ADVERTISEMENT

ಸಿನಿ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಅಧಿನಿಯಮಕ್ಕೆ ರಾಜ್ಯಪಾಲರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:52 IST
Last Updated 24 ಸೆಪ್ಟೆಂಬರ್ 2024, 15:52 IST
<div class="paragraphs"><p>ರಾಜ್ಯಪಾಲ ಥಾವರ ಚಂದ್ ಗೆಹಲೋತ್‌</p></div>

ರಾಜ್ಯಪಾಲ ಥಾವರ ಚಂದ್ ಗೆಹಲೋತ್‌

   

ಬೆಂಗಳೂರು: ಕರ್ನಾಟಕ ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ‘ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮ– 2024’ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವುದಕ್ಕಾಗಿ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಲಾಗುವುದು. ಇವರಿಗೆ ನೆರವಾಗುವ ಉದ್ದೇಶದಿಂದ ಸಿನಿಮಾ ಟಿಕೆಟ್‌ಗಳು, ವಂತಿಗೆ ಶುಲ್ಕಗಳು ಮತ್ತು ಸಂಬಂಧಿತ ಸಂಸ್ಥೆಗಳಿಂದ ಸೃಜಿಸಲಾದ ಎಲ್ಲ ಆದಾಯದ ಮೇಲೆ ಶೇ 2 ಮೀರದಂತೆ ಉಪಕರ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಸಂಬಂಧಿತ ಸಂಸ್ಥೆಗಳು ಎಂದರೆ, ಏಕಪರದೆ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳು, ಚಿತ್ರಮಂದಿರಯೇತರ (ಒಟಿಟಿ), ದೂರದರ್ಶನ ವಾಹಿನಿಗಳು ಮತ್ತು ಸರ್ಕಾರವು ಕಾಲ ಕಾಲಕ್ಕೆ ಅಧಿಸೂಚಿಸುವ ಯಾವುದೇ ಸಂಸ್ಥೆಗಳು. ಇವುಗಳಿಂದ ಉಪಕರ ಸಂಗ್ರಹಿಸಲಾಗುವುದು ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಎಂದರೆ, ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಕಲಾವಿದ (ನಟ, ಸಂಗೀತಗಾರ ಅಥವಾ ನೃತ್ಯಪಟು ಒಳಗೊಂಡ) ಅಥವಾ ಯಾವುದೇ ಕೆಲಸ, ಕೌಶಲಯುಕ್ತ, ಕೌಶಲರಹಿತ, ಭೌತಿಕ, ಮೇಲ್ವಿಚಾರಣೆ, ತಾಂತ್ರಿಕ, ಕಲಾತ್ಮಕ ಅಥವಾ ಇತರ ಕಾರ್ಯಗಳಲ್ಲಿ ತೊಡಗಿಕೊಂಡ ವ್ಯಕ್ತಿ ಮತ್ತು ಅವರ ಕುಟುಂಬದವರಿಗೆ (ಪತ್ನಿ ಅಥವಾ ಪತಿ, ಅಪ್ರಾಪ್ತ ಗಂಡು ಮಕ್ಕಳು, ಅವಿವಾಹಿತ ಹೆಣ್ಣು ಮಕ್ಕಳು, ತಂದೆ, ತಾಯಿ, ಸಂಪೂರ್ಣ ಅವಲಂಬಿತ ಮಾನಸಿಕ ಅಸ್ವಸ್ಥ ಅಥವಾ ಅಂಗವಿಕಲರು) ಸಾಮಾಜಿಕ ಭದ್ರತೆ ನೀಡಲಾಗುವುದು. ಇದಕ್ಕಾಗಿ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುವುದು.

ಈ ಯೋಜನೆಯಡಿ ನೋಂದಾಯಿಸಿಕೊಳ್ಳುವ ಅಸಂಘಟಿತ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಜೀವ ವಿಮೆ, ಅಪಘಾತ ಪರಿಹಾರ, ಹೆರಿಗೆ ಭತ್ಯೆ, ಶವ ಸಂಸ್ಕಾರ ವೆಚ್ಚ ನೀಡಲಾಗುವುದು. ಅಲ್ಲದೇ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ನೀಡಲು ಉದ್ದೇಶಿಸಲಾಗಿದೆ. ಈ ಕಾಯ್ದೆ ಜಾರಿ ಬಂದ ಬಳಿಕ ಸಿನಿಮಾ ಟಿಕೆಟ್‌ ದರ ಹೆಚ್ಚಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.