ADVERTISEMENT

ಮಕ್ಕಳಲ್ಲಿ ತಾರ್ಕಿಕ ಚಿಂತನೆ ಬೆಳೆಸಬೇಕು: ಬಸವರಾಜ ಬೊಮ್ಮಾಯಿ

ಡಾ.ರಾಜ್‌ಕುಮಾರ್‌ ಕಲಿಕಾ ಆ್ಯಪ್‌ ಬಿಡುಗಡೆಗೊಳಿಸಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 20:44 IST
Last Updated 16 ಆಗಸ್ಟ್ 2021, 20:44 IST
ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್‌ಕುಮಾರ್ ಕುರಿತಾದ ಪುಸ್ತಕ ನೀಡಿ ಗೌರವಿಸಿದರು. ಪುನೀತ್ ರಾಜ್‌ಕುಮಾರ್ ಇದ್ದಾರೆ -ಪ್ರಜಾವಾಣಿ ಚಿತ್ರ
ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್‌ಕುಮಾರ್ ಕುರಿತಾದ ಪುಸ್ತಕ ನೀಡಿ ಗೌರವಿಸಿದರು. ಪುನೀತ್ ರಾಜ್‌ಕುಮಾರ್ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಕ್ಕಳಿಗೆ ಬೋಧನೆ ಮಾಡಿದರೆ ಪ್ರಯೋಜನವಿಲ್ಲ. ಅವರನ್ನು ಚಿಂತನೆಗೆ ಒಳಪಡಿಸಬೇಕು. ಆಗ ಕಲಿತದ್ದು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಸ್ಮರಣಶಕ್ತಿ ಹೆಚ್ಚುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್‌ಕುಮಾರ್‌ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್‌ ಕಲಿಕಾ ಆ್ಯಪ್‌ ಬಿಡುಗಡೆಗೊಳಿಸಿ ಮಾತನಾಡಿದರು.

‘ಯಾಕೆ, ಏನು, ಎಲ್ಲಿ, ಎಂತು, ಎಷ್ಟು? ಈ ಐದು ಮಂತ್ರಗಳನ್ನು ಇಟ್ಟುಕೊಂಡು ಮಕ್ಕಳಿಗೆ ಬೋಧನೆ ಮಾಡಬೇಕು. ಮಕ್ಕಳಲ್ಲಿ ತರ್ಕಬದ್ಧ ಚಿಂತನೆಯನ್ನು ಬೆಳೆಸಲು ಪ್ರಯತ್ನಿಸಬೇಕು. ಈ ಆ್ಯಪ್‌ ಮೂಲಕ ಇಡಿ ಭಾರತಕ್ಕೆ ಜ್ಞಾನ ಪಸರಿಸುವ ಕೆಲಸ ಆಗಲಿ’ ಎಂದು ಹಾರೈಸಿದರು.

ADVERTISEMENT

‘‍ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದಾರೆ. ಕಲಾ ವಿದ್ಯಾರ್ಥಿಗಳು, ವಿಜ್ಞಾನವನ್ನು ಅಭ್ಯಸಿಸುವ, ವಿಜ್ಞಾನದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಕಲಿಯುವ ಅವಕಾಶ ಈ ನೀತಿಯಲ್ಲಿದೆ. ಇದನ್ನು ಅಳವಡಿಸಿಕೊಂಡಿರುವ ಮೊದಲ ರಾಜ್ಯ ನಮ್ಮದು. ಈ ಆ್ಯಪ್‌ ನೂತನ ಶಿಕ್ಷಣ ನೀತಿಗೆ ಹೆಚ್ಚು ಉಪಯುಕ್ತವಾಗಲಿದೆ. ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ನಿಮಗಿರುತ್ತದೆ’ ಎಂದು ತಿಳಿಸಿದರು.

‘ಸರಸ್ವತಿಯ ವಾಹನ ಪರಮಹಂಸ. ಅಂತಹ ಪರಮಹಂಸವನ್ನು (ಆ್ಯಪ್‌) ನೀವು ಸೃಷ್ಟಿಮಾಡಿದ್ದೀರಿ. ಈ ಪರಮಹಂಸ ಮಾನಸ ಸರೋವರದಷ್ಟು ಎತ್ತರಕ್ಕೆ ಹೋಗಲಿ. ಮನಸ್ಸು ಮತ್ತು ಹೃದಯ ಪರಿಶುದ್ಧವಾಗಿರಬೇಕು. ಅಂತಹ ವಿದ್ಯಾರ್ಥಿಗಳೇ ಎತ್ತರದ ಸಾಧನೆ ಮಾಡಲು ಸಾಧ್ಯ. ಮಕ್ಕಳಲ್ಲಿ ನಾವು ಈ ಗುಣಗಳನ್ನೂ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

‘ರಾಜ್‌ಕುಮಾರ್‌ ಅವರು ಧ್ರುವತಾರೆ ಇದ್ದಂತೆ. ಅವರು ಸರಳತೆಯ ಪ್ರತಿರೂಪ. ಮಗುವಿನಂತಹ ಮನಸ್ಸುಳ್ಳವರಾಗಿದ್ದರು. ನಟನಾಗಿಯಷ್ಟೇ ಅಲ್ಲ, ಸಹೃದಯಿಯಾಗಿ ಅವರು ಜನರ ಮನಸ್ಸಿನಲ್ಲಿ ಶಾಶ್ವತ ನೆಲೆ ಕಂಡುಕೊಂಡಿದ್ದಾರೆ’ ಎಂದು ತಿಳಿಸಿದರು.

ನಟ ಪುನೀತ್‌ ರಾಜ್‌ಕುಮಾರ್‌ ,‘ಯುವರಾಜ್‌ಕುಮಾರ್‌ ಹಾಗೂ ಅವರ ತಂಡದವರು ಸೇರಿ ಈ ಆ್ಯಪ್‌ ಆರಂಭಿಸಿದ್ದಾರೆ. ಇದು ಎಲ್ಲರಿಗೂ ತಲುಪಲಿ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಲಿ. ಕೋವಿಡ್‌ ಪಿಡುಗು ಬೇಗನೆ ದೂರವಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳಲಿ’ ಎಂದರು.

‘ಶಿಕ್ಷಣದ ತೇರನ್ನು ಜೊತೆಯಾಗಿ ಎಳೆಯೋಣ’

‘ವಿದ್ಯೆಯೆಂಬುದು ಒಂದು ತೇರಾಗಿ ಬೆಳೆದಿದೆ. ಅದರ ಮೇಲೆ ಈ ಆ್ಯಪ್‌ ಕುಳಿತಿದೆ. ಈ ತೇರನ್ನು ಎಳೆದುಕೊಂಡು ವಿದ್ಯಾರ್ಥಿಗಳಿಗೆ ಮುಟ್ಟಿಸಬೇಕು. ಅದು ನಮ್ಮಿಂದಷ್ಟೆ ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ತೇರಿಗೆ ಎಲ್ಲರೂ ಹೆಗಲು ನೀಡಬೇಕು’ ಎಂದು ರಾಘವೇಂದ್ರ ರಾಜ್‌ಕುಮಾರ್‌ ತಿಳಿಸಿದರು.

‘ಶಾಲೆಗೇ ಹೋಗದ ನನಗೆ ಡಾಕ್ಟರೇಟ್‌ ಪದವಿ ಏತಕ್ಕಾಗಿ ಕೊಟ್ಟರೊ ಗೊತ್ತಿಲ್ಲ ಎಂದು ತಂದೆಯವರು ಆಗಾಗ ಹೇಳುತ್ತಿದ್ದರು. ಮಕ್ಕಳ ಪೈಕಿ ಯಾರಾದರೊಬ್ಬರೂ ವೈದ್ಯರಾಗಬೇಕೆಂಬುದು ಅವರ ಬಯಕೆಯಾಗಿತ್ತು. ಆದರೆ ನಾವೆಲ್ಲ ನಟನಾ ಕ್ಷೇತ್ರಕ್ಕೆ ಕಾಲಿಟ್ಟೆವು. ನಮ್ಮೆಲ್ಲರ ಕನಸನ್ನು ಅಣ್ಣನ ಮಗಳು ನನಸಾಗಿಸಿದ್ದಾಳೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.