆರಂಭದಲ್ಲಿ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗುವುದು ಸಹಜ. ಕ್ರಮೇಣ ಅದಕ್ಕೆ ಹೊಂದಿಕೊಳ್ಳುತ್ತಾರೆ. ರಾಜ್ಯದಲ್ಲಿ ಎಲ್ಲಾ ಇಲಾಖೆಗಳು ಈಗ ಆನ್‌ಲೈನ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧ. ನಮ್ಮ ಅಧೀನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಯಾವೆಲ್ಲಾ ರೀತಿಯಲ್ಲಿ ಕಿರುಕುಳ ಉಂಟಾಗುತ್ತಿದೆ ಎಂಬುದರ ಅರಿವಿದೆ. ಅದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಕೋವಿಡ್ ನಂತರ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲೇ ಚೀಟಿ ವ್ಯವಹಾರ ನಡೆಸಬೇಕು’ ಎಂದು ಕರ್ನಾಟಕ ಚಿಟ್‌ ಅಸೋಸಿಯೇಷನ್‌ ಅಧ್ಯಕ್ಷ ಬಸವಲಿಂಗಪ್ಪ ಶಾಂತಗೇರಿ ಹೇಳಿದರು.

‘ಅನಧಿಕೃತ ಕಂಪನಿಗಳನ್ನು ಕಾನೂನಿನ ಅಡಿಯಲ್ಲಿ ತರುವ ಕೆಲಸ ಆಗಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಆದಾಯ ಬರುತ್ತದೆ. ಆನ್‌ಲೈನ್‌ ವ್ಯವಸ್ಥೆ ಮಾಡುವುದು ಸ್ವಾಗತಾರ್ಹ ಕ್ರಮ. ಇದರಿಂದ ವ್ಯವಹಾರದಲ್ಲಿ ಪಾರದರ್ಶಕತೆ ತರಬಹುದು. ಪ್ರತಿಯೊಂದು ಕಾರ್ಯಕ್ಕೆ ನಾವು ಇಲಾಖೆಗೆ ಅಲೆಯುವುದೂ ತಪ್ಪುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.